ನವದೆಹಲಿ: ಮುಂಬರುವ 2024ರ ಲೋಕಸಭಾ ಚುನಾವಣೆಯ ವೇಳೆಗೆ ರಿಮೋಟ್ ವೋಟಿಂಗ್ ಸೌಲಭ್ಯವನ್ನು ಪರಿಚಯಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ( ಸಿಇಸಿ) ಸುನಿಲ್ ಅರೋರ, ರಿಮೋಟ್ ಓಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲು ಹಲವಾರು ತಯಾರಿಗಳು ನಡೆಯುತ್ತಿದ್ದು, ಮುಂದಿನ ಎರಡು ಮೂರು ತಿಂಗಳಲ್ಲಿ ಪ್ರಯೋಗಿಕವಾಗಿ ಈ ವ್ಯವಸ್ಥೆಯನ್ನು ಆರಂಭಿಸುವ ನಿರೀಕ್ಷೆ ಇದೆ ಹಾಗೂ ಮುಂಬರುವ 2024ರ ಲೋಕ ಸಭಾ ಚುನಾವಣೆಯ ವೇಳೆಗೆ ಈ ರಿಮೋಟ್ ವೋಟಿಂಗ್ ಅನ್ನು ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ:ಸಮಸ್ಯೆ ಆಲಿಸಿ ಗ್ರಾಮದಲ್ಲಿ ತಂಗಿದ ಚಾಮರಾಜನಗರ ಡೀಸಿ
ಮತದಾನದ ಸಮಯದಲ್ಲಿ ಯಾರಿಗೆ ದೂರದ ಪ್ರದೇಶದಲ್ಲಿದ್ದು ಅನಿವಾರ್ಯವಾಗಿ ತಮ್ಮ ಮತಗಟ್ಟೆಗೆ ತೆರಳಿ ಮತದಾನದ ಹಕ್ಕನ್ನು ಚಲಾಯಿಸಲು ಸಾಧ್ಯವಾಗುವುದಿಲ್ಲವೋ ಅಂತಹ ವ್ಯಕ್ತಿಗಳಿಗೆ ಈ ಯೋಜನೆಯಿಂದ ಬಹಳ ಉಪಯೋಗವಾಗಲಿದೆ ಎನ್ನಲಾಗಿದ್ದು, ಈ ತಂತ್ರಜ್ಞಾನದ ಮೂಲಕ ತಾವು ಇರುವ ಸ್ಥಳದಿಂದಲೇ ಮತದಾನ ಮಾಡಿ ತಮ್ಮ ಮತಚಲಾವಣೆಯ ಹಕ್ಕನ್ನು ಚಲಾಯಿಸಬಹುದಾಗಿದೆ.
ಈ ಹೊಸ ತಂತ್ರಜ್ಞಾನ ವ್ಯವಸ್ಥೆಯ ಕುರಿತಾಗಿ ಮಾಹಿತಿ ನೀಡಿರುವ ಚುನಾವಣಾ ಆಯೋಗ, ಹಲವಾರು ತಂತ್ರಜ್ಞರ ತಂಡ ಹಾಗೂ IIT ಯ ತಜ್ಞರು ಸೇರಿಕೊಂಡು ಈ ಹೊಸ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿದ್ದು, ಇನ್ನು ಎರಡರಿಂದ ಮೂರು ತಿಂಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು ಎಂದಿದ್ದಾರೆ.