Advertisement
ಇದರ ಫಲವಾಗಿ ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಹುದ್ದೆಗೆ ಅರ್ಹರನ್ನು ಆಯ್ಕೆ ಮಾಡುವುದೇ ಬಿಜೆಪಿ ವರಿಷ್ಠರಿಗೆ ಸವಾಲಾಗಿ ಪರಿಣಮಿಸಿದೆ. ವಿಧಾನಮಂಡಲದ ಬಜೆಟ್ ಅಧಿವೇಶನಕ್ಕೆ ದಿನಗಣನೆ ಪ್ರಾರಂಭವಾಗಿದ್ದರೂ ವಿಪಕ್ಷ ನಾಯಕ ಯಾರು ಎಂಬುದನ್ನು ಇತ್ಯರ್ಥಗೊಳಿಸುವುದಕ್ಕೆ ಬಿಜೆಪಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತಿಮವಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಈ ಜವಾಬ್ದಾರಿ ಕಟ್ಟುವುದು ಅನಿವಾರ್ಯವಾಗಬಹುದು ಎಂದು ಪಕ್ಷದೊಳಗೆ ಹೇಳಲಾಗುತ್ತಿದೆ.
Related Articles
Advertisement
ಆಗ ಹಿಂದೆ ಹಗರಣ ಮಾಡಿದವರನ್ನು ಸಮರ್ಥನೆ ಮಾಡಿಕೊಳ್ಳುವುದು ಹೊಸದಾಗಿ ಅಧಿಕಾರ ವಹಿಸಿಕೊಂಡವರಿಗೆ ಸವಾಲಾಗಿ ಪರಿಣಮಿಸುತ್ತದೆ. ಹಿಂದಿನವರು ಮಾಡಿದ ಹಗರಣಗಳ ಸಮರ್ಥನೆ ಮಾಡಿ ಕೊಳ್ಳುತ್ತ ಕುಳಿತರೆ ಸಾರ್ವಜನಿಕವಾಗಿ ತಮ್ಮ ವರ್ಚಸ್ಸು ಮಂಕಾ ಗುತ್ತದೆ. ವಿಪಕ್ಷ ನಾಯಕನಾದರೆ ಸದನದೊಳಗೆ, ರಾಜ್ಯಾಧ್ಯಕ್ಷ ನಾದರೆ ಸದನದ ಹೊರಗೆ ಹಿಂದಿನ ಸರಕಾರದ ನಡೆಗಳನ್ನು ಸಮರ್ಥಿಸಿಕೊಳ್ಳುವುದೇ ಕಾಯಕವಾಗುತ್ತದೆ ಎಂಬುದು ಹೊಸಬರ ವಾದ. ಹೀಗಾಗಿ ಪಕ್ಷ ಪರಿಗಣಿಸಿ ಚರ್ಚೆಗೆ ಬಿಟ್ಟ ಹೆಸರುಗಳ ಪೈಕಿ ಬಹುತೇಕರು ಈಗ ಹಿಂದೆ ಸರಿದಿದ್ದಾರೆ.
ಜು. 2ರಂದು ಶಾಸಕಾಂಗ ಸಭೆ
ಇವೆಲ್ಲದರ ಮಧ್ಯೆ ಜುಲೈ 2ರಂದು ಬಿಜೆಪಿಯ ಶಾಸಕಾಂಗ ಪಕ್ಷದ ಸಭೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಆದರೆ ಶಾಸಕಾಂಗ ಪಕ್ಷದ ನಾಯಕ ಯಾರು ಎಂಬುದೇ ನಿಗೂಢವಾಗಿ ಉಳಿದಿದೆ. ವಿಪಕ್ಷ ಸ್ಥಾನದ ಪ್ರಮುಖ ಆಕಾಂಕ್ಷಿಗಳ ಪೈಕಿ ಪ್ರಮುಖರೊಬ್ಬರಿಗೆ ಪಕ್ಷ ವಿರೋಧಿ ಹೇಳಿಕೆ ಹಿನ್ನೆಲೆಯಲ್ಲಿ ಶುಕ್ರವಾರ ಕಾರಣ ಕೇಳಿ ನೋಟಿಸ್ ನೀಡುವುದು ಅಂತಿಮಗೊಂಡಿದೆ. ಹೀಗಾಗಿ ಅವರು ರೇಸ್‌ನಿಂದ ಹೊರಬೀಳುವ ಸಾಧ್ಯತೆ ಹೆಚ್ಚಿದೆ.
ಯಡಿಯೂರಪ್ಪ ಸಭೆ
ಹೊಸಬರು ಹಿಂಜರಿಯುತ್ತಿದ್ದರೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತ್ರ ಮತ್ತೆ ಅಖಾಡಕ್ಕೆ ಇಳಿದಿದ್ದಾರೆ. ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದ ಅವರು ಶುಕ್ರವಾರ ಬೆಳಗ್ಗೆ ಪಕ್ಷದ ರಾಜ್ಯ ಕಚೇರಿಗೆ ತೆರಳಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ಶಿಸ್ತು ಸಮಿತಿ ಸಂಚಾಲಕ ಲಿಂಗರಾಜ್ ಪಾಟೀಲ್ ಸೇರಿದಂತೆ ಪ್ರಮುಖರ ಜತೆಗೆ ಸಭೆ ನಡೆಸಲು ನಿರ್ಧರಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ರೇಣುಗೆ ನೋಟಿಸ್
ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಡಬಾರದು ಎಂದು ಹೇಳಿದ್ದರೂ ಇದನ್ನು ಮೀರಿದ ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಹಾಗೆಯೇ ಶುಕ್ರವಾರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
ಕೇಂದ್ರ ಸಂಪುಟದಲ್ಲಿ ಭರ್ಜರಿ ಬದಲಾವಣೆ?
2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮ್ಯಾರಥಾನ್ ಕಾರ್ಯತಂತ್ರ ಸಭೆಗಳನ್ನು ಆಯೋಜಿಸುತ್ತಿರುವ ಬಿಜೆಪಿ ಹಿರಿಯ ನಾಯಕರು ಬುಧವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. 5 ತಾಸುಗಳ ಕಾಲ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ಭಾಗಿಯಾಗಿದ್ದರು. ಸಭೆಯಲ್ಲಿ ನಡ್ಡಾ ಅವರ ಪಾಲ್ಗೊಳ್ಳುವಿಕೆಯು ಸರಕಾರ ಮಾತ್ರವಲ್ಲದೆ ಬಿಜೆಪಿಯ ಸಂಘಟನೆಯಲ್ಲೂ ಸಂಭಾವ್ಯ ಬದಲಾವಣೆಯ ಸುಳಿವು ನೀಡಿದೆ. ವಿಶೇಷವೆಂದರೆ ಕರ್ನಾಟಕ ಸೇರಿದಂತೆ ರಾಜ್ಯಮಟ್ಟದಲ್ಲಿ ಸಂಘಟನಾತ್ಮಕ ಬದಲಾವಣೆಗಳು ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ಜು. 3ರಂದು ಪ್ರಧಾನಿ ಮೋದಿ ಸಚಿವ ಸಂಪುಟದ ಸದಸ್ಯರ ಜತೆ ಮತ್ತೆ ಮಹತ್ವದ ಸಭೆ ನಡೆಸಲಿದ್ದು, ಅಲ್ಲಿ ಈ ಎಲ್ಲ ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ.
ಇದೇ ವೇಳೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಬಳಿಕ ಎಚ್ಚೆತ್ತುಕೊಂಡಿರುವ ಬಿಜೆಪಿಯು ಇದೇ ವರ್ಷಾಂತ್ಯದಲ್ಲಿ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢದಂತಹ ಪ್ರಮುಖ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ತನ್ನ ಒಟ್ಟಾರೆ ಕಾರ್ಯತಂತ್ರವನ್ನು ಬದಲಿಸುವ ಕುರಿತೂ ಬುಧವಾರದ ಸಭೆಯಲ್ಲಿ ಚರ್ಚಿಸಲಾಗಿದೆ.
ರಾಘವೇಂದ್ರ ಭಟ್