Advertisement
ಈ ಕಾಲೇಜ್ ದಿನಗಳಲ್ಲಿ ನಾವ್ ಮಾಡೋ ಕಿತಾಪತಿ, ಚೇಷ್ಟೆ , ಕೆಲಸಗಳು ಒಂದಾ? ಎರಡಾ? ಹೇಳ್ಳೋಕೆ ಹೋದ್ರೆ ದಿನಗಳೇ ಕಳೆಯುತ್ತೆ. ಆ ವಯಸ್ಸೇ ಹಾಗೆ ಅತ್ತ ಚಿಕ್ಕಮಕ್ಕಳೂ ಅಲ್ಲ, ಇತ್ತ ಜವಾಬ್ದಾರಿಯುತ ಪ್ರಜೆಯೂ ಅಲ್ಲ, ಅವೆರಡರ ಮಧ್ಯದ ವಯಸ್ಸು. ಕನ್‌ಫ್ಯೂಶನ್ ಅನ್ನೋ ಪದ ಈ ವಯಸ್ಸಲ್ಲಿ ತುಂಬಾ ಬಳಕೆಗೆ ಬರುತ್ತೆ. ಯಾವುದೇ ಕೆಲಸ ಆದ್ರೂ ಅದನ್ನು ಮಾಡೋ ಮೊದಲು; ಮಾಡ್ಲಾ? ಬೇಡ್ವಾ? ಹೇಗೆ ಮಾಡ್ಲಿ? ಹಾಗೆ ಮಾಡೋದು ಸರಿನಾ? ತಪ್ಪಾ? ಮುಂದೆ ಏನಾಗ್ಬೋದು? ಅಬ್ಟಾ…! ಮನಸ್ಸಲ್ಲಿ ಪ್ರಶ್ನೆಗಳ ಸುರಿಮಳೆಯೇ ಆಗುತ್ತೆ. ಅದೇ ಕನ್‌ಫ್ಯೂಶನಲ್ಲಿ ಏನೋ ಒಂದು ಮಾಡಿ ಖುಷಿಪಟ್ಟಿದ್ದೂ ಇದೆ, ಬೇಜಾರ್ ಆದದ್ದೂ ಇದೆ. ಈ ಕಾಲೇಜ್ ಲೈಫ್ ನಮ್ಮೆಲ್ಲರ ಲೈಫ್ನ ಒಂದು ಸುಂದರವಾದ ಅಧ್ಯಾಯ ಅನ್ನಬಹುದು. ತುಂಟತನ, ಚೇಷ್ಠೆ, ತಮಾಷೆ, ಮೋಜು-ಮಸ್ತಿಗಳ ಜೊತೆಯಲ್ಲಿ ಅನೇಕ ಅನುಭವ, ಹೊಸಪಾಠಗಳನ್ನು ಕಲಿಯುವ ವಯಸ್ಸು ಅದು. ಕನಸುಗಳಿಗೆ ಬಣ್ಣ ಹಚ್ಚಿ, ರೆಕ್ಕೆ ಕಟ್ಟಿ ಹಾರಾಡುವ ವಯಸ್ಸು, ಸಣ್ಣ-ಪುಟ್ಟ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡು ನಲಿದಾಡುವ ವಯಸ್ಸು, ಆಕರ್ಷಣೆಗಳಲ್ಲಿ ಮುಳುಗಿ ಕಳೆದು ಹೋಗುವ ವಯಸ್ಸು, ಕನಸುಗಳನ್ನೇ ಜೊತೆಯಾಗಿರಿಸಿಕೊಳ್ಳುವ ವಯಸ್ಸು, ಕಲ್ಪನೆಗಳಲ್ಲೇ ಸಂತೋಷಪಡುವ ವಯಸ್ಸು.
ಪತ್ರಿಕೋದ್ಯಮ ವಿಭಾಗ
ಭುವನೇಂದ್ರ ಕಾಲೇಜು, ಕಾರ್ಕಳ