Advertisement

ಅಪಘಾತದಲ್ಲಿ ಮಡಿದ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ

10:50 PM Aug 07, 2021 | Team Udayavani |

ಮಂಗಳೂರು: ಒಮಾನ್‌ ದೇಶದ ಮಬೇಲದಲ್ಲಿ 2 ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ನೂರ್‌ ಮುಹಮ್ಮದ್‌ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ದೊರಕಿಸಿ ಕೊಡುವಲ್ಲಿ ಸೋಶಿಯಲ್‌ ಫೋರಮ್‌ ಒಮಾನ್‌ ಯಶಸ್ವಿಯಾಗಿದೆ.

Advertisement

ತೀರಾ ಬಡಕುಟುಂಬದ ಯುವಕ ಬೆಳ್ತಂಗಡಿ ತಾಲೂಕಿನ ಸುನ್ನತ್‌ ಕೆರೆ ನಿವಾಸಿ ನೂರ್‌ ಮುಹಮ್ಮದ್‌ (25) ಅವರು ಒಮಾನ್‌ನ ಮುಸನ್ನದಲ್ಲಿನ “ಮಸ್ಕತ್‌ ವಾಟರ್‌’ ಬಾಟಲಿ ನೀರು ಕಂಪೆನಿಯಲ್ಲಿ ಸೇಲ್ಸ್‌ಮನ್‌ ಆಗಿ ಉದ್ಯೋಗಕ್ಕೆ ಸೇರಿಕೊಂಡಿದ್ದರು. 2019ರ ಮೇ 11ರಂದು ಸಂಭವಿಸಿದ ವಾಹನ ಅಪಘಾತದಲ್ಲಿ ಅವರು ಮತ್ತು ಚಾಲಕ ಒಮಾನ್‌ ಪ್ರಜೆ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಎರಡೇ ದಿನಗಳಲ್ಲಿ ಊರಿಗೆ ಕಳುಹಿಸಿ ಕೊಡಲು ಸೋಶಿಯಲ್‌ ಫೋರಮ್‌ ವ್ಯವಸ್ಥೆ ಮಾಡಿತ್ತು.

2 ವರ್ಷಗಳ ಹೋರಾಟ:

ಬಳಿಕ ಸೋಶಿಯಲ್‌ ಫೋರಮ್‌ ತಂಡವು ಪರಿಹಾರ ಮೊತ್ತಕ್ಕಾಗಿ ಸ್ಥಳೀಯ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ನಿರಂತರ 2 ವರ್ಷ ಗಳ ಹೋರಾಟದ ಫಲವಾಗಿ ಇದೀಗ 25 ಲಕ್ಷ ರೂ. ಪರಿಹಾರ ಮೊತ್ತ ಬಿಡುಗಡೆಯಾಗಿದೆ ಎಂದು ಸೋಶಿಯಲ್‌ ಫೋರಮ್‌ ಪ್ರಕಟನೆ ತಿಳಿಸಿದೆ.

ನೂರ್‌ ಮುಹಮ್ಮದ್‌ ಅವರ ತಾಯಿ ಕೂಡ ಎರಡು ತಿಂಗಳ ಹಿಂದೆ ನಿಧನ ಹೊಂದಿದ್ದರು. ಇದೀಗ ಕುಟುಂಬದಲ್ಲಿ ತಂದೆ, ಅಣ್ಣ, ಅಕ್ಕ ಇದ್ದು, ಪರಿಹಾರದ ಮೊತ್ತವನ್ನು ಅವರಿಗೆ ಹಸ್ತಾಂತರಿಸಲಾಗಿದೆ.

Advertisement

ಕಾನೂನು ಹೋರಾಟದಲ್ಲಿ ಮುಹಿಯುದ್ದೀನ್‌ ಗುರುವಾಯನ ಕೆರೆ, ಅಬ್ದುಲ್‌ ಹಮೀದ್‌ ಪಾಣೆ ಮಂಗಳೂರು, ಇರ್ಫಾನ್‌ ಉಜಿರೆ, ಆಸಿಫ್‌ ಬೈಲೂರು, ಊರಿನ ಸ್ಥಳೀಯ ಗ್ರಾ.ಪಂ. ಸದಸ್ಯ ಮುಸ್ತಫಾ ಜಿ.ಕೆ., ರಿಹಾನ್‌ ಸಾಹೇಬ್‌ ಮೊದಲಾದವರು ಸಹಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next