Advertisement

ನಾವು ಮಾಡುವ ಧರ್ಮ ಕಾರ್ಯಗಳು ಸ್ಮರಣೀಯ: ಚಂದ್ರಹಾಸ್‌ ಕೆ. ಶೆಟ್ಟಿ

01:48 PM Sep 24, 2021 | Team Udayavani |

ಕುರ್ಲಾ: ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಡಾ| ಆರ್‌. ಕೆ. ಶೆಟ್ಟಿ ಅವರ ಮಾತೃಶ್ರೀ ಚಿಕ್ಕಮಗಳೂರು ಕಂಬಿಹಳ್ಳಿ ಅಪ್ಪಿ ಕೃಷ್ಣ ಶೆಟ್ಟಿ ಅವರು ಇತ್ತೀಚೆಗೆ ನಿಧನ ಹೊಂದಿದ್ದು, ಅವರ ಶ್ರದ್ಧಾಂಜಲಿ ಸಭೆ ಮತ್ತು ನುಡಿನಮನ ಕಾರ್ಯಕ್ರಮವು ಸೆ. 19ರಂದು ಕುರ್ಲಾ ಪೂರ್ವದ ಬಂಟರ ಭವನದ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ನಡೆಯಿತು.

Advertisement

ಬಂಟರ ಭವನದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್‌ ಅರವಿಂದ ಬನ್ನಿತ್ತಾಯ ಅವರು ದೇವರಿಗೆ ಪೂಜೆ ನೆರವೇರಿಸಿ ಅಗಲಿದ ದಿವ್ಯಾತ್ಮಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸಿ ಉಪಸ್ಥಿತ ಅಪ್ಪಿ ಶೆಟ್ಟಿ ಪರಿವಾರಕ್ಕೆ ಮಹಾ ಪ್ರಸಾದವನ್ನಿತ್ತು ಹರಸಿದರು. ಈ ಸಂದರ್ಭ ಮೃತರ ಪುತ್ರರಾದ ಆನಂದ್‌ ಕುಮಾರ್‌, ಡಾ| ಆರ್‌. ಕೆ. ಶೆಟ್ಟಿ , ಮೋಹನ್‌ ಕುಮಾರ್‌, ಸೊಸೆ ಅನಿತಾ ಆರ್‌. ಶೆಟ್ಟಿ, ಮೊಮ್ಮಗ ಶ್ರೇಯಸ್‌ ಆರ್‌. ಶೆಟ್ಟಿ, ಬಂಟರ ಸಂಘ ಮುಂಬಯಿ ಇದರ ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಉಪಸ್ಥಿತರಿದ್ದರು.

ಬಳಿಕ ಸ್ವಾಮಿ ಮುಕ್ತಾನಂದ ಸಭಾಗೃಹದಲ್ಲಿ ಜರಗಿದ ಶ್ರದ್ಧಾಂಜಲಿ ಸಭೆಯಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ದೈವೈಕ್ಯ ಅಪ್ಪಿ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದು ನುಡಿನಮನ ಸಲ್ಲಿಸಿ, ಪ್ರಪಂಚದಲ್ಲಿ ಪ್ರತಿಯೊಂದು ಜೀವಿಗಳಿಗೂ ಮರಣ ಇದೆ. ಹುಟ್ಟು ಆಕಸ್ಮಿಕವಾದರೆ ಸಾವು ನಿಶ್ಚಿತ. ನಾವೆಲ್ಲರೂ ಈ ಭೂಮಿಯಲ್ಲಿ ಕೆಲವೇ ದಿನಗಳ ಬಂಧುಗಳು. ಜೀವ ಇದ್ದಾಗ ನಾವು ಮಾಡಿದ ಪ್ರತೀ ಕರ್ಮ ಮತ್ತು ಧರ್ಮಗಳು ಇಹಲೋಕ ತ್ಯಜಿಸಿದರೂ ಸ್ಮರಣೀಯವಾಗಿರುತ್ತವೆ. ನಮ್ಮ ಪರಮಾಪ್ತ ಬಂಧು ಆರ್‌. ಕೆ. ಶೆಟ್ಟಿ ಅವರ ಅಮ್ಮನ ಅಗಲುವಿಕೆ ನಮಗೆಲ್ಲ ಬೇಸರ ತಂದಿದೆ. ನಮ್ಮನ್ನಗಲಿದ ಆತ್ಮಕ್ಕೆ ಶ್ರೀಹರಿಯು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿ ಬಂಟರ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ:ಹೀಗೂ ಉಂಟೆ; ಅತ್ಯಾಚಾರಕ್ಕೆ ಯತ್ನ ಪ್ರಕರಣ; ಆರೋಪಿಗೆ ವಿಚಿತ್ರ ಶಿಕ್ಷೆ ವಿಧಿಸಿದ ನ್ಯಾಯಾಧೀಶರು

ಡಾ| ಆರ್‌. ಕೆ. ಶೆಟ್ಟಿ ಮಾತನಾಡಿ, ನಮ್ಮ ಅಮ್ಮನ ಅಗಲುವಿಕೆಯ ದುಃಖಕರ ಸಮಯದಲ್ಲಿ ನಮ್ಮ ನೋವಿನಲ್ಲಿ ಬೆಂಬಲವಾಗಿ ನಿಂತು ಪ್ರತ್ಯಕ್ಷ-ಪರೋಕ್ಷವಾಗಿ ಭಾವನಾತ್ಮಕ ಸಂದೇಶಗಳ ಮೂಲಕ ನಮಗೆ ಸಹಾನುಭೂತಿ ನೀಡಿ, ಮನೋ ಬಲ ತುಂಬಿ ಪ್ರಾರ್ಥನೆ, ನುಡಿ-ನಮನಗಳೊಂದಿಗೆ ಸಂತಾಪ ಸೂಚಿಸಿ, ಅಗಲಿದ ಮಾತೃಶ್ರೀಯವರ ದಿವ್ಯಾತ್ಮಕ್ಕೆ ಚಿರಶಾಂತಿ, ಸದ್ಗತಿ ಕೋರಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

Advertisement

ಜಾಗತಿಕ ಬಂಟರ ಒಕ್ಕೂಟದ ಗೌರವ ಕೋಶಾಧಿಕಾರಿ ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಮಾತೃ ಭೂಮಿ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರಶೆಟ್ಟಿ ಮುಂಡ್ಕೂರು, ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಜತೆ ಕೋಶಾಧಿ ಕಾರಿ ಮುಂಡಪ್ಪ ಎಸ್‌. ಪಯ್ಯಡೆ, ಬಂಟರ ಸಂಘದ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಸಂಚಾ ಲಕ ನ್ಯಾಯವಾದಿ ಆರ್‌. ಜಿ. ಶೆಟ್ಟಿ, ಕನ್ನಡಿಗ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಇದರ ಅಧ್ಯಕ್ಷ ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, ಮಾಜಿ ಶಾಸಕ ಮಧುಕರ್‌ ಚವ್ಹಾಣ್‌, ಎಲ್‌ಐಸಿ ಪ್ರಬಂಧಕ ಕೆ. ಹರಿಸೂಧನ್‌, ಎಲ್‌ಐಸಿ ಮಾಜಿ ಅಧಿಕಾರಿ ಮಲ್ಹೊತ್ರಾ, ನಿಲೇಶ್‌ ಶೆಟ್ಟಿ ಅವರು ನುಡಿನಮನ ಸಲ್ಲಿಸಿದರು.

ಬಂಟರ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ್‌ ಎಲ್‌. ಶೆಟ್ಟಿ, ಆಹಾರ್‌ನ ಮಾಜಿ ಅಧ್ಯಕ್ಷ ಆದರ್ಶ್‌ ಶೆಟ್ಟಿ, ಕೃಷ್ಣ ವೈ. ಶೆಟ್ಟಿ, ಡಾ| ಪ್ರಭಾಕರ್‌ ಶೆಟ್ಟಿ ಬೋಳ, ಸಿಎ ಐ. ಆರ್‌. ಶೆಟ್ಟಿ, ಇಂದ್ರಾಳಿ ದಿವಾಕರ್‌ ಶೆಟ್ಟಿ, ಆರ್‌. ಕೆ. ಶೆಟ್ಟಿ ಅವರ ಬಂಧು ಬಳಗ, ವಿವಿಧ ಸಂಘ-ಸಂಸ್ಥೆಗಳ, ಬಂಟರ ಸಂಘ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಹಿತೈಷಿಗಳು ಸಂತಾಪ ವ್ಯಕ್ತಪಡಿಸಿದರು. ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು. ಗಣೇಶ್‌ ಎರ್ಮಾಳ್‌ ಭಜನ ಸಂಕೀರ್ತನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next