Advertisement

Sri Vithoba Rakhumai Temple; ಧಾರ್ಮಿಕ ಆಚರಣೆ ಕಾನೂನಿನ ಉಲ್ಲಂಘನೆಯಲ್ಲ: ತೀರ್ಪು

02:07 AM Jan 11, 2024 | Team Udayavani |

ಮಂಗಳೂರು: ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀ ವಿಠೊಭ ರುಕುಮಾಯಿ ದೇವಸ್ಥಾನಕ್ಕೆ ಸಂಬಂಧಿಸಿದ ವ್ಯಾಜ್ಯದ ಕುರಿತು ನ್ಯಾಯಾಲಯ ತೀರ್ಪು ನೀಡಿದ್ದು “ಧಾರ್ಮಿಕ ಆಚರಣೆ ನಡೆಸುವುದು ಕಾನೂನಿನ ಉಲ್ಲಂಘನೆಯಾಗುವುದಿಲ್ಲ’ ಎಂದು ತೀರ್ಪಿನಲ್ಲಿ ಹೇಳಿದೆ.

Advertisement

2018ರ ಅ. 12ರಂದು ವರದರಾಯ್‌ ಪ್ರಭು ಅವರು ದೇಗುಲದ ಆಡಳಿತ ಮೊಕ್ತೇಸರ ಮರೋಳಿ ಸುರೇಂದ್ರ ಕಾಮತ್‌ ಅವರ ಮೇಲೆ ದಾವೆ ಹೂಡಿದ್ದರು. ದೇಗುಲದಲ್ಲಿ ನಡೆದಿರುವ ಪ್ರಶ್ನಾ ಕಾರ್ಯಕ್ರಮ, ಪವಮಾನ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಪೂಜೆ, ಕುಂಕುಮಾರ್ಚನೆಯನ್ನು ಮಾಡಿಸಲು ಆಡಳಿತ ಮೊಕ್ತೇಸರರಿಗೆ ಅವಕಾಶವಿಲ್ಲ. ಅವರು ಅದನ್ನು ಮಾಡಿಸುವ ಮೂಲಕ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆಪಾದಿಸಿದ್ದರು.

5 ವರ್ಷಗಳ ಕಾಲ ವಿಚಾರಣೆ ನಡೆದ ಬಳಿಕ ಜ. 5ರಂದು ಪ್ರಥಮ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು ಅಂತಿಮ ಆದೇಶ ನೀಡಿದ್ದು “ದೇವಸ್ಥಾನದಲ್ಲಿ ಆಯೋಜಿಸಲಾದ ಪ್ರಶ್ನಾ ಕಾರ್ಯಕ್ರಮ, ಪವಮಾನ ಅಭಿಷೇಕ ಮತ್ತು ವಿಶೇಷ ಪೂಜೆಗಳು ಧಾರ್ಮಿಕ ಆಚರಣೆಗಳಾಗಿವೆ. ಇದು ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟ ವಿಷಯ ಆಗಿಲ್ಲದೇ ಇರುವುದರಿಂದ ಇದಕ್ಕೂ ದೇವಸ್ಥಾನದ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ. ಅದು ದೇವಸ್ಥಾನದ ಧಾರ್ಮಿಕ ಆಚರಣೆಗಳಿಗೆ ಸಂಬಂಧಪಟ್ಟ ವಿಷಯಗಳಾಗಿರುವುದರಿಂದ ಕಾಲಕಾಲಕ್ಕೆ ನಡೆದುಕೊಂಡು ಬರಲೇಬೇಕಾಗಿದೆ. ಇಂತಹ ಆಚರಣೆಗಳನ್ನು ಅಥವಾ ಧಾರ್ಮಿಕ ಸಂಪ್ರದಾಯಗಳನ್ನು ನಡೆಸುವುದು ಕಾನೂನಿನ ಉಲ್ಲಂಘನೆಗಳಾಗುವುದಿಲ್ಲ’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ದೇಣಿಗೆ ಕಾನೂನಿನ ಉಲ್ಲಂಘನೆಯಲ್ಲ
ಶ್ರೀನಿವಾಸ್‌ ಕಾಮತ್‌ ಅವರಿಂದ ದೇವಸ್ಥಾನದಲ್ಲಿ 150 ರೂ. ಗಳನ್ನು ಸೇವಾ ಕಾಣಿಕೆ ಪಡೆದಿರುವುದು ತಪ್ಪು ಎಂದು ಹೇಳಲು ಆಗುವುದಿಲ್ಲ ಎಂದು ಹೇಳಿರುವ ನ್ಯಾಯಾಲಯ ದೇವಸ್ಥಾನಕ್ಕೆ ದೇಣಿಗೆ, ಕಾಣಿಕೆಯನ್ನು ಭಕ್ತರು ನೀಡುವುದು ಸಾಮಾನ್ಯ ಪ್ರಕ್ರಿಯೆ. ದೇಣಿಗೆಯನ್ನು ದೇವಸ್ಥಾನಕ್ಕೆ ನೀಡುವಾಗ ಅದನ್ನು ಸ್ವೀಕರಿಸಿ ರಶೀದಿಯನ್ನು ನೀಡಲು ಯಾರನ್ನಾದರೂ ನಿಯುಕ್ತಿಗೊಳಿಸಬೇಕಾಗುತ್ತದೆ. ಅದು ಕೂಡ ಕಾನೂನಿನ ಉಲ್ಲಂಘನೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ವರದರಾಯ ಪ್ರಭು ಆರೋಪ ಮಾಡಿರುವಂತೆ ಮರೋಳಿ ಸುರೇಂದ್ರ ಕಾಮತ್‌ ಅವರು ದೇಣಿಗೆ, ಕಾಣಿಕೆಯನ್ನು ಪಡೆದಿರುವುದು ತಪ್ಪಲ್ಲ ಎಂದು ಕೂಡ ತೀರ್ಪಿನಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next