Advertisement

ವಿರೂಪಾಕ್ಷೇಶ್ವರ ಜಾತ್ರೆಯಿಂದ ಧಾರ್ಮಿಕ ಸಂಸ್ಕಾರ

12:21 PM Apr 11, 2019 | pallavi |
ಉಪ್ಪಿನಬೆಟಗೇರಿ: ಜನರನ್ನು ಸೇರಿಸಿ ಕೇವಲ ಜನಜಾತ್ರೆ ಮಾಡದೇ, ಜನರಿಗೆ ಧಾರ್ಮಿಕ ಸಂಸ್ಕಾರ ನೀಡುವ ಕಾರ್ಯವನ್ನು ಈ ಭಾಗದ ಪ್ರಮುಖ ವಿರೂಪಾಕ್ಷೇಶ್ವರ ಜಾತ್ರೆ ಮಾಡುತ್ತಿದೆ ಎಂದು ಅಮ್ಮಿನಭಾವಿ ಪಂಚಗೃಹ ಹಿರೇಮಠದ
ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀಗುರು ವಿರೂಪಾಕ್ಷೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಬುಧವಾರ ಜರುಗಿದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧು-  ವರರಿಗೆ ಶುಭ ಕೋರಿ ಆಶೀರ್ವಚನ ನೀಡಿದರು.
ಮಮದಾಪೂರ ವಿರಕ್ತಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಅತ್ತೆಯನ್ನು ತಾಯಿಯಂತೆ ಸೊಸೆ ಕಾಣಬೇಕು, ಸೊಸೆಯನ್ನು ಮಗಳಂತೆ ಅತ್ತೆ ಕಾಣಬೇಕು. ಅಂದಾಗ ಕುಟುಂಬ ಸಾಮರಸ್ಯದೊಂದಿಗೆ ನಡೆಯುವುದು. ನೂತನ ದಂಪತಿಗಳು ಮಜ್ಜಿಗೆಯಂತೆ ಇರದೇ ಹಾಲು ಮತ್ತು ನೀರಿನಂತೆ ಅನೋನ್ಯವಾಗಿ ಇರಬೇಕೆಂದರು. ನೂತನ ದಂಪತಿಗಳು ನೂರಾರು ಕಾಲ ಸುಖವಾಗಿ ಬಾಳಿ ಆರತಿಗೊಬ್ಬ ಮಗಳು ಕೀರುತಿಗೊಬ್ಬ ಮಗ ಎಂಬ ಕುಟುಂಬ ತತ್ವ ಪಾಲಿಸಬೇಕೆಂದು ಕಿವಿಮಾತು ಹೇಳಿದರು.
ನೇತೃತ್ವ ವಹಿಸಿದ್ದ ಸ್ಥಳೀಯ ಮೂರುಸಾವಿರ ವಿರಕ್ತಮಠದ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ ಮಾತನಾಡಿ, ನಾವು ಬಂದಿದ್ದು ಬರಿಗೈಲಿ, ಸತ್ತ ನಂತರ ನಾವು ಹೋಗುವುದೂ ಬರಿಗೈಲಿ. ಸತ್ತ ನಂತರವೂ ನಾವು ಬದುಕಬೇಕಾದರೆ ದಾನ-ಧರ್ಮ ಮಾಡಿ ಸಮಾಜಕ್ಕೆ ಪರೋಪಕಾರಿಯಾಗಿ ಬದುಕಬೇಕು ಎಂದರು.
ಲವಣಗಿರಿ ಉತ್ಸವದ ಜಾತ್ರಾ ಮಹೋತ್ಸವ ಅಂಗವಾಗಿ ಶ್ರೀಗುರು ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಒಟ್ಟು 9 ಜೋಡಿ ಹರ ಗುರು ಚರಮೂರ್ತಿಗಳ ದಿವ್ಯ ಸಾನಿಧ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಖೇಡಗಿ ವಿರಕ್ತಮಠದ ಶ್ರೀ ಶಿವಬಸವ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಸ್ವಾಮೀಜಿ, ಅಮೀನಗಡ ಪ್ರಭುಶಂಕರೇಶ್ವರ ಮಠದ ಶ್ರೀ ಶಂಕರರಾಜೇಂದ್ರ ಸ್ವಾಮೀಜಿ ಮತ್ತು ಗರಗ ಆರಕ್ಷಕ ಠಾಣೆ ಪಿಎಸ್‌ಐ ವೀರೇಶ ಮಠಪತಿ ಮಾತನಾಡಿದರು. ನರೇಂದ್ರ ಮಳೆಪ್ಪಜ್ಜನವರ ಮಠದ ಸಂಗಮೇಶ ಅಜ್ಜನವರು ಉಪಸ್ಥಿತರಿದ್ದರು.
ಗರಗದ ಶ್ರೀ ಮಡಿವಾಳೇಶ್ವರ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಅಶೋಕ ದೇಸಾಯಿ ಮಹಾಪ್ರಸಾದ ಸೇವೆ ಸಲ್ಲಿಸಿದರು. ಶಾಸಕ ಅಮೃತ ದೇಸಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ಜಿಪಂ ಸದಸ್ಯ ಕಲ್ಲಪ್ಪ ಪುಡಕಲಕಟ್ಟಿ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ವೀರಣ್ಣಾ ಪರಾಂಡೆ, ರವಿ ಯಲಿಗಾರ, ಪರಮೇಶ್ವರ ದೊಡವಾಡ, ರಾಮಲಿಂಗಪ್ಪ ನವಲಗುಂದ, ತವನಪ್ಪ ಅಷ್ಟಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಮಂಜುಳಾ ಬೆನಕನಹಳ್ಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಫಕ್ಕೀರಪ್ಪ ಮಡಿವಾಳರ ಸ್ವಾಗತಿಸಿ, ವಂದಿಸಿದರು. ಬಸವರಾಜ ಕಬ್ಬೂರ ನಿರೂಪಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next