Advertisement

ತತ್ವಗಳಿಂದ ಮಾತ್ರ ಧರ್ಮ ಉಳಿವು; ನಿಜಗುಣಾನಂದ ಸ್ವಾಮೀಜಿ

05:04 PM Jan 18, 2021 | Team Udayavani |

ಬೀದರ: ಜಾಗತಿಕ ಮಟ್ಟದಲ್ಲಿ ಮಾತನಾಡುವಾಗ ಭಾರತೀಯರಿಗೆ ಬುದ್ಧ, ಬಸವ, ಅಂಬೇಡ್ಕರ್‌ ಅವರಿಂದ ಘನತೆ ಸಿಗುತ್ತದೆ ಹೊರತು ಕಾಲ್ಪನಿಕ ಲೋಕದ ರಾಮನಿಂದ ಅಲ್ಲ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದಲ್ಲಿ ಬಸವಣ್ಣನನ್ನ ಉಲ್ಲೇಖೀಸುತ್ತಾರೆಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಗಳು ಹೇಳಿದರು.

Advertisement

ನಗರದ ರಂಗ ಮಂದಿರದಲ್ಲಿ ರವಿವಾರ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ತಳಹದಿಯ ಮೇಲೆ ಮಾನವೀಯ ಮೌಲ್ಯಗಳನ್ನೊಳಗೊಂಡ ತತ್ವ-ಸಿದ್ಧಾಂತಗಳನ್ನು ಪ್ರತಿಪಾದನೆ ಮಾಡುವ ಬುದ್ಧ, ಬಸವ ಮತ್ತು ಅಂಬೇಡ್ಕರರೇ ನಮಗೆ ಮಾರ್ಗದರ್ಶಕರು ಆಗುತ್ತಾರೆ ಹೊರತು ಕಾಲ್ಪನಿಕ ಲೋಕದ ರಾಮನಲ್ಲ ಎಂದರು.

ಬಸವಣ್ಣನನ್ನು ಅಭಿಮಾನ ಮತ್ತು ಅನುಭಾವದಿಂದ ಉಲ್ಲೇಖೀಸುವುದು ಎರಡೂ ಬೇರೆ ಬೇರೆ. ಯಾವುದೇ ಧರ್ಮ ಉಳಿಯಬೇಕಾದರೆ ತತ್ವಗಳಿಂದ ಮಾತ್ರವೇ ಹೊರತು ವ್ಯಕ್ತಿಯಿಂದಲ್ಲ. ಬಸವಣ್ಣನ ಧರ್ಮ ಉಳಿಯಬೇಕಾದರೆ ತತ್ವ ಉಳಿಯಬೇಕು. ತತ್ವ ಉಳಿಯುವವರೆಗೆ ಧರ್ಮ ಉಳಿಯಲ್ಲ. ವ್ಯಕ್ತಿ ಬಿಟ್ಟು ತತ್ವ ಕೇಂದ್ರಿತವಾದರೆ ಧರ್ಮ ಉಳಿಯಲು ಸಾಧ್ಯ. ಜಾಗತಿಕ ಮಹಾಸಭೆ ಹೋರಾಟವೂ ತತ್ವ ನಿಷ್ಠೆಯಾಗಿ ನಿಂತಿದ್ದರೆ ಮಾತ್ರ ಭವಿಷ್ಯ ಇರಲಿದೆ ಎಂದು ಸಲಹೆ ನೀಡಿದರು.

ಪ್ರತ್ಯೇಕ ಲಿಂಗಾಯತ ಧರ್ಮ ಮತ್ತು ಅದಕ್ಕಾಗಿ ಯಾಕೆ ಹೋರಾಟ ನಡೆಸಬೇಕೆಂಬ ಅರಿವಿನ ಕೊರತೆ ಇದೆ. ಸನಾತನ ಧರ್ಮದಲ್ಲಿನ ನ್ಯೂನತೆಗಳನ್ನು ಧಿಕ್ಕರಿಸಿ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದ್ದು, ಇದೊಂದು ರಾಷ್ಟ್ರ ಧರ್ಮ. ಎಲ್ಲರ ಜತೆ ಹೊಂದಾಣಿಕೆ ಮಾಡಿಕೊಳ್ಳುವಂಥ ಹೋರಾಟ ನಮಗೇಕೆ ಬೇಕು ಎಂದು ಪ್ರಶ್ನಿಸಿದ ನಿಜಗುಣ ಶ್ರೀಗಳು, ಎಲ್ಲರನ್ನು ದೊಡ್ಡಪ್ಪ, ಚಿಕ್ಕಪ್ಪ ಎನ್ನಿರಿ. ಆದರೆ, ಬಸವಣ್ಣನನೇ ನಮಗೆ ಅಪ್ಪ ಎಂಬ ಅರಿವು ಇರಲಿ ಎಂದರು.

ಲಿಂಗಾಯತ ಹೋರಾಟದ ಮೂಲಕ ಧರ್ಮ ಒಡೆದವರು ಎಂದು ನಮಗೆ ಸಾಕಷ್ಟು ಹಿಂಸೆ ನೀಡಲಾಯಿತು, ಅಸ್ಪೃಶ್ಯರಂತೆ ಕಾಣಲಾಯಿತು. ಬಸವಣ್ಣ ಹೇಳಿದ ತತ್ವವನ್ನೇ ಪ್ರತಿಪಾದಿಸಿ ಹೋರಾಟ ಮಾಡಿದ್ದೇವೆ. 21ನೇ ಶತಮಾನದಲ್ಲೇ ಇಂಥ ಪರಿಸ್ಥಿತಿ ಎದುರಿಸಿದ್ದರೆ, ಇನ್ನು 12ನೇ ಶತಮಾನದ ಕಾಲಕ್ಕೆ ಧರ್ಮ ಸ್ಥಾಪನೆ ಮಾಡುವಾಗ ಎಂತಹ ಸ್ಥಿತಿ ಇದ್ದಿರಬಹುದು ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

Advertisement

ನಾವು ಸನಾತನ ಧರ್ಮದ ತತ್ವ ವಿರೋಧಿಗಳು, ತತ್ವ ಪಾಲಿಸುವ ಬ್ರಾಹ್ಮಣರ ಮೇಲೆ ಪ್ರೀತಿವುಳ್ಳವರು. ಕರ್ನಾಟಕದ ಲಿಂಗಾಯತ ಮಠಾಧೀಶರು ಹೃದಯ
ಬಿಚ್ಚಿ ಮಾತನಾಡಲಿ. ಲಿಂಗಾಯತ ರಾಜಕಾರಣಿಗಳು ಅವಕಾಶವಾದಿ ಆಗಬೇಡಿ. ನೀವು ಯಾವ ಪಕ್ಷದಲ್ಲಿಯಾದರೂ ಇರಿ, ಲಿಂಗಾಯತರು ಎಂಬ ಹೆಮ್ಮೆ ನಿಮಗಿರಲಿ ಎಂದು ಕಿವಿಮಾತು ಹೇಳಿದರು. ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಎಸ್‌.ಎಂ ಜಾಮದಾರ್‌ ಆನ್‌ಲೈನ್‌ ಮೂಲಕ ಆಶಯ ನುಡಿ ಹೇಳಿದರು.

ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಬಿ.ಜಿ ಪಾಟೀಲ ಉದ್ಘಾಟಿಸಿದರು. ಮಹಾಸಭಾ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಅಧ್ಯಕ್ಷತೆ ವಹಿಸಿದ್ದರು. ಡಾ|ಬಸವಲಿಂಗ ಪಟ್ಟದ್ದೇವರು, ಡಾ| ಶಿವಾನಂದ ಸ್ವಾಮಿಗಳು, ಸಿದ್ಧರಾಮೇಶ್ವರ ಸ್ವಾಮಿಗಳು, ಶ್ರೀ ಸಿದ್ಧರಾಮ ಶರಣರು ಬೆಲ್ದಾಳ್‌, ಡಾ| ಗಂಗಾಬಿಕೆ ತಾಯಿ, ಪಂಚಾಕ್ಷರಿ ಸ್ವಾಮಿಗಳು, ಪಂಚಯ್ಯ ಸ್ವಾಮಿ, ಡಾ| ಶೈಲೇಂದ್ರ ಬೆಲ್ದಾಳೆ, ಬಾಬು ವಾಲಿ, ವಿಜಯಕುಮಾರ ಪಾಟೀಲ ಗಾದಗಿ, ಡಿಕೆ ಸಿದ್ರಾಮ, ಬಾಬುರಾವ ದಾನಿ, ಶರಣಪ್ಪ ಮಿಠಾರೆ, ಬಿಜಿ ಶೆಟಕಾರ, ಆನಂದ ದೇವಪ್ಪ, ಶಿವಶರಣಪ್ಪ ವಾಲಿ, ಬಸವರಾಜ ಪಾಟೀಲ ಅಷ್ಟೂರ ಇನ್ನಿತರರು ಇದ್ದರು.

ನನ್ನನ್ನು ಸೈಲೆಂಟ್‌ ಮಾಡಲು ಎಲ್ಲ ರೀತಿಯ ಪ್ರಯತ್ನ ನಡೆದಿವೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಿಂದ ನೀವು ಹಿಂದೆ ಬಂದರೆ 500 ಕೋಟಿ ರೂ. ಆಸ್ತಿಯ ಮಠ ಕೊಡುತ್ತೇನೆಂದು ಸನಾತನ ಧರ್ಮದ ಮಠಾ ಧೀಶರೊಬ್ಬರು ನನಗೆ ಆಫರ್‌ ನೀಡಿದ್ದರು. ನನ್ನ ನಾಲಿಗೆ, ಹೃದಯ ಮತ್ತು ದೇಹ ಬಸವಣ್ಣನಿಗೆ ಮಾತ್ರ ಸೇರಿದ್ದೇ ಹೊರತು ಸನಾತನವಾದಿಗಳಿಗಲ್ಲ ಎಂದು ಅವರಿಗೆ ಕೈಮುಗಿದು ಹೇಳಿದ್ದೆ. ಈ ಬಗ್ಗೆ ಶೀಘ್ರದಲ್ಲೇ ಕ್ಯಾಸೆಟ್‌ ಬಿಡುತ್ತೇನೆ. ಲಿಂಗಾಯತ ಧರ್ಮ ಸ್ವೀಕರಿಸಿರುವುದು ನನಗೆ ಹೆಮ್ಮೆ ಇದೆ. ಧರ್ಮದ ಮೂಲಕ ಪ್ರಚಾರ ಗಿಟ್ಟಿಸಿ ನಾನು ದೊಡ್ಡವನೂ ಆಗಬೇಕಿಲ್ಲ. ಗಂಟೆ ಬಾರಿಸಿದರೆ ನನಗೆ ಎಲ್ಲವೂ ಸಿಗುತ್ತದೆ. ಸತ್ಯವನ್ನು ಪ್ರತಿಪಾದಿಸುವುದರಿಂದ ನನ್ನನ್ನು ದೂರ ಸರಿಸಲಾಗುತ್ತದೆ. 

ಶ್ರೀ ನಿಜಗುಣಾನಂದ ಸ್ವಾಮಿಗಳು,ಬೈಲೂರು ನಿಷ್ಕಲ ಮಂಟಪ

ಜಾಗತಿಕ ಲಿಂಗಾಯತ ಮಹಾಸಭಾ ವೀರಶೈವ ಸೇರಿ ಯಾವುದೇ ಧರ್ಮದ ವಿರುದ್ಧ ಸ್ಥಾಪಿಸಿದ್ದಲ್ಲ. ಬಸವ ಧರ್ಮದ  ಆಶಯಗಳನ್ನು ಜನಮನದಲ್ಲಿ ಬಿತ್ತುವುದು ಮುಖ್ಯ ಉದ್ದೇಶ. ನೂತನ ಅನುಭವ ಮಂಟಪ ನಿರ್ಮಾಣ ಸ್ವಾಗತಾರ್ಹ ಕಾರ್ಯ. ಆದರೆ, ಮಂಟಪ ಕೇವಲ ಸ್ಥಾವರ ಆಗುವುದು ಬೇಡ, ಜಂಗಮ ಆಗಲಿ. ಬಸವಣ್ಣನ ವಿಚಾರ, ವಚನಗಳ ಚರ್ಚೆ ಆಗಬೇಕು. ಹೊಸದಾಗಿ ಸಿಕ್ಕಿರುವ ಲಕ್ಷಾಂತರ ವಚನಗಳ ಸಂಶೋಧನೆಗೆ ಮಂಟಪ ವೇದಿಕೆ ಆಗಬೇಕು. ಎಲ್ಲ ವಿರಕ್ತ ಮಠಗಳು ಬಯಲಿಗೆ ಬರಲಿ. ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆ ಸಿಕ್ಕರೆ ಬಸವಣ್ಣ ವಿಶ್ವ ಮಾನವ ಆಗುವರು.

ಬಿ.ಜಿ ಪಾಟೀಲ, ರಾಷ್ಟ್ರೀಯ ಪ್ರಧಾನ
ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Advertisement

Udayavani is now on Telegram. Click here to join our channel and stay updated with the latest news.

Next