Advertisement

ರಾಜಕೀಯ ಲಾಭಕ್ಕೆ ಧರ್ಮ ಬಳಸಿಕೊಳ್ಳಬಾರದು

11:53 AM Jan 19, 2018 | Team Udayavani |

ಮೈಸೂರು: ರಾಜಕೀಯದಲ್ಲಿ ಧರ್ಮ ಇರಬೇಕು. ಆದರೆ, ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೆಲಸ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದ ಕೃಷಿ ಮೇಳ, ವಸ್ತುಪ್ರದರ್ಶನ ಮತ್ತು ಸಾಂಸ್ಕೃತಿಕ ಮೇಳಗಳ ಸಮಾರೋಪ ಸಮಾರಂಭದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

Advertisement

ದಯೆಯೇ ಧರ್ಮದ ಮೂಲವಯ್ಯ, ದಯೆ ಇಲ್ಲದ ಧರ್ಮ ಯಾವುದಯ್ಯ ಎನ್ನುವ ಮೂಲಕ ಬಸವಣ್ಣ, ಧರ್ಮ ಎಂದರೆ ಏನು ಎಂಬುದನ್ನು ಬಹಳ ಸುಲಭವಾಗಿ ಹೇಳಿದ್ದಾರೆ. ಧರ್ಮಕ್ಕಾಗಿ ನಾವಿಲ್ಲ, ನಮಗಾಗಿ ಧರ್ಮ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.

ಮನುಷ್ಯ-ಮನುಷ್ಯರ ನಡುವೆ ಪರಸ್ಪರ ಪ್ರೀತಿಯಿಂದ ಇರಬೇಕು. ಆದರೆ, ಕೆಲವರು ಇಂತಹ ಪ್ರೀತಿಯನ್ನು ಮರೆಮಾಚಿ ದ್ವೇಷವನ್ನು ತುಂಬುತ್ತಿದ್ದಾರೆ. ಅಂಥವರ ಬಗ್ಗೆ ಎಚ್ಚರದಿಂದ ಇದ್ದರೆ ಸಮಾಜದಲ್ಲಿ ಸಾಮರಸ್ಯ, ಭಾತೃತ್ವ ಬೆಳೆಯಲು ಸಾಧ್ಯ ಎಂದು ಹೇಳಿದರು.

ಮನುಷ್ಯತ್ವಕ್ಕಿಂತ ಮೇಲಿನ ಧರ್ಮವಿಲ್ಲ: ರಾಜಕೀಯ ಪಕ್ಷಗಳು ಧರ್ಮ ಕೇಂದ್ರ ಮಾಡಬೇಕು. ಧರ್ಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಕೆಲಸ ಮಾಡಬಾರದು. ರಾಜಕೀಯದಲ್ಲಿ ಧರ್ಮ ಇರಬೇಕು. ಧರ್ಮ ಇಲ್ಲದಿದ್ದರೆ ಅದು ಮನುಷ್ಯತ್ವ ಇಲ್ಲದ ರಾಜಕಾರಣ ವಾಗುತ್ತದೆ. ಬಸವಾದಿ ಶರಣರು, ಸಂತರು, ಸೂಫಿಗಳು ಇದನ್ನೇ ಹೇಳಿದ್ದಾರೆ. ಮನುಷ್ಯತ್ವಕ್ಕೆ ವಿರುದ್ಧವಾದ ವಿಚಾರಗಳು ಯಾವುದೇ ಧರ್ಮದಲ್ಲೂ ಇಲ್ಲ ಎಂದರು.

ಕರ್ನಾಟಕ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯಾಗಿ ಹಾಡಿ, ಅದರ ವಿರುದ್ಧವಾಗಿ ನಡೆದುಕೊಳ್ಳುವುದು ದುರಂತ. ಇನ್ನೊಬ್ಬರನ್ನು ದ್ವೇಷಿಸುವ ಬದಲು ಪ್ರೀತಿಸಬೇಕು. ಜೀವನದಲ್ಲಿ ಸ್ವಲ್ಪವಾದರು ಈ ಮಾತುಗಳನ್ನು ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಅಶಾಂತಿಯ ತೋಟವಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು.

Advertisement

ಹಸಿದವನಿಗೆ ಧರ್ಮ ಬೇಕಿಲ್ಲ: ಹಸಿದವನಿಗೆ ಧರ್ಮ ಅರ್ಥವಾಗುವುದಿಲ್ಲ. ಅದಕ್ಕಾಗಿ ಅನ್ನಭಾಗ್ಯ ಯೋಜನೆ ಜಾರಿ, ಇಂದಿರಾ ಕ್ಯಾಂಟೀನ್‌ ಸ್ಥಾಪನೆ ಮಾಡಿ ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಲು ಕೆಲಸ ಮಾಡುತ್ತಿದ್ದೇವೆ. ಯಾವುದೇ ಜಾತೀ ಬೇಧವಿಲ್ಲದೆ ರಾಜ್ಯದ 1.80 ಲಕ್ಷ ಪದವಿಪೂರ್ವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್‌ ನೀಡಲಾಗುತ್ತಿದೆ. ಇದರಿಂದ ಜಾnನ ಸಮನಾಗಿ ಹಂಚಿಕೆಯಾಗಿ ಗುಣಮಟ್ಟದ ಶಿಕ್ಷಣ ದೊರೆತರೆ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

ಬಸವಣ್ಣ ಕಾಯಕ ಮತ್ತು ದಾಸೋಹ ತತ್ವವನ್ನು ಪ್ರತಿಪಾದನೆ ಮಾಡುವ ಮೂಲಕ ವೈಜಾnನಿಕ ಮತ್ತು ವೈಚಾರಿಕೆ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಕಾಯಕವೆಂದರೆ ಉತ್ಪಾದನೆ, ದಾಸೋಹವೆಂದರೆ ವಿತರಣೆ. ಈ ಮೂಲಕ ಒಬ್ಬರ ಮೇಲೆ ಒಬ್ಬರು ಕುಳಿತುಕೊಳ್ಳುವ ಸಮಾಜದ ವ್ಯವಸ್ಥೆಯನ್ನು ತೊಡೆಯಲು ಬಸವಣ್ಣ ಪ್ರಯತ್ನಿಸಿದ್ದರು, ಆದರೆ, ಅದನ್ನು ಪ್ರೋತ್ಸಾಹಿಸುವರು ಇನ್ನೂ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೃದು-ಉಗ್ರ ಹಿಂದುತ್ವ ಎಂಬುದಿಲ್ಲ: ಬಸವಣ್ಣ ಏಕದೇವೋಪಾಸನೆ ಪ್ರತಿಪಾದನೆ ಮಾಡಿದ್ದರು. ಆದರೆ, ಇಂದು ದೇವರನ್ನು ಉಗ್ರ, ಮೃದು ದೇವರನ್ನಾಗಿ ವಿಂಗಡಿಸಿ ಇಟ್ಟಿದ್ದಾರೆ. ಮೃದು-ಉಗ್ರ ಹಿಂದುತ್ವ ಎಂಬುದಿಲ್ಲ. ದೇವಸ್ಥಾನಕ್ಕೆ ಹೋದವರು ಮಾತ್ರ ಹಿಂದುಗಳಲ್ಲ, ಮನುಷ್ಯತ್ವ ಇರುವವರು ಹಿಂದುಗಳು. ದೇವರನ್ನು ಹುಡುಕಿಕೊಂಡು ಕಾಶ್ಮೀರಕ್ಕೆ ಹೋಗುವುದಲ್ಲ.

ನಮ್ಮೊಳಗೆ ದೇವರನ್ನು ಕಂಡುಕೊಳ್ಳಬೇಕು. ಮಾನವೀಯ ಮೌಲ್ಯಗಳಿಗೆ ಗೌರವಕೊಡುವ ಕೆಲಸವಾಗಬೇಕು. ಜನರಿಗೆ ವೈಚಾರಿಕೆ ಜಾnನ ಕೊಡಬೇಕು. ಗೊಡ್ಡು ಸಂಪ್ರದಾಯ ತಿಳಿಸಿದರೆ ಜನ ಜಾಗೃತರಾಗಲ್ಲ. ಇದಕ್ಕಾಗಿಯೇ ನಮ್ಮ ಸರ್ಕಾರ ಮೌಡ್ಯ ಪ್ರತಿಬಂಧಕ ಕಾಯ್ದೆ ತಂದಿದ್ದು, ಇನ್ನಷ್ಟು ಸುಧಾರಣೆಯಾಗಬೇಕಿದೆ ಎಂದರು.

ಸುತ್ತೂರು ಮಠಾಧೀಶರಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಬೆಳಗಾವಿಯ ನಾಗನೂರು ರುದ್ರಾಕ್ಷಿ ಮಠದ ಡಾ.ಸಿದ್ಧರಾಮ ಸ್ವಾಮೀಜಿ, ಆನಂದಪುರಂ ಶ್ರೀ ಮುರುಘರಾಜೇಂದ್ರ ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಉಪಸ್ಥಿತರಿದ್ದರು. ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ, ತನ್ವೀರ್‌, ಎಚ್‌.ಕೆ.ಪಾಟೀಲ್‌, ಶರಣಪ್ರಕಾಶ ಪಾಟೀಲ, ವಿಧಾನಪರಿಷತ್‌ ಸದಸ್ಯೆ, ನಟಿ ತಾರಾ ಅನುರಾಧ ಮಾತನಾಡಿದರು.

ಸಚಿವೆ ಡಾ.ಗೀತಾ ಮಹದೇವಪ್ರಸಾದ್‌, ಸಂಸದ ಆರ್‌.ಧ್ರುವನಾರಾಯಣ, ಶಾಸಕರಾದ ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್‌, ಜಯಣ್ಣ, ಪುಟ್ಟರಂಗಶೆಟ್ಟಿ, ಧರ್ಮಸೇನ, ಊಟಿ ಶಾಸಕ ಗಣೇಶ್‌, ಮಾಜಿ ಶಾಸಕರಾದ ಸತ್ಯನಾರಾಯಣ, ಎಸ್‌.ಬಾಲರಾಜ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next