Advertisement

ರಾಜ್ಯದಲಿ ಧಾರ್ಮಿಕ ಕೂಟಗಳಿಗೆ ಅವಕಾಶವಿಲ್ಲ: ಸಿಎಂ

04:48 PM Jul 20, 2020 | Suhan S |

ಮುಂಬಯಿ, ಜು. 19: ಕೋವಿಡ್ ಹಿನ್ನೆಲೆ ರಾಜ್ಯದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕೂಟಗಳನ್ನು ನಿಷೇ ಸಲಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪುನರುಚ್ಚರಿಸಿದ್ದಾರೆ.

Advertisement

ಆನ್‌ಲೈನ್‌ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮನಪಾ ಆಯುಕ್ತರನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಸೋಂಕು ಹರಡುವಿಕೆಯ ನಿಯಂತ್ರಣಕ್ಕೆ ಧಾರಾವಿ ಮಾದರಿ ಕಾರ್ಯಾಚರಣೆ ನಡೆಸಲು ಕರೆ ನೀಡಿದರು. ಹೊಸ ಕಂಟೈನ್‌ಮೆಂಟ್‌ ವಲಯ ಸೃಷ್ಟಿಯಾಗದಂತೆ ಎಚ್ಚರ ವಹಿಸಲು ನಿರ್ದೇಶನ ನೀಡಿದರು. ಕೋವಿಡ್‌ ಆಸ್ಪತ್ರೆಗಳಿಗೆ ಲೆಕ್ಕಪರಿಶೋಧಕರನ್ನು ನೇಮಕ ಮಾಡುವಂತೆಯೂ ಸಿಎಂ ಅಧಿಕಾರಿಗಳಿಗೆ ತಿಳಿಸಿದರು. ಪ್ರತಿ ಜಿಲ್ಲೆಯ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸಮರ್ಪಕ ಸೌಲಭ್ಯಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅಂತೆಯೇ, ಮಹಾತ್ಮಾ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆಯ ಅನುಷ್ಠಾನ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಲಭ್ಯತೆಯ ಬಗ್ಗೆ ನಿಗಾ ವಹಿಸಬೇಕು ಎಂದು ಸಿಎಂ ಕರೆ ನೀಡಿದರು.

ಪ್ರಸ್ತುತ ರಾಜ್ಯದಲ್ಲಿ 540 ಸೋಂಕಿತರು ವೆಂಟಿಲೇಟರ್‌ನಲ್ಲಿದ್ದಾರೆ ಎಂದ ಅವರು, ಇನ್ನು ಮುಂದೆ ರಾಜ್ಯದ ಪ್ರತಿ ಜಿಲ್ಲೆಗಳಿಗೆ ನೋಡಲ್‌ ಪರೀಕ್ಷಾ ಅಧಿಕಾರಿಯನ್ನು ನೇಮಿಸಲಾಗುವುದು ಎಂದರು. ಸರಕಾರವು ಸ್ವಾಬ್‌ ಸಂಗ್ರಹದ ಜತೆಗೆ ಕ್ವಿಕ್‌ ಜೆನ್‌ ಪರೀಕ್ಷೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ ಎಂದವರು ಹೇಳಿದರು. ಪ್ಲಾಸ್ಮಾ ದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ತಿಳಿಸಿದ ಅವರು, ದಾನಿಗಳಿಗೆ 2,000 ರೂ. ನೀಡಲಾಗುವುದು ಎಂದರು. ಸಭೆಯಲ್ಲಿ ಭಾಗವಹಿಸಿದ್ದ ಬಿಎಂಸಿ ಆಯುಕ್ತ ಐ. ಎಸ್‌. ಚಾಹಲ್‌ ಅವರು ಮಾತನಾಡಿ, ಮುಂಬಯಿ ಮಹಾನಗರ ಪ್ರದೇಶಕ್ಕೆ (ಎಂಎಂಆರ್‌) ಏಕೀಕೃತ ಕಮಾಂಡ್‌ ಸೆಂಟರ್‌ ಸ್ಥಾಪಿಸಬೇಕು ಮತ್ತು ಅಲ್ಲಿ ಎಲ್ಲ ಸೌಲಭ್ಯಗಳ ಬಗ್ಗೆ ಮಾಹಿತಿ ಲಭ್ಯವಾಗುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆಯನ್ನು ನೀಡಿದರು. ಎಂಎಂಆರ್‌ನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ರೋಗಲಕ್ಷಣವಿಲ್ಲದ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿಲ್ಲ ಎಂದು ಆಯುಕ್ತರು ಹೇಳಿದರು.

ಆರೋಗ್ಯ ಸಚಿವ ರಾಜೇಶ್‌ ಟೋಪೆ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಅಮಿತ್‌ ದೇಶ್ಮುಖ್‌ ಕೂಡ ಸಭೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next