Advertisement

ಪರಿಹಾರ ಕಾರ್ಯ ಮಹತ್ವದ್ದು

01:02 PM Aug 13, 2019 | Suhan S |

ಕಾರವಾರ: ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ನಂತರ ಪರಿಹಾರ ಕಾರ್ಯಗಳು ಅತೀ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮನ್ವಯ, ಸಹಕಾರದಿಂದ ಎಲ್ಲಾ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮೌದ್ಗಿಲ್ ತಿಳಿಸಿದರು.

Advertisement

ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಎಲ್ಲ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ನೀರಿನ ಮಟ್ಟ ಇಳಿಮುಖವಾಗುತ್ತಿದೆ. ಅಪಾರ ಆಸ್ತಿ-ಪಾಸ್ತಿ ಹಾನಿಗಳಾಗಿರುವುದರಿಂದ ಸಂತ್ರಸ್ತರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಅಧಿಕಾರಿಗಳು ಉದಾರತೆ, ಪ್ರಾಮಾಣಿಕತೆ ಪ್ರದರ್ಶಿಸಿ ಪ್ರವಾಹ ನಂತರದ ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.

ಸಂಬಂಧಿಸಿದ ಮೇಲಾಧಿಕಾರಿಗಳು ಹಾಗೂ ನೋಡಲ್ ಅಧಿಕಾರಿಗಳು ಸಹಕಾರದಿಂದ ಸಮನ್ವಯತೆ ಸಾಧಿಸಿ ಸಂತ್ರಸ್ತರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ತಿಳಿಸಿದರು.

ಪರಿಹಾರ ಕಾರ್ಯಕ್ಕೆ ಅನುದಾನ ಕೊರತೆಯಿಲ್ಲ. ಸಂತ್ರಸ್ತರಿಗೆ ಹಾಗೂ ಜಾನುವಾರುಗಳಿಗೆ ಅಗತ್ಯ ಸೌಕರ್ಯಗಳನ್ನು ಒದಗಿಸತಕ್ಕದ್ದು. ಪ್ರತಿಕೇಂದ್ರದಲ್ಲಿ ಅಗತ್ಯ ಆಹಾರಧಾನ್ಯಗಳನ್ನು ಸಂಗ್ರಹಿಸಲಾಗಿದ್ದು, ಅಕ್ಕಿ, ಗೋದಿ, ಎಣ್ಣೆ, ತರಕಾರಿ, ಗ್ಯಾಸ್‌ ಸಿಲಿಂಡರ್‌ಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿ ಯಾವುದೇ ಕೊರತೆಯಾಗದಂತೆ ಕ್ರಮ ವಹಿಸತಕ್ಕದ್ದು ಎಂದರು.

ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಮಾತನಾಡಿ, ಆಹಾರ, ಆರೋಗ್ಯ, ಶೌಚಾಲಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಗಮನಹರಿಸಿ, ತಿನ್ನುವ ಆಹಾರ ಪ್ಯಾಕೇಟ್‌ಗಳ ಎಕ್ಸ್‌ಪೈರ್‌ ದಿನಾಂಕ ಚೆಕ್‌ ಮಾಡಿರಿ. ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಅಧಿಕಾರಿಗಳು ಮುಂಜಾಗ್ರತೆಯಾಗಿ ಕ್ರಮವಹಿಸಿ, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಔಷಧ ದಾಸ್ತಾನು ಇಡುವಂತೆ ಅವರು ಸೂಚಿಸಿದರು.

Advertisement

ಜಾನುವಾರುಗಳಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿ. ಔಷಧ ಹಾಗೂ ಮೇವಿನ ಕೊರತೆ ಯಾಗದಂತೆ ಎಚ್ಚರ ವಹಿಸಿ ಎಂದರು.

ಜಂಟಿ ಕೃಷಿ ನಿರ್ದೇಶಕರು ಮಾತನಾಡಿ ನೆರೆ ಹಾವಳಿಯಿಂದ ಜಿಲ್ಲೆಯ 504 ಗ್ರಾಮಗಳ 9908.20 ಹೆಕ್ಟೇರ್‌ ಪ್ರದೇಶ ಜಲಾವೃತ್ತವಾಗಿದ್ದು, ಅಂದಾಜು ರೂ. 5599.02500 ಲಕ್ಷ ನಷ್ಟವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಡಿಡಿಪಿಐ ಮಾತನಾಡಿ ಮಳೆಯಿಂದಾಗಿ ಜಿಲ್ಲೆಯಲ್ಲಿ 265 ಶಾಲೆಗಳು ಹಾನಿಗೊಳಗಾಗಿದ್ದು, ರಸ್ತೆ ಸಂಪರ್ಕ ಕಳೆದುಕೊಂಡ ಗ್ರಾಮಗಳ ಶಾಲೆ ಹಾಗೂ ಗಂಜೀ ಕೇಂದ್ರಗಳನ್ನು ತೆರೆಯಲಾಗಿರುವ ಶಾಲೆಗಳಿಗೆ ಮಾತ್ರ ರಜೆ ಮುಂದುವರಿಸುವಂತೆ, ಉಳಿದ ಶಾಲೆಗಳನ್ನು ಮಂಗಳವಾರದಿಂದ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಪರ ಜಿಲ್ಲಾಕಾರಿ ನಾಗರಾಜ ಸಿಂಗ್ರೇರ್‌ ಸೇರಿದಂತೆ ಎಲ್ಲ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳವಾರದೊಳಗೆ ಪರಿಹಾರ ವಿತರಿಸಲು ಸೂಚನೆ:

ಕಾರವಾರ: ಕಾರ್ಯ ಆಗಬೇಕೆಂದು ತಹಶೀಲ್ದಾರ್‌ಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಷ್‌ ಮೌದ್ಗಿಲ್ ಸೂಚಿಸಿದರು. ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಮಾಹಿತಿ ನೀಡಿದ ಅವರು, ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಮನೆ ಮತ್ತು ಜಾನುವಾರು ಹಾನಿಗೊಳಗಾದ ಸಂತ್ರಸ್ತರಿಗೆ ಮಂಗಳವಾರ ತಪ್ಪಿದಲ್ಲಿ ಬುಧವಾರ ಪರಿಹಾರ ವಿತರಿಸುವ ಹಾಗೂ ಜೀವ ಹಾನಿಯಾದ ಕುಟುಂಬಗಳಿಗೆ ತಕ್ಷಣವೇ ಪರಿಹಾರ ನೀಡುವ ಕಾರ್ಯವಾಗಬೇಕು. ಈಗಾಗಲೇ ಜಿಲ್ಲಾಡಳಿತ ಹಣ ಬಿಡುಗಡೆ ಮಾಡಿದ್ದು, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಪರಿಹಾರ ಹಣವನ್ನು ವಿತರಿಸಬೇಕು ಎಂದರು. ವಿದ್ಯುತ್‌, ರಸ್ತೆ ಮತ್ತು ದೂರವಾಣಿ ಸಂಪರ್ಕ ಕಳೆದುಕೊಂಡ ಗ್ರಾಮಗಳ ಪಟ್ಟಿಯನ್ನು ಶೀಘ್ರ ತಯಾರಿಸಿ ಕೊಟ್ಟಲ್ಲಿ, ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಉಳಿದ ಪ್ರದೇಶಗಳಲ್ಲಿ ಹೆಸ್ಕಾಂ ಸಂಪರ್ಕ ವ್ಯವಸ್ಥೆ ಸರಿಯಾಗಿಲ್ಲವೆಂಬ ಸಾಕಷ್ಟು ದೂರುಗಳು ಬರುತ್ತಿದ್ದು, ಹೆಸ್ಕಾಂ ಅಧಿಕಾರಿಗಳು ಶೀಘ್ರ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು. ಯಲ್ಲಾಪುರದಲ್ಲಿ ರಸ್ತೆ ಸಂಪರ್ಕ ಸರಿಯಾಗಿದ್ದಲ್ಲಿ ಗ್ಯಾಸ್‌ ಟ್ಯಾಂಕರ್‌ ಮತ್ತು ಜೀವನಾವಶ್ಯಕ ವಸ್ತುಗಳನ್ನು ಪೂರೈಸುವ ವಾಹನಗಳಿದ್ದಲ್ಲಿ ಆದ್ಯತೆ ಮೇರೆಗೆ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ತಿಳಿಸಿದರು. ಸಂತ್ರಸ್ತರು ಗಂಜೀಕೇಂದ್ರಗಳಲ್ಲಿ ಉಳಿಯದೇ ಸಂಬಂಧಿಕರ ಮನೆಯಲ್ಲಿ ಉಳಿದರೂ ಕೂಡಾ ಪರಿಹಾರ ಪಡೆಯಲು ಅರ್ಹರಿದ್ದು, ಅವರಿಗೂ ಪರಿಹಾರ ವಿತರಿಸಬೇಕೆಂದರು. ಜಿಲ್ಲಾಧಿಕಾರಿ ಡಾ| ಹರೀಶಕುಮಾರ ಕೆ., ಅಪರ ಜಿಲ್ಲಾಧಿಕಾರಿ ನಾಗರಾಜ ಸಿಂಗ್ರೇರ್‌ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next