Advertisement
ಮೆಲುಕು: ಎಸ್.ಎನ್.ಚನ್ನಬಸಪ್ಪ,ಶಿವಮೊಗ್ಗ ಶಾಸಕ
Related Articles
ಕರಸೇವೆ ನಡೆಯುವ ಜಾಗ ವಿವಾದ ರಹಿತವಾಗಿತ್ತು. ಕಾರ್ಯಕ್ರಮ ಮುಗಿಯುವವರೆಗೂ ಅಲ್ಲೇ ಇರಬೇಕಿತ್ತು. ಕರಸೇವೆ ನಡೆಯಬೇಕು ಅಷ್ಟೇ. ನನಗೆ ಆಯಕಟ್ಟಿನ ಜಾಗದಲ್ಲಿ ನಿಲ್ಲಿಸಿದ್ದರು. ಅಲ್ಲಿಂದಲೇ ಎಲ್ಲರೂ ಕರಸೇವೆ ಜಾಗಕ್ಕೆ ಹೋಗಬೇಕಿತ್ತು. ಯಾರನ್ನು ಒಳಗೆ ಬಿಡಬೇಕೆಂಬ ಪಟ್ಟಿ ಕೊಟ್ಟಿದ್ದರು. ಅಶೋಕ್ ಸಿಂಘಾಲ್, ಉಮಾ ಭಾರತಿ, ಪೇಜಾವರ ಶ್ರೀಗಳು ಬಂದರು. ಬಂದವರನ್ನೆಲ್ಲ ಒಳಗೆ ಬಿಟ್ಟೆವು. ಅನಂತರ ಪೂಜೆ ಶುರುವಾಯ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ದೊಡ್ಡ ಸೈನ್ಯ ಬಂತು. ದೊಡ್ಡ ಮೆರವಣಿಗೆ. ತೆಲುಗಿನಲ್ಲಿ ಘೋಷಣೆ ಕೂಗು ತ್ತಿದ್ದರಿಂದ ಅವರು ಆಂಧ್ರದ ತಂಡ ಎಂದು ತಿಳಿಯಿತು. ಕಣ್ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ವಿವಾದಿತ ಜಾಗದ ಮೇಲೆ ಹತ್ತಿ ಕುಣಿದು ಕುಪ್ಪಳಿಸಿದರು. ನಾನೂ ಸಹ ಒಳಗೆ ನುಗ್ಗಿದೆ. ಜೀವನದಲ್ಲಿ ಮೊದಲ ಬಾರಿ ಸಂಘದ ಸೂಚನೆ ಉಲ್ಲಂಘನೆ ಮಾಡಿದ್ದೆ.
Advertisement
ಮುಲಾಯಂ ಸಿಂಗ್ ಅಂದು ಬೇಲಿ ಹಾಕಿದ್ದರಿಂದಲೇ ನಮಗೆ ಹತಾರಗಳು (ಆಯುಧ) ಸಿಕ್ಕವು. ಬೇಲಿಯನ್ನೇ ಮುರಿದು ಮೊದಲು ಹೊಸಿಲನ್ನು ಒಡೆದೆವು. ಒಳಗೆ ಪೂರ್ತಿ ಪದ್ಮ ಕಮಲ. ಚಿತ್ತಾರಗಳು ಇದ್ದವು. ಯಾವುದೇ ಹಾನಿಯಾಗಿರಲಿಲ್ಲ. ದೊಡ್ಡ ದೊಡ್ಡ ಗೋಡೆಗಳು ಇದ್ದವು. ಒಡೆದು ಒಡೆದು ತೆಗೆದರೆ ಒಳಗಿದ್ದ ವಾಲ್ ಪೇಟಿಂಗ್ ಕಣ್ಣಿಗೆ ಕಟ್ಟಿದಂತಿವೆ ಈಗಲೂ. ಬಿದ್ದರೆ ನಮ್ಮ ಮೇಲೆ ಬೀಳಲಿ ಎಂದು ಕಟ್ ಮಾಡುತ್ತಿದ್ದೆವು. ಯಾವುದೇ ಸ್ಫೋಟಕ ಇಲ್ಲ , ಎಂತದ್ದೂ ಇಲ್ಲ. ಬರಿಗೈನಲ್ಲಿ ಸಿಕ್ಕ ಬೇಲಿ ಗೂಟಗಳಿಂದಲೇ ಉರುಳಿಸುತ್ತಿದ್ದೆವು. ಯಾರ ಬಳಿಯೂ ಯಾವುದೇ ಹತಾರ ಇರಲಿಲ್ಲ. ಈ ರೀತಿ ಮಾಡಬೇಕೆಂಬ ಕಲ್ಪನೆಯೂ ಇರಲಿಲ್ಲ. ಅಲ್ಲಿದ್ದ ರಾಮನ ಮೂರ್ತಿಯನ್ನು ಕೈನಲ್ಲೆ ಎತ್ತಿಕೊಂಡು ಬಂದು ಹೊರಗೆ ಇಟ್ಟೆವು. ಪೇಜಾವರ ಶ್ರೀಗಳು ಅದನ್ನು ಒಂದು ಕಡೆ ಇಡುವ ಪ್ರಯತ್ನ ಮಾಡಿದರು. ವಿವಾದಿತ ಕಟ್ಟಡ ಧ್ವಂಸ ಆಯ್ತು.
ಅಕ್ಕಪಕ್ಕದ ಗೋಡೆ, ಮಧ್ಯದ ಗೋಡೆ ಸಹ ಬಿತ್ತು. ರಾಮನ ವಿಗ್ರಹ ಇದ್ದ ಸ್ಥಳದಲ್ಲಿ ಕೆಲವು ಯುವಕರು ಮಂಡಿಯೂರಿ ಮಲಗಿದ್ದರು. ಗೋಡೆ ಬೀಳುತ್ತಿದ್ದರೂ ಎದ್ದು ಬರುತ್ತಿರಲಿಲ್ಲ. ರಾಮ ಇದ್ದ ಜಾಗ ಇದು, ಈ ಜಾಗಕ್ಕೆ ಯಾವುದೇ ಕಾರಣಕ್ಕೂ ತೊಂದರೆಯಾಗಬಾರದು. ಪ್ರಾಣ ಹೋದರೂ ಪರವಾಗಿಲ್ಲ ಎನ್ನುತ್ತಿದ್ದರು. ಅವರನ್ನು ಎಳೆದು ತಂದು ಹೊರಗೆ ಬಿಟ್ಟೆವು. ಇನ್ನೇನು ಮುಗಿಯಿತು ಎನ್ನುವಷ್ಟರಲ್ಲಿ ವಿವಾದಿತ ಕಟ್ಟಡದ ಮಧ್ಯ ಭಾಗ ಕುಸಿಯಿತು. ಬಿದ್ದ ರಭಸಕ್ಕೆ ಬೆನ್ನು, ಸೊಂಟಕ್ಕೆ ಪೆಟ್ಟು ಬಿತ್ತು. ಉಸಿರುಗಟ್ಟಿದಂತಾಯ್ತು. “ಹೋಗಯಾ ಕಾಮ್, ಆಗಯಾ ರಾಮ್’ ಎಂದು ಎಲ್ಲರೂ ಘೋಷಣೆಗಳನ್ನು ಕೂಗಿದರು.
ಅಲ್ಲಿಂದ ಹೊರಗೆ ಬರುತ್ತಿದ್ದಂತೆ ಶಿವಮೊಗ್ಗ ಕಾರ್ಯ ವಾಹರಾಗಿದ್ದ ಗೋಪಾಲಕೃಷ್ಣ ಮಹದೇವಪ್ಪ ಕಂಡರು. ಅವರನ್ನು ನೋಡಿ ಗೋಪಿ ಚಿಕ್ಕಪ್ಪ ಎಂದು ಕೂಗಿದೆ. ಅಷ್ಟೇ ನನಗೆ ನೆನಪಿನಲ್ಲಿ ಉಳಿದಿದ್ದು. ಅನಂತರ ನನಗೆ ಪ್ರಜ್ಞೆ ಬಂದಾಗ ಬಯಲು ಆಸ್ಪತ್ರೆಯಲ್ಲಿದ್ದೆ. ಅನೇಕ ಮಂದಿ ಕೂಗುತ್ತಾ, ಚೀರುತ್ತಾ ಯಾತನೆ ಅನುಭವಿಸುತ್ತಿದ್ದರು. ಆ ಲೆಕ್ಕಕ್ಕೆ ನನಗೆ ಏನೂ ಆಗಿರಲಿಲ್ಲ. ಇಷ್ಟೆಲ್ಲ ನಡೆದರೂ ಒಂದೇ ಒಂದು ಸಾವು ಆಗಿರಲಿಲ್ಲ. ರಾಮ ಇದ್ದಾನೋ ಇಲ್ಲವೋ ಎಂದು ನೀವೇ ಹೇಳಿ.
ಈ ನಡುವೆ ಒಂದು ಘಟನೆ ನಡೆಯಿತು. ಸೇನೆ ಬಂತು ಎಂದು ಹಲವರು ಕೂಗಿದರು. ಅಯೋಧ್ಯೆಯಲ್ಲಿದ್ದ ಧ್ವನಿವರ್ಧಕ ವ್ಯವಸ್ಥೆ ತುಂಬಾ ಚೆನ್ನಾಗಿತ್ತು. ಎಲ್ಲೇ ನಿಂತು ಸೂಚನೆ ಕೊಟ್ಟರೂ ನಮಗೆ ತಿಳಿಯುತಿತ್ತು. ಸೇನೆ ಬಂತು ಎಂದ ಕೂಡಲೇ ಎಲ್ಲರೂ ದೇವಸ್ಥಾನದತ್ತ ಓಡಲು ಶುರು ಮಾಡಿದರು. ಸಿಕ್ಕ ಕಲ್ಲು, ಮರದ ರೆಂಬೆ ಕೊಂಬೆ ಹಿಡಿದುಕೊಂಡು ಓಡುತ್ತಿದ್ದರು. ಬಂದಿರುವುದು ಸೇನೆ ಎಂಬ ಭಯ ಕೂಡ ಯಾರಲ್ಲೂ ಇರಲಿಲ್ಲ. ಅಲ್ಲಿ ನೋಡಿದರೆ ಯಾವ ಸೇನೆಯೂ ಇರಲಿಲ್ಲ.
ಅಲ್ಲಿಂದ ವಾಪಸ್ ಬಿಡಾರಕ್ಕೆ ಬಂದು ವಿಶ್ರಾಂತಿ ಪಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ಸೂಚನೆ ಬಂತು. ದೇವಸ್ಥಾನ ಕಟ್ಟಬೇಕೆಂಬ ತೀರ್ಮಾನ ಆಗಿದೆ. ದೇವಸ್ಥಾನಕ್ಕೆ ಬನ್ನಿ ಎಂದರು. ಅವತ್ತು ರಾತ್ರಿಯೇ ಕೆಡವಿದ ಕಟ್ಟಡದ ಮೇಲೆ ದೇವಸ್ಥಾನ ಕಟ್ಟಿ ಆಯ್ತು. ರಾಮಲಲ್ಲಾ ಮೂರ್ತಿ ಹಿಂದೆ ಗೋಡೆಗೆ ಐದು ಇಟ್ಟಿಗೆ ಇಟ್ಟಿದ್ದೆ. ಹೊರಗಡೆ ಇಟ್ಟಿದ್ದ ರಾಮಲಲ್ಲ ಮೂರ್ತಿಯನ್ನು ತಂದು ಅಲ್ಲಿಯೇ ಪ್ರತಿಷ್ಠಾಪಿಸಲಾಯಿತು. ಬೆಳಗ್ಗೆ ಹೊತ್ತಿಗೆ ಸೇನೆ ಬಂತು, ಸೇನೆ ಬಂತು ಎಂದು ಕೂಗುತ್ತಿದ್ದರು. ನೋಡಿದರೆ ನಿಜವಾಗಿಯೂ ಸೇನೆ ಬಂದಿತ್ತು. ಅವರು ಏನೂ ಮಾಡಲಿಲ್ಲ. ಶೂ ಬಿಚ್ಚಿ ನಮಸ್ಕಾರ ಮಾಡಿದರು. ಜಾಗವನ್ನು ನಿಯಂತ್ರಣಕ್ಕೆ ತೆಗೆದುಕೊಂಡರು ಬಿಟ್ಟರೆ ಯಾರನ್ನೂ ಮುಟ್ಟಲಿಲ್ಲ. ಅನಂತರ ಅಲ್ಲಿಂದ ಹೊರಡಬೇಕೆಂಬ ನಿಶ್ಚಯ ಆಯಿತು. ಬಹಳಷ್ಟು ಜನ ಸರಯೂ ನದಿಯಲ್ಲಿ, ಮಣ್ಣು ತಂದು ಕರಸೇವೆ ಜಾಗದಲ್ಲಿ ಹಾಕಿ ಹೋದರು. ಕೆಲವರು ಹಾಗೆಯೇ ಹೋಗಿದ್ದರು. ಅಲ್ಲಿದ್ದಷ್ಟು ದಿನವೂ ಉಚಿತ ಊಟ, ನೀರು, ಕಾಫಿ ಟೀ ಯಾವುದಕ್ಕೂ ತೊಂದರೆ ಆಗಲಿಲ್ಲ.
ಎರಡು ದಿನಗಳ ಬಳಿಕ (ಡಿ.8)ರಂದು ಮತ್ತೆ ರೈಲಿನಲ್ಲಿ ಹೊರಟೆವು. ಹೀಗೆ ಬರಬೇಕಾದರೆ ಒಂದು ಹಳ್ಳಿಯಲ್ಲಿ ರೈಲಿನ ಮೇಲೆ ಕಲ್ಲು ತೂರಾಟ ಆಯ್ತು. ಚೈನ್ ಎಳೆದು ರೈಲು ನಿಲ್ಲಿಸಿ ಊರೊಳಗೆ ನುಗ್ಗಿ ದುಷ್ಕರ್ಮಿಗಳಿಗೆ ಹೊಡೆದು ಬಂದರು. ರೈಲು ಹೋಗಲು ಬಿಡದಂಥ ಪರಿಸ್ಥಿತಿ ಆಗಿತ್ತು. ಮತ್ತೆ ರೈಲು ಹೊರಟಾಗ ಬಹಳಷ್ಟು ಜನ ಹಳಿ ಪಕ್ಕದಲ್ಲಿ ಕಲ್ಲುಗಳನ್ನು ರಾಶಿ ಹಾಕಿಕೊಂಡು ಕೂತಿದ್ದರು. ಯಾರಾದರೂ ಕಲ್ಲು ತೂರಿದರೆ ನಮ್ಮ ಕಡೆಯಿಂದಲೂ ಕಲ್ಲು ತೂರಲು ಯೋಚಿಸಲಾಗಿತ್ತು. ಅಂತೂ ಮರುದಿನ ಶಿವಮೊಗ್ಗ ತಲುಪಿದೆವು. ಅಷ್ಟೊತ್ತಿಗೆ ಅಡ್ವಾಣಿಯವರ ಬಂಧನ ಆಗಿತ್ತು. ಇಡೀ ದೇಶವೇ ಸ್ತಬ್ಧವಾಗಿತ್ತು.
ಈ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಮಂದಿ ಈಗ ನಮ್ಮ ಜತೆ ಇಲ್ಲ. ಶ್ರೀರಾಮಮಂದಿರ ನೋಡುವ ಭಾಗ್ಯ ಅವರಿಗೆ ಸಿಗಲಿಲ್ಲ. ನನ್ನ ಪುಣ್ಯ, ಸುದೈವದಿಂದ ಈ ಅವಕಾಶ ಸಿಕ್ಕಿದೆ. ನಮ್ಮ ಜೀವಿತಾವಧಿಯಲ್ಲಿ ನೋಡುತ್ತಿರುವುದಕ್ಕೆ ಆನಂದ ಸಿಕ್ಕಿದೆ.
ನಿರೂಪಣೆ: ಶರತ್ ಭದ್ರಾವತಿ