ಹುಣಸೂರು: ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಸಣ್ಣಪುಟ್ಟ ಸಮಾಜದವರಿಗೆ ರಾಜಕೀಯ ಅಧಿಕಾರ ಕಲ್ಪಿಸುವ ಮೂಲಕ ಮುಖ್ಯವಾಹಿನಿಗೆ ತಂದ ಡಿ.ದೇವರಾಜ ಅರಸು ರಾಷ್ಟ್ರ ಕಂಡ ಧೀಮಂತ ನಾಯಕ ಎಂದು ಶಾಸಕ ಎಚ್.ಪಿ.ಮಂಜುನಾಥ್ ಬಣ್ಣಿಸಿದರು.
ಅರಸು 39ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದ ಎಪಿಎಂಸಿ ಎದುರಿನ ಅರಸು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಹುಟ್ಟೂರು ಕಲ್ಲಹಳ್ಳಿಯ ಅರಸರ ಸಮಾಧಿಗೆ ಪುಷ್ಪನಮನ ಸಮರ್ಪಿಸಿ ಮಾತನಾಡಿದ ಶಾಸಕರು, ಜನಪರ ಕಾಳಜಿಯನ್ನಿಟ್ಟುಕೊಂಡು ಕೆಲಸ ಮಾಡಿದ ಪರಿಣಾಮ ಅನೇಕ ಶೋಷಿತ ಸಮಾಜದ ಮಂದಿ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ಗಿಟ್ಟಿಸಿದ್ದಾರೆ. ಇವರು ಹುಣಸೂರಿನವರು ಎಂಬುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.
ನಗರದಲ್ಲಿ ನಿರ್ಮಿಸುತ್ತಿರುವ ಅರಸು ಭವನ ಶೀಘ್ರ ಪೂರ್ಣಗೊಳ್ಳಲಿದ್ದು, ಉಳಿಕೆ ಕಾಮಗಾರಿ, ಒಳಾಂಗಣದ ಪೀಠೊಪಕರಣಕ್ಕಾಗಿ 2.5 ಕೋಟಿ ರೂ. ಅನುದಾನ ಬಳಸಲು ಆದೇಶಿಸಲಾಗಿದೆ ಎಂದು ಶಾಸಕರು ಮಾಹಿತು ನೀಡಿದರು.
ಈ ವೇಳೆ ನಗರಸಭಾಧ್ಯಕ್ಷೆ ಅನುಷಾ ಉಪಾಧ್ಯಕ್ಷ ದೇವನಾಯ್ಕ, ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ, ತಹಶೀಲ್ದಾರ್ ಬಸವರಾಜು, ತಾಪಂ ಇಒ ಗಿರೀಶ್, ಪೌರಾಯುಕ್ತ ರಮೇಶ್, ತಾಲೂಕು ಬಿಸಿಎಂ ಅಧಿಕಾರಿ ಎಸ್.ಎಸ್.ಸುಜೇಂದ್ರ ಕುಮಾರ್, ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಸದಸ್ಯ ರಾಜಶೇಖರ್, ಪಿಡಿಒ ಅರುಣ್ ಕುಮಾರ್, ಕಲ್ಲಹಳ್ಳಿ ಶಿವಬಸಪ್ಪ, ತಾಪಂ ಮಾಜಿ ಉಪಾಧ್ಯಕ್ಷ ಚಿನ್ನವೀರಯ್ಯ, ಮುಖಂಡರಾದ ಮಂಜು, ರಮೇಶ್ ಸೇರಿದಂತೆ ಮತ್ತಿತರರಿದ್ದರು.
ಸಣ್ಣ ನೀರಾವರಿ ಕಾಮಗಾರಿ ಪೂರ್ಣ :
ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕಿನ ದೊಡ್ಡಹೆಜ್ಜೂರು, ನಾಗಾಪುರ, ಚೋಳೇನಹಳ್ಳಿ ಹಾಗೂ ಮರದೂರು ಏತ ನೀರಾವರಿ ಯೋಜನೆಯ ಕಾಮಗಾರಿ ಪೂರ್ಣಗೊಂಡಿದ್ದು,ಲಾಕ್‌ಡೌನ್ ಬಳಿಕ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.