Advertisement

ಬಂಟ್ವಾಳ ಅರಣ್ಯ ಇಲಾಖೆಯಿಂದ ಮರಗಳ ಸ್ಥಳಾಂತರ

09:41 PM Nov 05, 2020 | mahesh |

ಬಂಟ್ವಾಳ: ಸಾಮಾನ್ಯವಾಗಿ ರಸ್ತೆ ನಿರ್ಮಾಣ ಕಾಮಗಾರಿ ನಡೆಯುವ ವೇಳೆ ಅಲ್ಲಿ ಗಿಡ-ಮರಗಳಿದ್ದರೆ ಅವುಗಳನ್ನು ಕಡಿದು ಕಾಮಗಾರಿ ನಡೆಸಲಾಗುತ್ತದೆ. ಆದರೆ ಬಂಟ್ವಾಳದ ಅರಣ್ಯ ಇಲಾಖೆಯು ಕಡಿಯಬೇಕಿದ್ದ ಮರಗಳನ್ನು ಸ್ಥಳಾಂತರ ಕಾರ್ಯಕ್ಕೆ ಮುಂದಾಗಿದ್ದು, ಈಗಾಗಲೇ 25ಕ್ಕೂ ಅಧಿಕ ಮರ ಗಳನ್ನು ಸ್ಥಳಾಂತರ ಮಾಡಿ ಬೇರೆಡೆ ನೆಡಲಾಗಿದೆ.

Advertisement

ಉಳ್ಳಾಲ ಹಾಗೂ ಕೋಟೆ ಕಾರಿಗೆ ನೀರು ಪೂರೈಕೆ ಮಾಡುವ ದೃಷ್ಟಿಯಿಂದ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ಜಾಕ್‌ವೆಲ್‌ ಸಹಿತ ಘಟಕವನ್ನು ನಿರ್ಮಿಸಿ ನೇತ್ರಾವತಿ ನದಿಯಿಂದ ನೀರನ್ನು ಎತ್ತಲಾಗುತ್ತದೆ. ಇದಕ್ಕಾಗಿ ಆಲಾಡಿ ಯಿಂದ ರಸ್ತೆಯ ಬದಿ ಯಲ್ಲಿ ಪೈಪ್‌ಲೈನ್‌ ಕಾಮಗಾರಿ ನಡೆ ಯುತ್ತಿದೆ. ಕಾಮಗಾರಿಯ ವೇಳೆ ಅಡ್ಡಲಾಗಿರುವ ಮರಗಳನ್ನು ತೆಗೆದು ಸ್ಥಳಾಂತರ ಮಾಡಲಾಗುತ್ತದೆ.

ಘನತ್ಯಾಜ್ಯ ಘಟಕದಲ್ಲಿ ಆಶ್ರಯ
ಬಂಟ್ವಾಳ ವಲಯ ಅರಣ್ಯಾಧಿಕಾರಿ (ಬಂಟ್ವಾಳ ರೇಂಜ್‌) ವ್ಯಾಪ್ತಿಗೆ ಬರುವ ಮಾರ್ನಬೈಲ್‌-ಸಜೀಪ ಭಾಗದಲ್ಲಿ ರಸ್ತೆ ಬದಿಯಲ್ಲಿದ್ದ ಸುಮಾರು 25 ಮರಗಳನ್ನು ಸ್ಥಳಾಂತರ ಮಾಡಿ ಸಜೀಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ಬಂಟ್ವಾಳ ಪುರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನೆಡಲಾಗಿದೆ.

ಸ್ಥಳಾಂತರಗೊಂಡ ಗಿಡಗಳು ಸುಮಾರು 5 ವರ್ಷಗಳ ಹಿಂದೆ ಅರಣ್ಯ ಇಲಾಖೆಯ ಮೂಲಕ ನೆಟ್ಟ ಗಿಡಗಳಾಗಿದ್ದು, ಅವುಗಳನ್ನು ಜೆಸಿಬಿ ಮೂಲಕ ಬೇರು ಸಹಿತ ತೆಗೆದು ಬಳಿಕ ಲಾರಿಯಲ್ಲಿ ಸಾಗಾಟ ಮಾಡಲಾಗಿದೆ.

ಮರಗಳನ್ನು ನೆಡುವ ಪ್ರದೇಶದಲ್ಲೂ ಜೆಸಿಬಿಯಿಂದ ಹೊಂಡ ಮಾಡಿ ಮಣ್ಣು ಹಾಕಿ ಗಟ್ಟಿಯಾಗಿ ನೆಡಲಾಗಿದೆ. ಮರಗಳ ಬುಡದಲ್ಲಿ ನೀರು ನಿಲ್ಲುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗ ಸ್ಥಳಾಂತರ ಗೊಂಡ ಮರಗಳಿಗೆ ನೀರನ್ನೂ ಹಾಕ ಲಾಗುತ್ತಿದೆ. ಮುಂದೆ ಇನ್ನೂ ಕೆಲವೊಂದು ಮರಗಳನ್ನು ಸ್ಥಳಾಂತರ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಮರ ಕಡಿಯಲು ಅನುಮತಿ
ಪ್ರಸ್ತುತ ಈ ಭಾಗದಲ್ಲಿ ನಡೆಯುವ ಪೈಪುಲೈನ್‌ ಕಾಮಗಾರಿಯ ಸಂದರ್ಭದಲ್ಲಿ ಸ್ಥಳಾಂತರಗೊಳಿಸಲು ಸಾಧ್ಯವಾಗದೇ ಇರುವ ಮರಗಳನ್ನು ಕಡಿಯಲು ಇಲಾಖೆ ಅನುಮತಿ ನೀಡಿದೆ.

ಕಾಮಗಾರಿ ನಿರ್ವಹಿಸುವವರು ಅರಣ್ಯ ಇಲಾಖೆ ನಿಗದಿ ಪಡಿಸಿದ ಶುಲ್ಕವನ್ನು ಪಾವತಿಸಿ ಕಡಿದ ಮರದ ಡಿಪೋಗೆ ಸಾಗಿಸಬೇಕಾಗುತ್ತದೆ. ಈಗಾಗಲೇ ಸುಮಾರು 1.40 ಲಕ್ಷ ರೂ.ಗಳಷ್ಟು ಮೊತ್ತವನ್ನು ನಿಗದಿ ಪಡಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಕಂಚಿನಡ್ಕಪದವು ಘನತ್ಯಾಜ್ಯ ಘಟಕ ದಲ್ಲಿ ಇನ್ನೂ ಒಂದಷ್ಟು ಗಿಡಗಳನ್ನು ನೆಡುವ ಯೋಜನೆ ಇದ್ದು, ಬಂಟ್ವಾಳ ಹಾಗೂ ಮಂಗಳೂರು ಕ್ಷೇತ್ರದ ಶಾಸಕರ ನಿರ್ದೇಶನದಂತೆ ಅರಣ್ಯ ಇಲಾಖೆಯು ಗಿಡಗಳನ್ನು ನೆಡುವ ಕಾರ್ಯ ಮಾಡಲಿದೆ ಎನ್ನಲಾಗಿದೆ.

ಸ್ಥಳಾಂತರ ಕಾರ್ಯ ನಿರಂತರವಾಗಲಿ
ರಸ್ತೆ ವಿಸ್ತರಣೆ, ಕಟ್ಟಡ ನಿರ್ಮಾಣ, ಪೈಪುಲೈನ್‌ ಕಾಮಗಾರಿ ಹೀಗೆ ಹಲವು ಕಾರಣಗಳಿಗೆ ಮರಗಳನ್ನು ಕಡಿಯಲಾಗುತ್ತಿದ್ದು, ಮರ ಕಡಿಯುವ ಬದಲು ಇದೇ ರೀತಿ ಮರಗಳನ್ನು ಸ್ಥಳಾಂತರ ಮಾಡಿದಾಗ ಒಂದಷ್ಟು ಧನಾತ್ಮಕ ಮಾಹಿತಿ ರವಾನೆಯಾಗುತ್ತದೆ. ಯಾರು ಕಾಮಗಾರಿಯನ್ನು ನಿರ್ವಹಣೆ ಮಾಡುತ್ತಾರೋ ಅವರಿಂದಲೇ ಸ್ಥಳಾಂತರ ವೆಚ್ಚವನ್ನು ಭರಿಸುವ ಕಾರ್ಯವನ್ನೂ ಮಾಡಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಬಂಟ್ವಾಳ ರೇಂಜ್‌ನಲ್ಲಿ ಸ್ಥಳಾಂತರ
ಮಾರ್ನಬೈಲು ಸಜೀಪ ಭಾಗದಲ್ಲಿ ಪೈಪ್‌ಲೈನ್‌ ಕಾಮಗಾರಿಗಾಗಿ ನಮ್ಮ ರೇಂಜ್‌ ವ್ಯಾಪ್ತಿಯಲ್ಲಿದ್ದ ಮರಗಳನ್ನು ಬೇರು ಸಹಿತ ತೆಗೆದು ಕಂಚಿನಡ್ಕಪದವು ಘನತ್ಯಾಜ್ಯ ಘಟಕದಲ್ಲಿ ನೆಡಲಾಗಿದೆ. ಈ ಹಿಂದೆ ಶಾಸಕರು ಕೂಡ ಘನತ್ಯಾಜ್ಯ ಘಟಕದಲ್ಲಿ ಗಿಡಗಳನ್ನು ನೆಡುವುದಕ್ಕೆ ನಿರ್ದೇಶನ ನೀಡಿದ್ದರು. ಪೈಪ್‌ಲೈನ್‌ ಭಾಗದಲ್ಲಿ ಇರುವ ಸ್ಥಳಾಂತರಕ್ಕೆ ಅಸಾಧ್ಯವಾದ ಮರಗಳನ್ನು ಶುಲ್ಕ ಪಡೆದು ಕಡಿಯಲು ಅನುಮತಿ ನೀಡಲಾಗುತ್ತದೆ.
-ರಾಜೇಶ್‌ ಬಳಿಗಾರ್‌ ವಲಯ ಅರಣ್ಯಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next