ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಂಕಷ್ಟದ ನಡುವೆಯೂ ರೆಮ್‌ಡೆಸಿವಿಯರ್ ಇಂಜೆಕ್ಷನ್‌ಗಳು ವ್ಯಾಪಕವಾಗಿ ದುರುಪಯೋಗವಾಗುತ್ತಿವೆ. ಜನಪ್ರತಿನಿಧಿಗಳಿಂದಲೇ ಕಾಳ ಸಂತೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಗಂಭೀರ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗೆ ರೆಮ್‌ಡೆಸಿವಿಯರ್ ಇಂಜೆಕ್ಷನ್ ಅಭಾವ ಎನ್ನುವ ಕಾರಣಕ್ಕೆ ಬೆಂಗಳೂರಿನಿಂದ ತರಿಸಿಕೊಳ್ಳಲಾಗುತ್ತಿದೆ. ಆದರೆ, ಈ ಇಂಜೆಕ್ಷನ್‌ಗಳು ಕೆಲ ಜನಪ್ರತಿನಿಧಿಗಳ ಮೆಡಿಕಲ್ ಶಾಪ್ ಗಳ ಪಾಲಾಗುತ್ತಿವೆ. ಅವುಗಳನ್ನೇ ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಜನರಿಗೆ ಕಡಿಮೆ ದರದಲ್ಲಿ ಇಂಜೆಕ್ಷನ್ ಕಲ್ಪಿಸುವುದನ್ನು ಬಿಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಯಾವ ನ್ಯಾಯ? ಮನುಷ್ಯತ್ವವೇ ಇಲ್ಲದವರು ಜನಪ್ರತಿನಿಧಿಯಾಗಲು ಅರ್ಹರೇ ಅಲ್ಲ ಎಂದು ವಾಗ್ಧಾಳಿ ನಡೆಸಿದರು.
ಬೆಂಗಳೂರಿನಿಂದ ಜಿಲ್ಲೆಗೆ ಅಗತ್ಯವಾದಷ್ಟು ಇಂಜೆಕ್ಷನ್ ಪೂರೈಕೆ ಆಗುತ್ತಿದ್ದರೂ, ಇನ್ನೂ ಕೊರತೆ ಯಾಕೆ ಉದ್ಭವವಾಗುತ್ತಿದೆ. ಇಂಜೆಕ್ಷನ್‌ಗಳು ಯಾರ ಮೆಡಿಕಲ್, ಯಾವ ಔಷಧ ವಿತರಕರ ಅಂಗಡಿಗೆ ಸೇರುತ್ತಿವೆ ಎನ್ನುವುದನ್ನು ಜಿಲ್ಲಾಧಿಕಾರಿ ಹಾಗೂ ಔಷಧ ಸಹಾಯಕ ನಿಯಂತ್ರಕರು, ರೆಮ್‌ಡೆಸಿವಿಯರ್ ಉಸ್ತುವಾರಿ ವಹಿಸಿಕೊಂಡಿರುವ ಜೆಸ್ಕಾಂ ಎಂಡಿ ರಾಹುಲ್ ಪಾಂಡ್ವೆ ಜನರಿಗೆ ತಿಳಿಸಬೇಕೆಂದು ಆಗ್ರಹಿಸಿದರು. ಜಿಲ್ಲೆಯ ಪೂರೈಕೆ ಆಗುತ್ತಿರುವ ರೆಮ್‌ಡೆಸಿವಿಯರ್ ಇಂಜೆಕ್ಷನ್ ಗಳ ನಿಖರ ಮಾಹಿತಿಯನ್ನು ಜಿಲ್ಲಾಡಳಿತ ಒದಗಿಸಬೇಕು. ಖಾಸಗಿ ಆಸ್ಪತ್ರೆಯಲ್ಲಿನ ಕೊರೊನಾ ಸೋಂಕಿತರ ಹೆಸರಿನಲ್ಲಿ ಯಾವ ಆಸ್ಪತ್ರೆಗೆ ಎಷ್ಟೊಂದು ವಯಲ್ಸ್‌ಗಳನ್ನು ವಿತರಣೆ ಮಾಡಲಾಗುತ್ತಿದೆ.
ಬಳಕೆಯಾಗಿರುವ ಇಂಜೆಕ್ಷನ್‌ಗಳ ವಿವರ ಮತ್ತು ಆಸ್ಪತ್ರೆಗಳಲ್ಲಿ ಲಭ್ಯವಿರುವ ಐಸಿಯು ಬೆಡ್, ಔಷಧಿಗಳು ಮಾಹಿತಿಯನ್ವಯ ಆಸ್ಪತ್ರೆಯ ಸೂಚನಾ ಫಲಕದಲ್ಲಿ ಬಹಿರಂಗವಾಗಿ ಪ್ರಕಟಿಸಬೇಕೆಂದು ಒತ್ತಾಯಿಸಿದರು. ಭೇಟಿಗೆ ಸಮಯ ನೀಡದ ಸುಧಾಕರ: ಶುಕ್ರವಾರ ರಾತ್ರಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ| ಸುಧಾಕರ ಜಿಲ್ಲೆಗೆ ಬಂದಿದ್ದರು. ಶನಿವಾರ ಭೇಟಿಯಾಗಲು ಸಮಯ ನೀಡುವಂತೆ ದೂರವಾಣಿ ಕರೆ ಮಾಡಿದ್ದೆ. ಆದರೆ, ಸಮಯ ಸಾಕಾಗಲ್ಲ. ಮರಳಿ ಹೋಗಬೇಕಿದೆ ಎಂಬ ಸಬೂಬು ಹೇಳಿ ಭೇಟಿಗೆ ಸಮಯವೇ ನೀಡಲಿಲ್ಲ ಎಂದು ಡಾ| ಶರಣಪ್ರಕಾಶ ಆಕ್ರೋಶ ವ್ಯಕ್ತಪಡಿಸಿದರು.
ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿ ಐದು ವರ್ಷ ಸೇವೆ ಸಲ್ಲಿದ್ದೇನೆ. ಕೊರೊನಾ ಕುರಿತು ಚರ್ಚೆ ನಡೆಸಿ, ನಿಯಂತ್ರಣಕ್ಕೆ ಕೆಲವೊಂದು ಸಲಹೆ ನೀಡಬೇಕು ಎಂದುಕೊಂಡಿದ್ದೆ. ಆದರೆ, ಭೇಟಿಗೆ ಸಮಯವೇ ನೀಡದಂತೆ ಸಚಿವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಎಲ್ಲ ಸಚಿವರು ಯಾವುದರಲ್ಲಿ ತಮಗೆ ಲಾಭ ಎಷ್ಟು ಸಿಗುತ್ತದೆ ಎಂದು ನೋಡುವವರೇ ಆಗಿದ್ದಾರೆ ಎಂದು ಕಿಡಿಕಾರಿದರು.