Advertisement

ಬಿಇಒ, ಬಿಆರ್‌ಸಿ ಕೇಂದ್ರ ಸ್ಥಳಾಂತರಿಸಿ

04:29 PM Dec 22, 2019 | Team Udayavani |

ಕೆ.ಆರ್‌.ಪೇಟೆ: ಪಟ್ಟಣದ ಶತಮಾನದ ಶಾಲಾ ಆವರಣದಲ್ಲಿರುವ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸರ್ಕಾರಿ ಸ್ವತಂತ್ರ ಬಾಲಕಿಯರ ಪಿಯು ಕಾಲೇಜು ವಿದ್ಯಾರ್ಥಿಯರು ಒತ್ತಾಯಿಸಿದರು.

Advertisement

ಶತಮಾನದ ಶಾಲೆ ಈಗ ಕೆಪಿಎಸ್‌ ಶಾಲೆಯಾಗಿ ಪರಿವರ್ತನೆಯಾಗಿದೆ. ಸದರಿ ಶಾಲೆಯಲ್ಲಿ ಎಲ್‌ ಕೆಜಿಯಿಂದ ಪಿಯುಸಿವರೆಗೆ ಸುಮಾರು 2 ಸಾವಿರ ಮಕ್ಕಳಿದ್ದಾರೆ. ಇದೇ ಆವರಣದಲ್ಲಿ ಬಾಲಕಿಯರ ಪ್ರೌಢಶಾಲೆ ಮತ್ತು ಕಾಲೇಜೂ ನಡೆಯುತ್ತಿದೆ. ಸುಮಾರು ಒಂದೂವರೆ ಸಾವಿರ ಹೆಣ್ಣು ಮಕ್ಕಳೇ ಅಧ್ಯಯನ ಮಾಡುತ್ತಿದ್ದು, ಶಾಲಾ ಆವರಣಕ್ಕೆ ಪ್ರತಿದಿನ ನೂರಾರು ಸಾರ್ವಜನಿಕರು, ಶಿಕ್ಷಕರು ಬಿಇಒ ಮತ್ತು ಬಿಆರ್‌ಸಿ ಕೇಂದ್ರಕ್ಕೆ ಬರುವುದರಿಂದ ನಮಗೆ ಕಿರಿಕಿರಿ ಉಂಟಾಗುತ್ತಿದೆ.

ಅಲ್ಲದೆ, ಬಿಆರ್‌ಸಿ ಕೇಂದ್ರದಲ್ಲಿ ಶಿಕ್ಷಕರಿಗೆ ನಿರಂತರ ತರಬೇತಿ ಕಾರ್ಯಕ್ರಮಗಳು ನಡೆಯುತ್ತವೆ. ಇದರಿಮದ ನಮ್ಮ ಪಾಠ ಪ್ರವಚನಗಳಿಗೂ ಅಡ್ಡಿಯಾಗುತ್ತಿದೆ. ಬೈಕ್‌ ನಲ್ಲಿ ಶಬ್ಧ ಮಾಡಿಕೊಂಡು ಬರುವುದು. ನಮ್ಮ ತರಗತಿ ಕೊಠಡಿಗಳ ಪಕ್ಕದಲ್ಲಿ ನಿಂತು ಮೊಬೈಲ್‌ನಲ್ಲಿ ಮಾತನಾಡುವುದು. ಟೀ ಕುಡಿಯುವುದು, ಮತ್ತೆ ಕೆಲವರು ಕಾಲೇಜು ಹಿಂಭಾಗದಲ್ಲಿ ಸಿಗರೆಟ್‌ ಸೇದುವುದು. ಈ ಚಟುವಟಿಕೆಗಳಿಂದ ನಮಗೆ ತುಂಬಾ ಕಿರಿಕಿರಿ ಉಂಟಾಗುತ್ತಿದ್ದು, ಕೂಡಲೇ ಬಿಆರ್‌ಸಿ ಕೇಂದ್ರವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರು.

ರೋಡ್‌ ರೋಮಿಯೋಗಳ ಕಾಟ: ಶಾಲಾ ಆವರಣಕ್ಕೆ ಬಿಆರ್‌ಸಿ ಕೇಂದ್ರಕ್ಕೆ ಬರುವ ಶಿಕ್ಷಕರ ಸೋಗಿನಲ್ಲಿ ಯುವಕರು ಬೈಕ್‌ಗಳಲ್ಲಿ ಶಾಲಾ ಆವರಣಕ್ಕೆ ಬಂದು ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುವುದು, ಚುಡಾಯಿಸುವುದು, ಏಕೆ ಬಂದಿರೆಂದು ಪ್ರಶ್ನಿಸಿದರೆ, ಬಿಆರ್‌ಸಿ ಕೇಂದ್ರಕ್ಕೆ ಬಂದಿದ್ದೇವೆ ಅಥವಾ ಶಾಲಾ ಆವರಣದಲ್ಲಿಯೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಕೆಲಸದ ಮೇಲೆ ಬಂದಿದ್ದೇವೆ ಎಂದು ನೆಪ ಹೇಳುತ್ತಾರೆ. ಇಂತಹವರಿಂದ ತುಂಬಾ ಸಮಸ್ಯೆಯಾಗಿದೆ. ಆದ್ದರಿಂದ ಬಿಇಒ ಕಚೇರಿ ಮತ್ತು ಬಿಆರ್‌ಸಿ ಕೇಂದ್ರವನ್ನು ಸ್ಥಳಾಂತರಿಸಿ ಕಿರಿಕಿರಿ ತಪ್ಪಿಸುವಂತೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.

ಬೈಕ್‌ ಮೇಲೆ ಬಿಡುವಂತೆ ಬರುವುದು: ವಿದ್ಯಾರ್ಥಿನಿ ಅನುಷಾ ಮಾತನಾಡಿ, ನಾವು ಕಾಲೇಜು ಆವರಣದಲ್ಲಿ ಕುಳಿತು ಓದುತ್ತಿರುವಾಗ ಕೆಲವರು ನಮ್ಮ ಮೇಲೆಯೇ ಬೈಕ್‌ ಹತ್ತಿಸುವಂತೆ ಓಡಿಸಿಕೊಂಡು ಬರುತ್ತಾರೆ. ಇದರಿಂದ ನಾವು ವಿರಾಮದ ವೇಳೆ ಆತಂಕದಲ್ಲಿ ಹೊರಗೆ ಕುಳಿತುಕೊಳ್ಳಬೇಕಿದೆ. ಮರದಡಿ ಕುಳಿತು ಅಧ್ಯಯನ ಮಾಡಲು, ಊಟ ಮಾಡಲೂ ಸಾಧ್ಯವಾಗುತ್ತಿಲ್ಲ. ನಮಗೆ ಸೂಕ್ತ ಭದ್ರತೆ ನೀಡಬೇಕು. ಕಾಲೇಜು ಆವರಣದಲ್ಲಿ ನಡೆಯುವ ಕಿರಿಕಿರಿ ಮನೆಯಲ್ಲಿ ಗೊತ್ತಾದರೆ ನಮ್ಮನ್ನು ಕಾಲೇಜಿಗೇ ಕಳಿಸುವುದಿಲ್ಲ. ಆದ್ದರಿಂದ ಕೂಡಲೇ ಈ ಕುರಿತು ತುರ್ತು ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next