ಗಿನಿಂದಲೇ ಶಾಲೆಗಂಟಿಕೊಂಡವರು.
Advertisement
ಎಷ್ಟೋ ಸಲ ನಾನು ಶಾಲೆಗೆ ಬರುವ ಹೊತ್ತಿಗೆ ಪ್ರಾರ್ಥನೆ ಮುಗಿದುಬಿಟ್ಟಿರುತ್ತಿತ್ತು. ಆಗ ನಿಧಾನಕ್ಕೆ ಒಂದೊಂದೇ ಕ್ಲಾಸಿನ ಬಾಗಿಲಿಗೆ ಮರೆಯಾಗಿ ನಿಂತು, ಒಳಗೆ ಹೊಸ ಪಾಠವೇನಾದರೂ ನಡೆಯುತ್ತಿದೆಯಾ? ಎಂದು ಕಿವಿಗೊಡುತ್ತಿದ್ದೆ. ಇಷ್ಟವಾದರೆ ಮುಗಿಯಿತು, ನಾನು ಆ ತರಗತಿಯವಳೇ ಎನ್ನುವಂತೆ ಆರಾಮಾಗಿ ಕುಳಿತುಬಿಡುತ್ತಿದ್ದೆ. ಹಾಗಾಗಿ, ಒಂದೇ ನೋಟುಬುಕ್ಕಿನಲ್ಲಿ ಒಂದರಿಂದ ನಾಲ್ಕನೇ ಕ್ಲಾಸಿನತನಕವೂ ನೋಟ್ಸ್ ಇರುತ್ತಿದ್ದವು. ಆದರೂ ನನ್ನ ಗೆಳತಿಯರ ಬಳಿ ಇರುತ್ತಿದ್ದ, ಕ್ಷಣಕ್ಷಣಕ್ಕೂ ಅಳಿಸಿ ಬರೆಯಬಹುದಾದ ಸ್ಲೇಟೆಂಬ ಆ ಪುಟ್ಟ ಕಪ್ಪು ಮಾಯಕದ ಬಗ್ಗೆಯೇ ಹೆಚ್ಚು ಸೆಳೆತವಿರುತ್ತಿತ್ತು. ಆಗ ಹೊಸತು ಎನ್ನಿಸಿಕೊಂಡಿದ್ದ ಬಣ್ಣದ ಪ್ಲಾಸ್ಟಿಕ್ ಚೌಕಟ್ಟುಳ್ಳ, ಹಗೂರವಾದ, ಬೀಸಿ ಒಗೆದರೂ ಮಣಿಸಿದರೂ ಮುರಿಯದ ಮತ್ತು ಬಲು ಬೇಗ ಎದೆಯುಬ್ಬಿಸಿಕೊಂಡು ನಿಲ್ಲುತ್ತಿದ್ದ ತಗಡು-ರಟ್ಟಿನ ಸ್ಲೇಟುಗಳು ಯಾಕೋ ಹಿಡಿಸುತ್ತಿರಲೇ ಇಲ್ಲ. ಆದರೆ, ಕಟ್ಟಿಗೆಯ ಚೌಕಟ್ಟಿನ, ವಜನುಳ್ಳ, ತಂಪುಳ್ಳ, ನುಣಪುಳ್ಳ ಎಚ್ಚರತಪ್ಪಿ ಕೈಬಿಟ್ಟಾಗಲೂ ಚೂರುಗಳನ್ನು ನೆಲಕ್ಕಂಟಿಸಿಕೊಂಡೇ ಇರುತ್ತಿದ್ದ ಕಲ್ಲಿನ ಸ್ಲೇಟುಗಳು ಹೆಚ್ಚು ಆಪ್ತವೆನ್ನಿಸುತ್ತಿದ್ದವು. ನೋಟುಬುಕ್ಕಿನಂತೆ ನನ್ನ ಸ್ವಂತದ ಲಿಸ್ಟಿಗೆ ಕಲ್ಲಿನ ಸ್ಲೇಟು ಸೇರಿಬಿಟ್ಟಿದ್ದರೆ ಹೀಗಿಲ್ಲಿ ಅದು ತೇವ ಕಾಯ್ದುಕೊಳ್ಳುತ್ತಿರಲಿಲ್ಲವೇನೋ.
Related Articles
Advertisement
ಆಗೆಲ್ಲ ನಾನಿದ್ದ ಜಾಗಕ್ಕೇ ಬಂದು ನನ್ನನ್ನು ಎತ್ತಿಕೊಂಡು ಥೇಟ್ ಅಮ್ಮನಂತೆ ರಮಿಸಿ ಕಪ್ಪು ಹಲಗೆಯ ಬಳಿ ನಿಲ್ಲಿಸಿ ಹಾಡಿಸಿ ಹಗೂರಗೊಳಿಸುತ್ತಿದ್ದರು ನಮ್ಮ ಇಂಗ್ಲಿಷ್-ವಿಜ್ಞಾನದ ಶ್ರೀಧರ ಕಡಕೋಳ ಸರ್, ಮುಂದೊಂದು ದಿನ ಹಾರ್ಮೋನಿಯಂ ನುಡಿಸುತ್ತೇನೆನ್ನುವುದೂ ಗೊತ್ತಾಗಿ, ಪ್ರತೀದಿನದ ಪ್ರಾರ್ಥನೆಗೆ ಹಾರ್ಮೋನಿಯಂ ನುಡಿಸುವ ಜವಾಬ್ದಾರಿಯನ್ನೂ ವಹಿಸಿಬಿಟ್ಟರು. ಅದಾಗಲೇ ತಿಂಗಳಿಗೆ ಏನಿಲ್ಲವೆಂದರೂ ನಾಲ್ಕೈದು ಸಂಗೀತ ಕಛೇರಿಗಳನ್ನು ಕೊಡುವುದು ಮಾಮೂಲಾಗಿತ್ತು, ಜೊತೆಗೆ ಪತ್ರಿಕೆಗಳಲ್ಲಿ ಅದು ಪ್ರಕಟವಾಗುವುದೂ.
ಹೀಗಿರುವಾಗಲೇ ಐದು ಮುಗಿದು ಆರನೇ ತರಗತಿಯೂ ಬಂದಿತು. ನಮ್ಮ ಗಣಿತದ ಶಿಕ್ಷಕಿಯೊಬ್ಬರು ನನ್ನನ್ನು ವಿಶೇಷವಾಗಿ ಗಮನಿಸಿಕೊಳ್ಳತೊಡಗಿದರು. ಸಣ್ಣ ತಪ್ಪು ಹುಡುಕಿ ಆಗಾಗ ವಿನಾಕಾರಣ ಅವಮಾನಿಸುವುದು ಮತ್ತು ವಾರಕ್ಕೆರಡು ಸಲವಾದರೂ ನನ್ನ ಮುಂಗೈಗೆ ಕಟ್ಟಿಗೆಯ ಫೂಟುಪಟ್ಟಿಯ ಅಂಚಿನಿಂದ ಬಲವಾಗಿ ಏಟು ಕೊಡುವುದು. ಇಷ್ಟೇ ಅಲ್ಲ ಆಗಾಗ ಸಂಜೆ ಏಳರ ತನಕ ಶಾಲೆಯಲ್ಲೇ ಕೂರಿಸಿ ಮಾಡಿದ ಲೆಕ್ಕವನ್ನೇ ಮಾಡಿಸಲು ಮಾನಿಟರ್‌ಗೆ ಹೇಳುವುದು ಮಾಮೂಲಾಯಿತು. ಆಗೆಲ್ಲಾ ಊರಿನ ಬಸ್ಸು ಹತ್ತಿ ಮನೆಗೆ ಬರುವಾಗ ರಾತ್ರಿ ಒಂಬತ್ತಾಗಿಬಿಡುತ್ತಿತ್ತು. ಏನಾದರೇನು ಮಳೆಗಾಲ-ಚಳಿಗಾಲ ನಮಗಾಗಿ ನಿಂತಾವೆಯೇ? ತಡವಾದಾಗೆಲ್ಲ ಕೆಲವೊಮ್ಮೆ ಸಂಗೀತಾಭ್ಯಾಸ ತಪ್ಪಿಬಿಡುತ್ತಿತ್ತು. ಅದು ಒಳಗೊಳಗೇ ನನ್ನನ್ನು ಕೊರೆಯುತ್ತಿದ್ದರೂ ಆರೂ ವಿಷಯಗಳ ಹೋಮ್‌ವರ್ಕ್ ಮಾಡಲೇಬೇಕಿತ್ತು. ಕೊನೆಯಲ್ಲಿ ಲೆಕ್ಕ ಬಿಡಿಸುತ್ತ ಕಣ್ಣುಕ್ಕುತ್ತಿದ್ದಾಗ, “ನನಗೆ ನೀರು ಕುಡಿದಂತಿರುವ ಗಣಿತ ನಿನಗ್ಯಾಕೆ ಹೀಗೆ?’ ಹನ್ನೆರಡಕ್ಕೆ ಸಮೀಪಿಸುತ್ತಿದ್ದ ಸಣ್ಣ ಮುಳ್ಳನ್ನು ನೋಡುತ್ತ ಕೇಳುತ್ತಿದ್ದ ಅಮ್ಮನಿಗೆ ಆಗ ಏನು ಹೇಳಬೇಕೆಂದು ತಿಳಿಯುತ್ತಿರಲಿಲ್ಲ. ಆ ಮೊದಲು ನನ್ನೊಳಗೂ ನೀರಿನಂತೆ ಹರಿಯುತ್ತಿದ್ದ ಗಣಿತ ನಿಧಾನ ಬತ್ತುತ್ತ ಹೋಯಿತು.
ಅಂದ ಹಾಗೆ ಆ ಫೂಟುಪಟ್ಟಿಯ ಮೇಲೆ ಒಂದು ಬದಿ ಅಂಕಿಗಳೂ ಸವೆದೇ ಹೋಗಿದ್ದವು. ವಿಷಯ ಇಷ್ಟೇ… ಗಣಿತದ ಟೀಚರಿಗೆ ನನಗಿಂತಲೂ ಹತ್ತು-ಹನ್ನೆರಡು ವರ್ಷ ದೊಡ್ಡ ಮಗಳಿದ್ದಳು ಮತ್ತು ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದಳು. ರೇಡಿಯೋದಲ್ಲಿ ಅವಳ ಸಂಗೀತ ಕೇಳಿದ್ದು ಬಿಟ್ಟರೆ, ಪತ್ರಿಕೆಗಳಲ್ಲಿ ಅವಳ ಬಗ್ಗೆ ಓದಿದ್ದು ಬಿಟ್ಟರೆ ಮುಖತಃ ನನಗವಳ ಪರಿಚಯವೇ ಇರಲಿಲ್ಲ. ಮುಂದೊಂದು ದಿನ ಮಠವೊಂದರಲ್ಲಿ ಒಂದೇ ವೇದಿಕೆಯಲ್ಲಿ ಅವಳೂ ಹಾಡಿದಳು, ನಾನೂ ಹಾಡಿದೆ. ಅವಳ ಗಾಯನ ಕೇಳಿ ಬಹಳೇ ಖುಷಿಪಟ್ಟೆ. ನಂತರ ಒಟ್ಟಿಗೇ ಕುಳಿತು ಊಟ ಮಾಡುವಾಗ ಟೀಚರಿಗೆ ನಮಸ್ಕರಿಸಲು ನಾನದೆಷ್ಟೇ ಕಣ್ಣು ಕೊಡಲು ಪ್ರಯತ್ನಿಸಿದರೂ ಅವರು ಮುಖ ಕೊಡಲೇ ಇಲ್ಲ.
ಮುಂದೆ ನಾನು ಪತ್ರಿಕೋದ್ಯಮಕ್ಕಾಗಿ ಬೆಂಗಳೂರಿಗೆ ಬಂದೆ. ವಿಶೇಷ ಕಾಳಜಿ ವಹಿಸಿ, ಅವರ ಮಗಳನ್ನು ಟಿವಿಯಲ್ಲಿ ಸಂದರ್ಶಿಸಿದೆ, ಅವಕಾಶ ಸಿಕ್ಕಾಗೆಲ್ಲ ಅವಳ ವಿದ್ವತ್ತಿನ ಬಗ್ಗೆ ಪತ್ರಿಕೆಗಳಲ್ಲಿ ದಾಖಲಿಸಿದೆ; ಪ್ರತಿಭೆ ಗೌರವಿಸಿ ಮತ್ತು ನನ್ನೊಳಗಿನ ಸಂಗೀತದ ಪ್ರೀತಿಗೆ ಕರಗಿ ಅಪರೂಪಕ್ಕೆ ಎದುರಿಗೆ ಸಿಕ್ಕಾಗಲೋ ಫೋನಿನಲ್ಲೋ ಇಂದಿಗೂ ಆ ಗಣಿತ ಟೀಚರ್ ಮಗಳು ಗೌರವ, ಆತ್ಮೀಯತೆಯಿಂದ ಮಾತನಾಡಿಸುತ್ತಾರೆ, ಪಾಪ! ಅವರಿಗೆ ಫೂಟುಪಟ್ಟಿಯ ಕಥೆ ಗೊತ್ತೇ ಇಲ್ಲ. ಈ ಅಕ್ಷರಲೋಕದೊಂದಿಗೆ ನಂಟು ಬೆಳೆಸಿಕೊಳ್ಳಲು ಕಾರಣವಾದ ಆ ಫೂಟುಪಟ್ಟಿಗೆ, ಅದರೊಡತಿಗೆ ಹೀಗೆ ಇಲ್ಲಿಂದಲೇ ಮನಃಪೂರ್ವಕ ನಮಸ್ಕಾರ.
-ಶ್ರೀದೇವಿ ಕಳಸದ