Advertisement

ವಿಶಿಷ್ಟಾನುಭವದ ರೆಮೋನಾ ರಂಗ ಪ್ರವೇಶ

06:24 PM Dec 05, 2019 | mahesh |

ಭರತನಾಟ್ಯದ ರೇಖಾ ಚಿತ್ರವೊಂದು ಜ್ಯಾಮಿತೀಯವಾಗಿ ಚಲನೆಗಳನ್ನು ಸುತ್ತೆದ್ದು ಅದಕ್ಕೆ ಛಂದೋಭಂಗಿಗಳ ನಿಲುವುಗಳನ್ನು ಹೆಣೆದು, ಭಾವರಸದ ಜೀವಕೊಟ್ಟ ಶಿಲಾಬಾಲಿಕೆ, ರಂಗ ಪ್ರವೇಶಿಸಿ, ಸಹೃದಯನ ಅಂತರಂಗ ಪ್ರಭೇದಿಸಿದಂತೆ ಆದದ್ದು ಇತ್ತೀಚೆಗೆ ಪುರಭವನದಲ್ಲಿ ನಡೆದ ಕು| ರೆಮೋನಾ ಇವೆಟ್‌ ಪಿರೇರಾ ರಂಗಪ್ರವೇಶದಲ್ಲಿ. ಭಾವಜೀವಿಗೆ ಆ ನೃತ್ಯ ಸಾರದಲ್ಲಿ ವಿಭಾವಾನುಭಾವದ ಸತ್ವಾನುಭವ ವಾದರೆ, ಸೌಂದರ್ಯೋಪಾಸಕನಿಗೆ ಅಲ್ಲಿ ಹೆಜ್ಜೆ ಹೆಜ್ಜೆಗೂ ಚಿತ್ತವನ್ನು ತಟ್ಟುವ, ಕಣ್ಮನ ತಣಿಸುವ ಸುಂದರ ಅಡವುಗಳ ಅನಾವರಣ. ಸಂಗೀತ ಪ್ರಿಯರಿಗೆ ಅಪ್ಯಾಯಮಾನ ಹಿಮ್ಮೇಳದ ಸಂಗೀತ ರಸಧಾರೆ. ಇವಾವುದರ ಗೊಡವೆ ಇಲ್ಲದೆ ನೃತ್ಯಾಸ್ವಾದಿಸಲು ಬಂದವರಿಗೆ, ಸಾಧನೆಯ ಕುರುಹಾಗಿ ಕಲಾವಿದೆಗೆ ಸಿಕ್ಕ ಸ್ಮರಣಿಕೆಗಳ ಮಹಾಪೂರದ ದರ್ಶನ.

Advertisement

ಸ್ಪುಟವಾದ ವೇಗ, ತುರಗದಂತೆ ಪುಷ್ಪಾಂಜಲಿ ಪ್ರಾರಂಭವಾಗಿ ವಾಸಂತಿ ರಾಗದ ನೃತ್ಯ ವಸಂತಕ್ಕೆ ಮುನ್ನುಡಿ ಬರೆಯಿತು. ಅದರಲ್ಲಿನ ಅಷ್ಟದಿಕಾ³ಲಕರಿಗೆ ಪುಷ್ಪಾರ್ಚನೆ, ಬ್ರಹ್ಮಸ್ಥಾನದಲ್ಲಿ ಅಂಗಹಾರ ಪೂಜಾ ಕೈಂಕರ್ಯ, ಆ ಪುಣ್ಯಸ್ಥಾನದಲ್ಲಿ ಮುಂದೆ ನಡೆಯ ಬೇಕಾದ ಪ್ರಸ್ತುತಿಗಳ ಹೂರಣಕ್ಕೆ ಪ್ರಾಂಗಣ ತೆರೆದುಕೊಂಡಿತು.

ಮಯೂರವನ್ನು ನಾಚಿಸುವಂತೆ ಆಂಗಿಕಾಭಿನಯ ಚಲನೆಯ ಮುಂದಿನ ಪ್ರಸ್ತುತಿ ನವಿಲಾಲರಿಪು. ಮಿಶ್ರಗತಿಯ ಮಂದಗಮನದಲ್ಲಿ ಮಯೂರೀ ಗತಿಯಿಟ್ಟ ಆ ನವಿಲು, ಷಣ್ಮುಖ ವಾಹನ ಎಂಬುದು ನಾಂದಿಯಾಗಿ ಶರವಣ ಕೌತ್ವಂ, ಷಣ್ಮುಖಪ್ರಿಯ ರಾಗ, ರೂಪಕ ತಾಳದಲ್ಲಿ ಮೂಡಿ ಬಂದಾಗ, ಸು#ಟವಾದ ನಟವಾಂಗದ ಹಿಡಿತದಲ್ಲಿ, ದೃತಗತಿಯ ಸೂರಸಂಹಾರ ಚೇತೋಹಾರಿಯಾಗಿ ಮೂಡಿತು. ಇದು ಮಧುರೈ ಆರ್‌. ಮುರಳೀಧರನ್‌ರವರ ರಚನೆ ಆಗಿತ್ತು. ರಂಗಪ್ರವೇಶದ ಅಪರೂಪದ ಪ್ರಸ್ತುತಿ – ಸ್ವರಜತಿ. ಭೈರವಿ ರಾಗ, ಮಿಶ್ರಛಾಪು ತಾಳ. ಶ್ಯಾಮಾ ಶಾಸ್ತ್ರಿಗಳ ರಚನೆಯ ಈ ಅತ್ಯಪೂರ್ವ ಕೃತಿಯಲ್ಲಿ ಕಂಚಿಯ ಕಾಮಾಕ್ಷಿಯನ್ನು ವಾಗ್ಗೇಯಕಾರರು ನವಿರಾಗಿ ವರ್ಣಿಸಿದ್ದಾರೆ. ವಿಶಿಷ್ಟ ಎಂದರೆ ಮೇಲತ್ತೂರು ಶೈಲಿಯಲ್ಲಿನ ದೊಡ್ಡ ಮಡಕೆಯ ಮೇಲೆ ನಿಂತು ನರ್ತಿಸುವ ಪ್ರಯೋಗದಲ್ಲಿ ಸ್ವರಜತಿ ಸೊಗಸಾಗಿ ನೃತ್ಯ ಸಂಯೋಜನೆಗೊಂಡಿತ್ತು. ಪದ್ಮಾಸನಸ್ಥಿತೇ ಕಂಚಿ ಕಾಮಾಕ್ಷಿ, ಆ ಭವ್ಯ ಮಡಕೆಯಲ್ಲಿ ರಮಣೀಯ ವಾಗಿ ಸ್ಥಿತಳಾದಳು.

ಭರತನಾಟ್ಯದ ಮಾರ್ಗಂ ಪದ್ಧತಿಯ ಮುಖ್ಯಪ್ರಾಣ ವರ್ಣಂ, ಪ್ರಥಮ ಬಾರಿಗೆ, ಶಿವಶರಣೆಯರ ವರ್ಣಂ, ಕನ್ನಡದಲ್ಲಿ ಬೆಂಗಳೂರಿನ ಸುಗ್ಗನಹಳ್ಳಿ ಷಡಕ್ಷರಿಯವರ ರಚನೆಯನ್ನು ಆಯ್ದು ಕೊಳ್ಳಲಾಗಿತ್ತು. ನಾಯಕ ನಾಗಿ ಪರಮೇಶ್ವರನನ್ನು ಹಂಬಲಿಸುವ ಶಿವಶರಣೆ, ತನ್ನ ಮನೋಭಿಲಾಷೆ ಯನ್ನು ವಿಸ್ತರಿಸುತ್ತಾ, ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿಯವರ ಲಿಂಗೈಕ್ಯದ ಮಹತ್ವ ವನ್ನು ಎಳೆಎಳೆಯಾಗಿ ಅಭಿನಯಿಸಿದ ಪರಿ ರೆಮೋನಾರ ವಯಸ್ಸಿಗೆ ಮೀರಿದ್ದಾಗಿತ್ತು. ಸಾಹಿತ್ಯಾಭಿನಯದ ಮಧ್ಯೆ ಹೆಣೆದುಕೊಂಡ ಕ್ಲಿಷ್ಟ ಅಡವುಗಳ ಶೃಂಖಲೆ, ಗುರು ಡಾ| ಶ್ರೀವಿದ್ಯಾರ ನೃತ್ಯ ಸಂಯೋಜನೆಯ ಚಾತುರ್ಯವನ್ನು ಪ್ರತಿಧ್ವನಿಸಿತು.

Advertisement

ಎರಡನೆಯ ಭಾಗದಲ್ಲಿ ಪುರಂದರದಾಸರ ದೇವರನಾಮ ಜಗಸನ್ಮೋಹನೇ – ಇಲ್ಲಿ ಮೋಹಿನಿ ಭಸ್ಮಾಸುರ, ಬಲಿ ವಾಮನರ ಕಥಾವೃತ್ತಾಂತವನ್ನು ಮನಮುಟ್ಟುವಂತೆ ಅಭಿನಯಿಸಿದರು. ಕಾನಡ ರಾಗದ ಆದಿತಾಳದ, ಉತ್ತುಕಾಡು ವೆಂಕಟಸುಬ್ಬಯ್ಯರ್‌ರವರ ರಚನೆಯಾದ ಅಲೈಪಾಯುದೇ ಮುಂದುವರೆದು ಮಧುರೈ ಆರ್‌. ಮುರಳೀಧರನ್‌ ರವರ ರಚನೆಯಾದ ನಾಟರಾಗದ ಕಾಳಿಂಗ ನರ್ತನ ತಿಲ್ಲಾನದಲ್ಲಿ ರಂಗಪ್ರವೇಶ ನೃತ್ಯ ಪ್ರಸ್ತುತಿಗೆ ತೆರೆ ಎಳೆಯಿತು. ಸಹೃದಯದ ಮನೋಪಟಲದಲ್ಲಿ ಶ್ರೀ ಕೃಷ್ಣ – ಕಾಳಿಂಗರು ನೃತ್ಯದಲ್ಲೇ ಯುದ್ಧ, ಅಭಿನಯದಲ್ಲೇ ಸೆಣಸಾಟ, ಭಂಗಿಗಳಲ್ಲೇ ಹೋರಾಟ, ಒಂದೊಮ್ಮೆ ಸಂಗೀತ ಮತ್ತೂಮ್ಮೆ ಗದ್ಯದ ಜಗ್ಗಾಟ, ನಟವಾಂಗ ಮತ್ತು ಹಾಡುಗಾರಿಕೆಯೊಳಗಿನ ಒಡನಾಟ, ತಿಲ್ಲಾನ ಸಂರಚನೆಯ ವಿಶಿಷ್ಟತೆಯಾಗಿತ್ತು.

ನವೀನ್‌ ಎಲ್ಲಂಗಳ

Advertisement

Udayavani is now on Telegram. Click here to join our channel and stay updated with the latest news.

Next