Advertisement

ಧರ್ಮ ಎಂದೂ ಭೇದ ಭಾವ ಮಾಡಲ್ಲ

10:13 AM Jan 15, 2019 | |

ಚಿಕ್ಕಮಗಳೂರು: ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ಮತ್ತು ರೇಣುಕಾಚಾರ್ಯ ಟ್ರಸ್ಟ್‌ನ ಆಶ್ರಯದಲ್ಲಿ ನಗರದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಕಾಶಿ ಜಂಗಮವಾಡಿ ಮಠದ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯರಿಂದ ಮೂರು ದಿನಗಳ ಕಾಲ ನಡೆದ ಧಾರ್ಮಿಕ ಪ್ರವಚನ ಭಾನುವಾರ ರಾತ್ರಿ ಸಮಾಪನಗೊಂಡಿತು.

Advertisement

ವೀರಶೈವ ಧರ್ಮದ ಪ್ರಮುಖ ಗ್ರಂಥ ಸಿದ್ದಾಂತ ಶಿಖಾಮಣಿಯ ಬಗ್ಗೆ ಕಾಶಿ ಮಠಾಧೀಶರು ಮೂರು ದಿನಗಳ ಕಾಲ ಉಪನ್ಯಾಸ ನೀಡಿದರು. ಜಗದ್ಗುರು ಪಂಚಾಚಾರ್ಯ ಸೇವಾ ಸಮಿತಿ ವತಿಯಿಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಲಾಯಿತು.

ಇದೇ ವೇಳೆ ಕಾಶಿ ಮಠದ ವತಿಯಿಂದ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಶ್ರೀಗಳು 25 ಸಾವಿರ ರೂ.ಗಳನ್ನು ನೀಡಿದರು. ಪಂಚಾಚಾರ್ಯ ಸಮಿತಿ ಮತ್ತು ರೇಣುಕಾಚಾರ್ಯ ಟ್ರಸ್ಟ್‌ನ ಪದಾಧಿಕಾರಿಗಳು, ದಾನಿಗಳು, ಗಣ್ಯರು ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಗುರುರಕ್ಷೆ ನೀಡಿದರು.

ಅಂತಿಮ ದಿನದ ಪ್ರವಚನ ನೀಡಿದ ಕಾಶಿ ಮಠಾಧೀಶರಾದ ಜಗದ್ಗುರು ಡಾ|ಚಂದ್ರಶೇಖರ ಶಿವಾಚಾರ್ಯರು ಜಾತಿ, ಮತ, ಧರ್ಮಗಳ ನಡುವೆ ತಾರತಮ್ಯ ಮತ್ತು ಲಿಂಗಭೇದವನ್ನು ಮನುಷ್ಯರಾದ ನಾವು ಮಾಡಿಕೊಂಡಿದ್ದೇವೆಯೇ ಹೊರತು ದೇವರಾಗಲಿ ಅಥವಾ ಧರ್ಮವಾಗಲಿ ಮಾಡಿಲ್ಲ ಎಂದರು.

ಎಲ್ಲಾ ಮತಗಳು ಮತ್ತು ಧರ್ಮಗಳು ಮಾನವರನ್ನು ಒಂದುಗೂಡಿಸುವುದಕ್ಕೆ ಇವೆಯೇ ಹೊರತು ಒಡೆಯುವುದಕ್ಕಲ್ಲ. ನೀರು, ಗಾಳಿ, ಸೂರ್ಯ ಮತ್ತು ಚಂದ್ರ ಯಾವುದೇ ತಾರತಮ್ಯ ಮಾಡುವುದಿಲ್ಲ. ಪ್ರಪಂಚದ ಎಲ್ಲಾ ಮೂಲೆಯಲ್ಲೂ ಒಂದೇ ರೀತಿ ಇರುತ್ತಾರೆ. ಅದೇ ರೀತಿ ಧರ್ಮ ಸಹ ಭೇದಭಾವ ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.

Advertisement

ವಿಧಾನ ಪರಿಷತ್‌ ಮಾಜಿ ಸಭಾಪತಿ ಡಾ|ಬಿ.ಎಲ್‌.ಶಂಕರ್‌ ಮಾತನಾಡಿ, ಸಮಾಜದಲ್ಲಿರುವ ತಾರತಮ್ಯವನ್ನು ನಿವಾರಿಸಲು ಮಠಾಧೀಶರುಗಳು ಮುಂದಾಗಬೇಕು ಎಂದು ಮನವಿ ಮಾಡಿದರು. ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೀರಶೈವರು ವಿಭೂತಿ ಧರಿಸುವುದು, ಲಿಂಗಧಾರಣೆ ಮಾಡುವುದು ಸೇರಿದಂತೆ ತಮ್ಮ ಧರ್ಮವನ್ನು ಚಾಚೂ ತಪ್ಪದೆ ಪಾಲಿಸಬೇಕು. ಆ ಮೂಲಕ ಪರಂಪರೆ ಮುಂದುವರಿಸಬೇಕು ಎಂದು ಸಲಹೆ ಮಾಡಿದರು.

ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಭೇರುಗಂಡಿಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಹುಲಿಕೆರೆಯ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರೇಣುಕಾಚಾರ್ಯ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್‌, ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ಎ.ಶಿವಶಂಕರ್‌, ಸಿಪಿಐನ ಪಿ.ವಿ.ಲೋಕೇಶ್‌, ಎಚ್.ಎಂ.ರೇಣುಕಾರಾಧ್ಯ, ಆಲ್ದೂರು ವೀರಶೈವ ಸಮಾಜದ ಅಧ್ಯಕ್ಷ ಇ.ಸಿ.ಉಮೇಶ್‌, ನಿವೃತ್ತ ಉಪನ್ಯಾಸಕ ಬಿ.ತಿಪ್ಪೇರುದ್ರಪ್ಪ, ಪಂಚಾಚಾರ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಬಿ.ನಂದೀಶ್‌, ಶ್ರೀದೇವಿ ಗುರುಕುಲದ ಡಾ| ದಯಾನಂದ ಶಾಸ್ತ್ರಿ, ವೀರಶೈವ ಮಹಾಸಭಾ ಸಹಕಾರ್ಯದರ್ಶಿ ಎಂ.ಸಿ.ಶಿವಾನಂದ ಸ್ವಾಮಿ, ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಣಾಪುರ, ನಗರಸಭೆ ಸದಸ್ಯ ಬಿ.ಆರ್‌.ದಿನೇಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next