Advertisement

ಧರ್ಮ ರಾಜಕೀಯದ ಹಿಂದೆ ಮತಬೇಟೆ ತಂತ್ರ!

07:40 AM Jul 26, 2017 | Harsha Rao |

ಬೆಂಗಳೂರು: ಜಾತಿ ಜನಗಣತಿ, ಒಳ ಮೀಸಲಾತಿ ಹಾಗೂ ವೀರಶೈವ-ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆಯ ಸೂಕ್ಷ್ಮ ವಿಚಾರ ಮುಂದಿಟ್ಟು ಆಡಳಿತಾರೂಢ ಕಾಂಗ್ರೆಸ್‌ ಅದರಲ್ಲೂ ಸಿಎಂ ಸಿದ್ದರಾಮಯ್ಯ “ಜೇನುಗೂಡಿ’ಗೆ ಕಲ್ಲು ಹಾಕಿದ್ದು ಇದರ ಹಿಂದೆ ಪಕ್ಕಾ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರವಿದೆ ಎಂಬ ವಾಖ್ಯಾನಗಳು
ಕೇಳಿಬರುತ್ತಿವೆ.

Advertisement

ಮೂರೂ ಸೂಕ್ಷ್ಮ ವಿಚಾರಗಳಾಗಿದ್ದು, ಮೇಲ್ನೋಟಕ್ಕೆ ಈ ಎಲ್ಲ ವಿಚಾರಗಳು ಮುಂದಿನ ವಿಧಾನಸಭೆ ಚುನಾವಣೆ ಕೇಂದ್ರೀಕೃತವಾಗಿರುವುದು ಹೌದು. ಯಾಕೆಂದರೆ, ಈ ವಿಚಾರದಲ್ಲಿ ಪರ-ವಿರೋಧ ಅಥವಾ ಬೇಕು-ಬೇಡಗಳ ಚರ್ಚೆ, ಹೋರಾಟದಿಂದ ವಿವಾದದ ಸ್ವರೂಪ ಪಡೆದು ಅಂತಿಮವಾಗಿ ಪ್ರಬಲ ಸಮುದಾಯದ ಮತ ಒಂದೇ ಪಕ್ಷದತ್ತ ವಾಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ.

ಇದರಿಂದ ಆಡಳಿತಾರೂಢ ಕಾಂಗ್ರೆಸ್‌ಗೆ ಲಾಭವಾಗದಿದ್ದರೂ ದೊಡ್ಡ ಮಟ್ಟದ ನಷ್ಟವಂತೂ ಆಗುವುದಿಲ್ಲ. ಆದರೆ, ಒಂದು ಪಕ್ಷದತ್ತ ಹೋಗುವ ಮತ ತಡೆಯುವ ಪ್ರಯತ್ನವಂತೂ ಫ‌ಲಿಸಬಹುದು. ಅದು ಪರೋಕ್ಷವಾಗಿ ಲಾಭವೇ ಎಂಬ ಲೆಕ್ಕಾಚಾರ ಇದರ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ವೀರಶೈವ ಮಹಾಸಭಾ ಹಾಗೂ ಕೆಲವು ಲಿಂಗಾಯತ-ವೀರಶೈವ ಮಠಾಧೀಶರ ಬೆಂಬಲ ಪಡೆದು ಕಾಂಗ್ರೆಸ್‌ನಲ್ಲಿರುವ ಲಿಂಗಾಯತ ಸಮುದಾಯದ ಎಲ್ಲ ಸಚಿವರು -ಮುಖಂಡರನ್ನು ಇದಕ್ಕಾಗಿ ಹೋರಾಟಕ್ಕೆ ಸಜ್ಜುಗೊಳಿಸಿರುವುದರ ಹಿಂದೆ “ಮತಬೇಟೆಯ ರಣತಂತ್ರ’ವಿದೆ. ಇದಕ್ಕೆ ಹೈಕಮಾಂಡ್‌ ಶ್ರೀರಕ್ಷೆಯೂ ಇದೆ ಎಂದು ಹೇಳಲಾಗಿದೆ.

ಜಾತಿ ಜನಗಣತಿ ವಿಚಾರದಲ್ಲಿ ದೊಡ್ಡ ಚರ್ಚೆ ನಡೆದು, ಗಣತಿ ನಂತರ ವರದಿ ಬಿಡುಗಡೆ ಕುತೂಹಲ ಘಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ವರದಿಯಲ್ಲಿ ಯಾವ್ಯಾವ ಸಮುದಾಯದ ಎಷ್ಟೆಷ್ಟು ಜನಸಂಖ್ಯೆ ಹೊಂದಿದೆ ಎಂಬ ಮಾಹಿತಿ ಇದೆ. ಅದು
ಬಿಡುಗಡೆಯಾದರೆ ಚುನಾವಣೆ ವರ್ಷವಾದ್ದರಿಂದ ಆ ವರದಿಯಲ್ಲಿನ ಅಂಕಿ-ಅಂಶಗಳ ಆಧಾರದಲ್ಲೇ ರಾಜಕೀಯ ಪ್ರಾತಿನಿಧ್ಯ (ಟಿಕೆಟ್‌ ಹಂಚಿಕೆ) ನಡೆಯಬೇಕು ಎಂಬ ಕೂಗು ಕೇಳಿಬರುವುದಂತೂ ಸಹಜ. ಈಗಾಗಲೇ ಹೆಚ್ಚು ಸವಲತ್ತು,
ಮೀಸಲು ಪಡೆಯುತ್ತಿರುವ ವರ್ಗದ ಪಾಲು ಕಡಿಮೆಯಾಗಲಿದೆ. ಅದು ಪರ-ವಿರೋಧ ಹೋರಾಟಕ್ಕೂ ಕಾರಣವಾಗಬಹುದು.

ಒಳ ಮೀಸಲಾತಿ ದಲಿತ ಸಮುದಾಯದಲ್ಲಿ ದಶಕಗಳಿಂದ ನಡೆಯುತ್ತಿರುವ ಚರ್ಚೆ. ಈ ಬಗ್ಗೆ ನ್ಯಾ. ಸದಾಶಿವ ಆಯೋಗದ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ. ಎಸ್‌ಸಿ ಪಟ್ಟಿಯಲ್ಲಿರುವ 101 ಪಂಗಡಗಳಿಗೆ ಒಳ ಮೀಸಲಾತಿ ಕಲ್ಪಿಸುವ
ಪ್ರಸ್ತಾವನೆಯ ಈ ವರದಿ ಒಪ್ಪಬಾರದು ಮತ್ತು ಒಪ್ಪಬೇಕೆಂಬ ವಿಚಾರದಲ್ಲೂ ಹೋರಾಟ ನಡೆಯುತ್ತಿದೆ. ಇದರ ಬಗ್ಗೆ ಸರ್ಕಾರ ಏನೇ ತೀರ್ಮಾನ ಕೈಗೊಂಡರೂ ಜೇನುಗೂಡಿಗೆ ಕಲ್ಲು ಎಸೆದಂತೆಯೇ.

Advertisement
Advertisement

Udayavani is now on Telegram. Click here to join our channel and stay updated with the latest news.

Next