Advertisement

ಉಳಿಯದಲ್ಲೇ ಉಳಿದ ನಾಲ್ವರು ಮತದಾರರು !

12:38 PM May 12, 2018 | |

ರುಕ್ಮಯ ಸಪಲಿಗ ಎನ್ನುವವರು ತನ್ನಿಬ್ಬರು ಮಕ್ಕಳಾದ ಜಿತೇಶ್‌ ಕುಮಾರ್‌, ದೀಕ್ಷಾ  ಹಾಗೂ ಪತ್ನಿ ಉಮಾವತಿಯೊಂದಿಗೆ ಹೋರಾಟಮಯ ಜೀವನ ನಡೆಸುತ್ತಾ ಬರುತ್ತಿದ್ದಾರೆ. ಉಳಿಯದಲ್ಲಿ ಈ ಮುಂಚೆ ಹಲವಾರು ಮನೆಗಳಿದ್ದವು. ಇತ್ತೀಚಿನವರೆಗೆ ಆರು ಮನೆಗಳಿದ್ದು, ಎಲ್ಲರೂ ತನ್ನ ಜಾಗವನ್ನು ಖಾಸಗಿಯವರಿಗೆ ಮಾರಿಬಿಟ್ಟು ಇಲ್ಲಿನ ಸಹವಾಸವೇ ಬೇಡವೆಂದು ಜಾಗಬಿಟ್ಟು ತೆರಳಿದ್ದಾರೆ. ಆದರೆ ರುಕ್ಮಯ್ಯ ಅವರು ಏನೇ ಕಷ್ಟವಾದರೂ ಇಲ್ಲೇ ಇರುತ್ತೇನೆ ಎಂಬ ಗಟ್ಟಿ ನಿರ್ಧಾರದೊಂದಿಗೆ ಇಲ್ಲೇ ತನ್ನ ಮಕ್ಕಳೊಂದಿಗೆ
ವಾಸವಾಗಿದ್ದಾರೆ. ಒಂದು ಸಮಯದಲ್ಲಿ 82 ಮಂದಿ ಮತದಾರರಿದ್ದ ಸ್ಥಳದಲ್ಲಿ ಇದೀಗ ನಾಲ್ಕು ಮತದಾರರಿದ್ದಾರೆ.

Advertisement

ದೈವ-ನಾಗಬನವಿರುವ ಸ್ಥಳ
ಉಳಿಯ ನಡುಗಡ್ಡೆ ಪ್ರದೇಶವು ಎರಡು ನಾಗಬನ, ಕಲ್ಲುರ್ಟಿ ಪಂಜುರ್ಲಿ, ರಾವು ಗುಳಿಗ ಮುಂತಾದ ದೈವಗಳಿರುವ ಸ್ಥಳ. ಇದರ ಜೊತೆಗೆ ರುಕ್ಮಯ್ಯ ಅವರ ಕುಟುಂಬಿಕರು ಅನಾದಿಕಾಲದಿಂದ ನಂಬಿಕೊಂಡು ಬಂದಿರುವ ಕುಪ್ಪೆಟ್ಟು ಪಂಜುರ್ಲಿ ಪರಿವಾರ ದೈವಗಳಿವೆ. ಇವುಗಳ ಆರಾಧಕರಾಗಿರುವ ಕಾರಣ ರುಕ್ಮಯ್ಯರಿಗೆ ಮನೆ ಬಿಟ್ಟು ತೆರಳಲು ಇಷ್ಟವಿಲ್ಲ. ಎಷ್ಟೇ ಕಷ್ಟವಿದ್ದರೂ ಇಲ್ಲೆವಾಸವಾಗುವುದಾಗಿ ತಿಳಿಸುತ್ತಾರೆ. ರುಕ್ಮಯ್ಯ ಅವರ ಕುಟುಂಬವನ್ನು ಒಕ್ಕಲೆಬ್ಬಿಸಲು ಕೆಲವು ಖಾಸಗಿ ಜಾಗ ಖರೀದಿದಾರರು ನಿರಂತರ ತೊಂದರೆಯನ್ನು ನೀಡುತ್ತಲೇ ಬರುತ್ತಿದ್ದು, ಇವರ ಜಾಗವನ್ನು ಖರೀದಿಸುವ ಯೋಚನೆ ಹೊಂದಿದ್ದಾರೆ. ಅಲ್ಲದೆ ಕಾಲುದಾರಿಗೆ ಅಡ್ಡಿಪಡಿಸುತ್ತಾ ಆ ಜಾಗ
ತನ್ನದೆಂದು ಹೇಳುತ್ತಾ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ದೋಣಿಯೇ ಆಸರೆ
ಉಳಿಯದಿಂದ ಅಡ್ಡೂರಿಗೆ ಬರಬೇಕಾದರೆ ಫ‌ಲ್ಗುಣಿ ನದಿಯನ್ನು ದಾಟಲು ದೋಣಿಯೊಂದೇ ಆಸರೆಯಾಗಿದೆ. ಹಲವಾರು ವರ್ಷಗಳ ಮುಂಚೆ ದೋಣಿಯೊಂದನ್ನು ನೀಡಲಾಗಿದ್ದು, ಅದನ್ನು ವಾಪಸ್‌ ತೆಗೆದುಕೊಂಡಿದ್ದಾರೆ. ಅದಕ್ಕಾಗಿ ರುಕ್ಮಯ್ಯ ಪೂಜಾರಿಯವರು ತನ್ನ ಸ್ವಂತ 70,000 ರೂ. ವಿನಿಯೋಗಿಸಿ ದೋಣಿ ಖರೀದಿಸಿದ್ದಾರೆ. ಪ್ರತೀವರ್ಷ ನದಿಗೆ ಅಡ್ಡಲಾಗಿ ಮರಳು, ಕೋಲುಗಳನ್ನು ಬಳಸಿ ವರ್ಷಂಪ್ರತಿ 70 ಸಾವಿರದಿಂದ 80 ಸಾವಿರ ಖರ್ಚು ಮಾಡಿ ಕೃತಕ ಸೇತುವೆ ನಿರ್ಮಿಸುತ್ತಿದ್ದು, ಮಳೆಗಾಲದಲ್ಲಿ ನೆರೆಗೆ ಕೊಚ್ಚಿಹೋಗಿ ನೀರಿಗೆ ಹೋಮವಾಗುತ್ತದೆ. ಆಗ ದಾಟಲು ದೋಣಿಯೇ ಆಸರೆಯಾಗುತ್ತದೆ. ವರ್ಷಂಪ್ರತಿ ಎರಡು ಬಾರಿ ವಿಜೃಂಭಣೆಯಿಂದ ದೈವಗಳಿಗೆ ನೇಮೋತ್ಸವ ನಡೆಯುತ್ತಿದ್ದು ಜನರು ದೋಣಿಯಲ್ಲೇ ಬರಬೇಕಾಗುತ್ತದೆ. ಜನರು ಬಂದಾಗಲೆಲ್ಲಾ ಮನೆಯವರೇ ದೋಣಿಯನ್ನು ಮುನ್ನಡೆಸಬೇಕಾಗುತ್ತದೆ. 2013ರಲ್ಲಿ ಭೀಕರ ನೆರೆ ಬಂದಿದ್ದು, ಉಳಿಯದವರು ಭಾರೀ ಕಷ್ಟ ಅನುಭವಿಸಿದ್ದರು. ದೈವ-ದೇವರ ಅನುಗ್ರಹದಿಂದ ನಾವೆಲ್ಲಾ ಇದುವರೆಗೆ ಯಾವುದೇ ಅಪಾಯವಿಲ್ಲದೆ ಬದುಕಿದ್ದಾಗಿ ತಿಳಿಸುತ್ತಾರೆ.

ಕಾಲು ದಾರಿ-ಸೇತುವೆ, ರಸ್ತೆ ಬೇಕು
ಉಳಿಯ ಪ್ರದೇಶಕ್ಕೆ ಅತಿ ಅಗತ್ಯವಾಗಿರುವಂಥದ್ದು, ಸೇತುವೆ, ರಸ್ತೆ ಹಾಗೂ ಕವಲುದಾರಿಯ ಅಗತ್ಯವಿದೆ. ಇಷ್ಟವರೆಗೆ ಯಾವ ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಇದಕ್ಕೆ ಸ್ಪಸ್ಪಂದಿಸಿಲ್ಲ . ಎಲ್ಲರೂ ಭರವಸೆ ಕೊಟ್ಟಿದ್ದಷ್ಟೇ ಬಂತು. ಪೊನ್ನಲೆಯವರೆಗೆ ರಸ್ತೆಯಿದ್ದು ಅದು ಹಾಳಾಗಿದೆ. ಅಲ್ಲಿಂದ ಉಳಿಯಕ್ಕೆ ಬರಬೇಕಾದರೆ ಖಾಸಗಿಯವರ ಜಾಗವನ್ನು ಹಾದುಬರಬೇಕು. ಈ ರಸ್ತೆಯಲ್ಲಿ ವಾಹನ ಸಂಚಾರ ಕಷ್ಟ. ಅಲ್ಲಿಂದ ದೋಣಿಯಿಂದ ನದಿ ದಾಟಿ ಕಾಲುದಾರಿಯ ಮುಖಾಂತರ ಮನೆಗೆ ಬರಬೇಕು. ಆದರೆ ಕಾಲುದಾರಿಯ ಸಮಸ್ಯೆಯೂ ಇದೆ. ನಮ್ಮದು ಒಂದೇ ಮನೆಯಾಗಿದ್ದರೂ ಇಲ್ಲಿರುವ ದೈವದೇವರಿಗಳಿರುವ ಕಾರಣ ಅನೇಕ ಮಂದಿಗೆ ಇದರಿಂದ ಸಹಾಯವಾಗುತ್ತದೆ ಎನ್ನುವುದು ಇವರ ಬೇಡಿಕೆ.

 ಮತದಾನ ಕರ್ತವ್ಯ
‘ಮತದಾನ ಮಾಡುವುದು ನಮ್ಮ ಕರ್ತವ್ಯವಾಗಿದ್ದು, ಖಂಡಿತಾ ಪ್ರತೀಬಾರಿಯಂತೆ ಈ ಬಾರಿ ಮತ ಚಲಾಯಿಸುತ್ತೇವೆ. ನಮಗೆ ಯಾರಿಂದಲೂ ಸಹಾಯ ಸಿಗದಿದ್ದರೂ ನಮ್ಮ ಕರ್ತವ್ಯವನ್ನು ಚಲಾಯಿಸುತ್ತೇವೆ. ಮುಂದೆ ಶಾಸಕರಾಗಿ ಆಯ್ಕೆಯಾಗುವವರು ನಮ್ಮ ಕಷ್ಟಕ್ಕೆ ಸ್ಪಂದಿಸಬೇಕು .’ 
– ರುಕ್ಮಯ್ಯ, ಉಳಿಯ

Advertisement
Advertisement

Udayavani is now on Telegram. Click here to join our channel and stay updated with the latest news.

Next