Advertisement
ಪಡೀಲ್ನಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದೇ ಪರಿಸರದಲ್ಲಿ ಬಸ್ ನಿಲ್ದಾಣ ಕೂಡ ನಿರ್ಮಾಣವಾದರೆ ಸಾರ್ವಜನಿಕರಿಗೆ ಉಪಯೋಗವಾಗುತ್ತದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಕೂಡ ಸನಿಹದಲ್ಲಿಯೇ ಇರುವ ಹಿನ್ನೆಲೆಯಲ್ಲಿ ಬಸ್ ನಿಲ್ದಾಣವನ್ನು ಪಡೀಲಿಗೆ ಸ್ಥಳಾಂತರಿಸುವುದು ಸೂಕ್ತ ಎಂಬ ಬಗ್ಗೆ ಚರ್ಚೆ ಶುರುವಾದ ಹಿನ್ನೆಲೆಯಲ್ಲಿ ಈ ಯೋಜನೆ ಮರುಜೀವ ಪಡೆದುಕೊಂಡಿದೆ.
ಪಂಪ್‌ವೆಲ್ ಈಗಾಗಲೇ ಫ್ಲೈಓವರ್ ಸಹಿತ ವಿವಿಧ ಕಾರಣದಿಂದ ಸಂಚಾರ ಒತ್ತಡದ ಕೇಂದ್ರವಾಗಿ ಪರಿಣಮಿಸಿದೆ. ಮುಂದೆ ಇದೇ ವ್ಯಾಪ್ತಿಯಲ್ಲಿ ಬಸ್ ನಿಲ್ದಾಣ ಮಾಡಿದರೆ ಟ್ರಾಫಿಕ್ ಒತ್ತಡ ಇನ್ನಷ್ಟು ಹೆಚ್ಚಳವಾಗಬಹುದು ಎಂಬ ಆತಂಕದಿಂದಾಗಿ ಬಸ್ ನಿಲ್ದಾಣ ಬೇರೆ ಕಡೆಗೆ ಸ್ಥಳಾಂತರಿಸುವುದೇ ಉತ್ತಮ ಎಂಬ ಅಭಿಪ್ರಾಯ ಸ್ಮಾರ್ಟ್ ಸಿಟಿ ಸಭೆಗಳಲ್ಲಿ ವ್ಯಕ್ತವಾಗಿವೆ.
Related Articles
Advertisement
‘ಸಮಗ್ರ ಟ್ರಾನ್ಸ್‌ಪೊರ್ಟೇಶನ್ ಹಬ್’ ಕನಸಿತ್ತು!ಪಂಪ್‌ವೆಲ್ನಲ್ಲಿ ಸುಮಾರು 20 ಎಕ್ರೆ ಪ್ರದೇಶದಲ್ಲಿ ಖಾಸಗಿ ಇಂಟರ್ ಸಿಟಿ, ಇಂಟ್ರಾಸಿಟಿ ಬಸ್‌ಗಳಿಗೆ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಶಾಪಿಂಗ್ ಸೆಂಟರ್, ಕಚೇರಿಗಳನ್ನು ನಿರ್ಮಿಸುವ ‘ಸಮಗ್ರ ಟ್ರಾನ್ಸ್‌ಪೋರ್ಟೆಶನ್ ಹಬ್’ ನಿರ್ಮಾಣಕ್ಕೆ ಮಂಗಳೂರು ಮಹಾ ನಗರಪಾಲಿಕೆ ಯೋಜನೆ ರೂಪಿಸಿತ್ತು. ಇದಕ್ಕೆ ಸಂಬಂಧಿಸಿ 2009ರಲ್ಲಿ 7.23 ಎಕ್ರೆ ಖಾಸಗಿ ಜಮೀನು ಸ್ವಾಧೀನ ಪಡಿಸಲಾಗಿತ್ತು. ಇದರ ಸುತ್ತ ಇರುವ ಸರಕಾರಿ ಜಾಗದ ಪರಂಬೋಕು, ಖಾಸಗಿ ಸ್ವಾಮ್ಯದ ಸುಮಾರು 4 ಎಕ್ರೆ ಜಮೀನು ಕೂಡ ಇದೇ ಉದ್ದೇಶಕ್ಕಾಗಿ ಕಾದಿರಿಸಲಾಗಿತ್ತು. ಹೆಚ್ಚುವರಿಯಾಗಿ 11.59 ಎಕ್ರೆ ಖಾಸಗಿ ಜಮೀನು ಸ್ವಾಧೀನ ಮಾಡಲಾಗಿತ್ತು. ಆದರೆ 11.59 ಎಕ್ರೆ ಭೂಮಿಯನ್ನು ಕಳೆದ ಬಾರಿ ಪಾಲಿಕೆ ಕೈಬಿಟ್ಟಿತ್ತು. ಉಪ ಬಸ್ ನಿಲ್ದಾಣ
ನಗರದಲ್ಲಿ ಸುಸಜ್ಜಿತ ಬಸ್ ನಿಲ್ದಾಣಗಳನ್ನು ಮಾಡುವುದು ಸ್ಮಾರ್ಟ್ ಸಿಟಿ ಯೋಜನೆಯ ಉದ್ದೇಶ. ಇದರಂತೆ ಪಂಪ್‌ವೆಲ್ನ ಮುಖ್ಯ ಬಸ್‌ನಿಲ್ದಾಣವನ್ನು ಪಡೀಲ್ಗೆ ಸ್ಥಳಾಂತರಿಸಲು ಯೋಚಿಸಲಾಗಿದೆ. ಹೀಗಾಗಿ ಪಂಪ್‌ವೆಲ್ನಲ್ಲಿ ‘ಉಪ ಬಸ್ ನಿಲ್ದಾಣ’ ನಿರ್ಮಿಸುವ ಬಗ್ಗೆ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಹಾಗೇ ಕೂಳೂರಿನಲ್ಲಿಯೂ ಉಪಬಸ್‌ನಿಲ್ದಾಣ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಆದರೆ, ಈ ಕುರಿತಂತೆ ಸ್ಮಾರ್ಟ್‌ಸಿಟಿ ಸಭೆಗಳಲ್ಲಿ ಪ್ರಸ್ತಾವ ಆಗಿದೆ.
ಪಡೀಲ್‌ನಲ್ಲೇ ಬಸ್ ನಿಲ್ದಾಣ
ಪಂಪ್‌ವೆಲ್ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ಪ್ರಸ್ತಾವವನ್ನು ಕೈಬಿಟ್ಟಿಲ್ಲ. ಆದರೆ, ಪಡೀಲ್ನಲ್ಲಿ ಜಿಲ್ಲಾಧಿಕಾರಿ ಕಚೇರಿ ಬರುವ ಕಾರಣದಿಂದ ಅದೇ ಪರಿಸರದಲ್ಲಿ ಸುಸಜ್ಜಿತ ಬಸ್‌ನಿಲ್ದಾಣ ಮಾಡುವ ಬಗ್ಗೆ ಈಗಾಗಲೇ ತೀರ್ಮಾನ ಮಾಡಲಾಗಿದೆ. ಜಾಗ ನಿಗದಿಯಾದ ಬಳಿಕ ಪಂಪ್‌ವೆಲ್ ಬಸ್‌ನಿಲ್ದಾಣಕ್ಕಾಗಿ ಮೀಸಲಿಟ್ಟ ಸ್ಥಳದ ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು.
– ನಾರಾಯಣಪ್ಪ,
ಆಯುಕ್ತರು, ಮನಪಾ