ಸೇಡಂ: ಕಲಬುರಗಿಯ ಜನತೆ ಸ್ವಾಭಿಮಾನ ಮತ್ತು ನಂಬಿಕೆಗೆ ಹೆಸರಾದವರು. ಪ್ರಾಂತ್ಯ ಬದಲಾದರೂ ಭಾಷೆಯನ್ನು ಎಂದಿಗೂ ಮರೆಯಬಾರದು ಎಂದು ವಿಧಾನ ಪರಿಷತ್ ಸದಸ್ಯ ಡಾ| ಸಾಬಣ್ಣ ತಳವಾರ ಹೇಳಿದರು.
ಪಟ್ಟಣದ ಬ್ರಹ್ಮಕುಮಾರ ಆಶ್ರಮದಲ್ಲಿ ಇಷ್ಟಸಿದ್ಧಿ ವಿನಾಯಕ ಮಂಡಳಿ, ಶಕ್ತಿ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಾಹಿತಿ ಸಂತೋಷ ತೊಟ್ನಳ್ಳಿ ಸಂಪಾದಿತ “ಕಾಗಿಣಾ ತೀರದ ಧ್ವನಿಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಜಾತಿ, ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ವ್ಯವಸ್ಥೆ ಹದಗೆಟ್ಟಿದೆ. ನಮ್ಮ ಭಾಗದ ಜನರು ಸಾಹಿತ್ಯಿಕವಾಗಿ ಶ್ರೀಮಂತರಾಗಬೇಕು.
ನಮ್ಮ ಭಾಗದ ಸಂಪನ್ಮೂಲಗಳ ಶಕ್ತಿ ಗೌರವಿಸುವಂತೆ ಆಗಬೇಕು. ಡಾ| ಬಿ.ಆರ್. ಅಂಬೇಡ್ಕರ್ ಹೇಳಿದಂತೆ ಸ್ವಾಭಿಮಾನವಿಲ್ಲದ ಬದುಕು ಸತ್ತ ಶವ ಇದ್ದಂತೆ ಎಂದರು ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಮಾತನಾಡಿ, ಕಾಗಿಣಾ ನದಿ ತೀರ ಅನೇಕ ಶಕ್ತಿಗಳ ನಿರ್ಮಾತೃವಾಗಿದೆ. ದಾಸ್ಯದ ಸಂಕೇತವಾಗಿದ್ದ ಹೈದ್ರಾಬಾದ್ ಕರ್ನಾಟಕ ಕಲ್ಯಾಣ ಕರ್ನಾಟಕ ಮಾಡಿದ ತೃಪ್ತಿ ನನಗಿದೆ.
371ನೇ ಕಲಂನಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಇದಲ್ಲಿ ಮುಂದಿನ ದಿನಗಳಲ್ಲಿ ಬೇರೆ ಭಾಗದ ಜನರ ಕೂಗು ಏಳಬಹುದು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ ಎಂದರು. ಸಾಹಿತಿಗಳು ಮಾನವೀಯತೆ ನಿರ್ಮಿಸುವ ಶಿಲ್ಪಿಗಳಿದ್ದಂತೆ. ಕಾಗಿಣಾ ತೀರದಲ್ಲಿ ಕಲೆಗೆ ಕೊರತೆಯಿಲ್ಲ. ಏತ ನೀರಾವರಿಗಾಗಿ 600 ಕೋಟಿ ರೂ. ಅನುದಾನ ತಂದಿದ್ದೇನೆ. ಪ್ರತಿ ರೈತರ ಜಮೀನುಗಳಿಗೆ ಮುಂದಿನ ದಿನಗಳಲ್ಲಿ ನೀರು ದೊರೆಯಲಿದೆ. ಅಳಿವಿನಂಚಿನಲ್ಲಿದ್ದ ಡಿಸಿಸಿ ಬ್ಯಾಂಕ್ ಪುನಶ್ಚೇತನಗೊಳಿಸಿ ಸಾವಿರ ಕೋಟಿ ರೂ. ಬಡ್ಡಿ ರಹಿತ ಸಾಲ ವಿತರಣೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಚಲನಚಿತ್ರ ನಿರ್ದೇಶಕ ವೆಂಕಟೇಶ ಕೊಟ್ಟೂರು, ಹಿರಿಯ ಸಾಹಿತಿ ಗುರುಶಾಂತಯ್ಯ ಭಂಟನೂರು, ರಾಜ ಯೋಗಿನಿ ಬ್ರಹ್ಮಕುಮಾರ ಕಲಾವತಿ ಅಕ್ಕ, ಸಾಹಿತಿ ಲಿಂಗಾರೆಡ್ಡಿ ಶೇರಿ ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಪರ್ವತ ರೆಡ್ಡಿ ಪಾಟೀಲ ನಾಮವಾರ, ಶಿವಶರಣಪ್ಪ ಚಂದನಕೇರಿ ವೇದಿಕೆಯಲ್ಲಿದ್ದರು. ಬಸವರಾಜ ರೇವಗೊಂಡ ಸ್ವಾಗತಿಸಿದರು. ಸಂತೋಷ ತೊಟ್ನಳ್ಳಿ ಪ್ರಾಸ್ತಾವಿಕ ಮಾತನಾಡಿದರು, ಪ್ರಕಾಶ ಗೊಣಗಿ ನಿರೂಪಿಸಿದರು.