ಮುಂಬಯಿ, ಆ. 24: ಬಂಟರ ಸಂಘ ಮುಂಬಯಿ ಇದರ ಬಂಟರ ಭವನದ ಆವರಣದಲ್ಲಿರುವ ಶ್ರೀ ಮಹಾವಿಷ್ಣು ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆ. 23ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.
ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಮತ್ತು ಪದಾಧಿಕಾರಿಗಳ ಮಾರ್ಗದರ್ಶನಲ್ಲಿ, ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಭಂಡಾರಿಯವರ ನೇತೃತ್ವದಲ್ಲಿ ಜರಗಿದ ವಿಶೇಷ ಪೂಜೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಇವರು ಶ್ರೀ ಮಹಾವಿಷ್ಣು ದೇವರಿಗೆ ಹಸ್ತು ಸಾವಿರ ತುಳಸೀ ಅರ್ಚನೆ ಮಾಡಿ, ಅಲಂಕಾರ ಸೇವೆಗೈದರು.
ಸಂಘದ ಮಹಿಳಾ ವಿಭಾಗದ ಸದಸ್ಯೆಯ ರಿಂದ ಭಜನ ಕಾರ್ಯಕ್ರಮ ಜರಗಿತು. ರಾತ್ರಿ 12.10 ರ ವರೆಗೆ ಚಂದ್ರೋದಯ ಕಾಲದಲ್ಲಿ ಶ್ರೀ ಕೃಷ್ಣ ಪೂಜೆ, ಅಘ್ಯರ್ ಪ್ರದಾನ ಇತ್ಯಾದಿ ಸತ್ಕರ್ಮಗಳನ್ನು ನೆರವೇರಿಸಲಾಯಿತು. ಅಪ ರಾಹ್ನ ಪುರುಷರು ಮತ್ತು ಮಹಿಳೆಯರಿಗಾಗಿ ತೆಂಗಿನಕಾಯಿ ಒಡೆಯುವ ಸ್ಪರ್ಧೆ ಮತ್ತು ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಿತು. ಪುರುಷರ ವಿಭಾಗದಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ಶೆಟ್ಟಿ ಹಾಗೂ ಮಹಿಳಾ ವಿಭಾಗದಲ್ಲಿ ಶ್ವೇತಾ ಚಂದ್ರಹಾಸ ರೈ, ಸರೋಜಿನಿ ಸೀತಾರಾಮ ಶೆಟ್ಟಿ ಅವರು ವಿಜೇತರಾದರು. ಮೊಸರು ಕುಡಿಕೆ ಒಡೆಯುವ ಸ್ಪರ್ಧೆಯಲ್ಲಿ ಇಂದ್ರಾಳಿ ದಿವಾಕರ ಶೆಟ್ಟಿ, ಜಗನ್ನಾಥ ರೈ ಹಾಗೂ ಸರೋಜಿನಿ ಸೀತಾರಾಮ ಶೆಟ್ಟಿ ಅವರು ಬಹುಮಾನ ಪಡೆದರು.
ಸಮಾರಂಭದಲ್ಲಿ ನಡೆದ ಮುದ್ದುಕೃಷ್ಣ ವೇಷ ಸ್ಪರ್ಧೆಯಲ್ಲಿ ಒಂದು ವರ್ಷ ವಯೋ ಮಿತಿಯಿಂದ 6 ವರ್ಷದ ವರೆಗಿನ ವಿಭಾಗದಲ್ಲಿ 21 ಪುಟಾಣಿಗಳು ಭಾಗವಹಿಸಿದರೆ, ಬಾಲ ಕೃಷ್ಣ ವೇಷ ಸ್ಪರ್ಧೆಯಲ್ಲಿ 7 ವರ್ಷದಿಂದ 11 ವರ್ಷದೊಳಗಿನ 20 ಮಕ್ಕಳು ಪಾಲ್ಗೊಂ ಡಿದ್ದರು. ಈ ಎರಡೂ ಸ್ಪರ್ಧೆಯಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಸಮಾನ ಅವಕಾಶ ಒದಗಿಸಲಾಗಿತ್ತು. ನಿರ್ಣಾಯಕರಾಗಿ ಮಧುಶ್ರೀ ಶೆಟ್ಟಿ ಮತ್ತು ಕೀರ್ತಿ ಶೆಟ್ಟಿ ಅವರು ಸಹಕರಿಸಿದರು. ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷ ವಹಿಸಿ ಮಾತನಾಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು, ಶ್ರೀ ಕೃಷ್ಣಾಷ್ಟಮಿಯ ಸಂದೇಶ ನೀಡಿ, ಪ್ರತಿಯೊಂದು ಧಾರ್ಮಿಕ ಹಬ್ಬಗಳಿಗೆ ಪುರಾಣ ಕತೆಗಳ ಹಿನ್ನೆಲೆಯಿದ್ದು, ಇವು ನಮ್ಮ ನಂಬಿಕೆಗಳನ್ನು ಆಧರಿಸಿಕೊಂಡಿರುತ್ತದೆ. ಶ್ರೀ ಕೃಷ್ಣಾಷ್ಟಮಿ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬದ ವಸ್ತು ಶ್ರೀಕೃಷ್ಣನ ಜನನ. ವಿಷ್ಣುವಿನ ದಶಾವತಾರಗಳಲ್ಲಿ ಕೃಷ್ಣಾವ ತಾರ ಎಂಟನೆಯದ್ದಾಗಿದೆ. ಭೂಭಾರ ತಗ್ಗಿಸುವುದ ಕ್ಕಾಗಿಯೇ ಶ್ರೀ ಕೃಷ್ಣ ಅವತರಿಸಿದ ಎಂಬ ಪ್ರತೀತಿ ಇದೆ. ಪುಟಾಣಿಗಳು ಇಂದು ವಿವಿಧ ರೀತಿಯಲ್ಲಿ ಶ್ರೀ ಕೃಷ್ಣನ ದರ್ಶನ ನೀಡಿದ್ದಾರೆ. ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ, ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಸಹಕಾರದೊಂದಿಗೆ ಅರ್ಥಪೂರ್ಣ ಭಕ್ತಿಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದಾರೆ. ಮಕ್ಕಳ ಪಾಲಕರು ಮಕ್ಕಳು ಅಭಿನಂದನಾರ್ಹರು ಎಂದರು.
ಅಧ್ಯಕ್ಷರನ್ನು ರವೀಂದ್ರನಾಥ ಎಂ. ಭಂಡಾರಿ ಅವರು ಗೌರವಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್ ಪಕ್ಕಳ ಸ್ಪರ್ಧಾ ಕಾರ್ಯಕ್ರಮ ಮತ್ತು ಸಭಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜಿನಿ ಎಸ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ ಶೆಟ್ಟಿ, ಸಂಘದ ಉಪಸಮಿತಿಗಳ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು, ಪ್ರಾದೇಶಿಕ ಸಮನ್ವಯಕರು, ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರುಗಳು, ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು