Advertisement

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

12:59 AM Sep 28, 2021 | Team Udayavani |

ಕುಂದಾಪುರ: ಕಡಲಿನಲ್ಲಿ ಮೀನುಗಾರಿಕೆ ಸಂದರ್ಭ ಅವಘಡ ಸಂಭವಿಸಿ ಮೃತಪಟ್ಟರೆ, ದೋಣಿ, ಬೋಟ್‌ ಹಾನಿಗೀಡಾದರೆ ಮೀನುಗಾರರಿಗೆ ಅಥವಾ ಅವರ ಕುಟುಂಬಕ್ಕೆ ತುರ್ತು ನೆರವಾಗುವ ನಿಟ್ಟಿನಲ್ಲಿ ಸರಕಾರವು “ಸಂಕಷ್ಟ ಪರಿಹಾರ ನಿಧಿ’ಯನ್ನು ಸ್ಥಾಪಿಸಿದೆ. ಆದರೆ ಸಕಾಲದಲ್ಲಿ ಈ ಪರಿಹಾರ ಧನ ಸಿಗದೆ ಸಂತ್ರಸ್ತರ ಸಂಕಷ್ಟವನ್ನು ಹೆಚ್ಚಿಸುತ್ತಿದೆ.

Advertisement

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 20ಕ್ಕೂ ಹೆಚ್ಚು ದೋಣಿ/ಬೋಟ್‌ ದುರಂತಗಳು ಸಂಭವಿಸಿವೆ. ಮೃತಪಟ್ಟವರ ಕುಟುಂಬ ಕ್ಕಾಗಲೀ ನಷ್ಟಕ್ಕೊಳಗಾದವರಿಗಾಗಲೀ ಇನ್ನೂ ಪರಿಹಾರ ಸಿಕ್ಕಿಲ್ಲ.

ಜೀವರಕ್ಷಣೆ ಸಲಕರಣೆ
ಕಡಲಿನಲ್ಲಿ ಮೀನು ಗಾರಿಕೆ ನಿರತರಾಗಿದ್ದ ವೇಳೆ ಆಕಸ್ಮಿಕ ಅವಘಡಗಳು ಸಂಭವಿಸುತ್ತವೆ. ತುರ್ತು ಸಂದರ್ಭಗಳಲ್ಲಿ ಪಾರಾ ಗಲು ಮೀನುಗಾರರಿಗೆ ಅತ್ಯಾಧುನಿಕ ಜೀವರಕ್ಷಕ ಜಾಕೆಟ್‌, ಪ್ರತೀ ಬಂದರುಗಳಲ್ಲಿಯೂ ತರಬೇತಾದ ಜೀವರಕ್ಷಕ ಪಡೆಯನ್ನು ದಿನದ 24 ಗಂಟೆಯೂ ನಿಯೋಜಿಸಬೇಕು ಎನ್ನುವುದು ಮೀನುಗಾರರ ಬೇಡಿಕೆ.

ಏನಿದು ಯೋಜನೆ?
ಮೃತರ ಕುಟುಂಬಕ್ಕೆ ತುರ್ತಾಗಿ 6 ಲಕ್ಷ ರೂ. ಅಂತೆಯೇ ಎಂಜಿನ್‌, ಬಲೆ, ಬೋಟ್‌ / ದೋಣಿಗೆ ಹಾನಿಯಾದರೆ ಅಂದಾಜು ಲೆಕ್ಕ ಹಾಕಿ ಪರಿಹಾರ ನೀಡ ಲಾಗು ತ್ತದೆ. ರಾಜ್ಯ ಮೀನುಗಾರಿಕೆ ಸಚಿವರು ಈ ಸಂಕಷ್ಟ ಪರಿಹಾರ ನಿಧಿಯ ಅಧ್ಯಕ್ಷರು. ಕಠಿನ ಮಾನದಂಡ, ಮಂಜೂ ರಾತಿ ಪ್ರಕ್ರಿಯೆ ವಿಳಂಬದಿಂದಾಗಿ ವರ್ಷ ಕಳೆದರೂ ಪರಿಹಾರ ಕನಸಾಗಿ ಉಳಿದಿದೆ.

4 ವರ್ಷವಾದರೂ ಸಿಕ್ಕಿಲ್ಲ !
2017ರ ಸೆ. 2ರಂದು ಗೋಪಾಡಿಯ ರಘು ಮರಕಾಲ ಮೀನಿನ ಬಲೆ ಎಳೆಯುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದರು. ಕುಟುಂಬಸ್ಥರು ಅರ್ಜಿ ಸಲ್ಲಿಸಿ 4 ವರ್ಷಗಳಾಗುತ್ತ ಬಂದರೂ ಪರಿಹಾರ ಮಂಜೂರಾಗಿಲ್ಲ.

Advertisement

ಇದನ್ನೂ ಓದಿ:ಕೋವಿಡ್ : ರಾಜ್ಯದಲ್ಲಿಂದು 504 ಮಂದಿಯಲ್ಲಿ ಪ್ರಕರಣ ಪತ್ತೆ : 893 ಸೋಂಕಿತರು ಗುಣಮುಖ

20ಕ್ಕೂ ಹೆಚ್ಚು ಅವಘಡ
ಉಡುಪಿ ಜಿಲ್ಲೆಯಲ್ಲಿ 2020-21ರಲ್ಲಿ ಐವರು ಮೃತಪಟ್ಟಿದ್ದು, 12 ಬೋಟ್‌/ದೋಣಿ ಅವಘಡಗಳಾಗಿವೆ. ದ.ಕ. ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 11 ದೋಣಿ / ಬೋಟ್‌ಗಳ ಅವಘಡಗಳಾಗಿದ್ದು, ಇನ್ನೂ ಪರಿಹಾರ ಧನ ಸಿಕ್ಕಿಲ್ಲ.

ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಡಿ ಪರಿಹಾರ ವಿಳಂಬವಾಗಿರುವ ಬಗ್ಗೆ ಕೂಡಲೇ ಪರಿಶೀಲಿಸಿ, ಕ್ರಮ ಕೈಗೊಳ್ಳಲಾಗುವುದು. ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಬೋಟ್‌, ದೋಣಿ, ಎಂಜಿನ್‌ಗೆ ಹಾನಿ ಪ್ರಕರಣಗಳಲ್ಲಿ ಪರಿಶೀಲನೆ ಪ್ರಕ್ರಿಯೆಯಿಂದಾಗಿ ವಿಳಂಬ ಸಹಜ.
– ಎಸ್‌. ಅಂಗಾರ, ಮೀನುಗಾರಿಕಾ ಸಚಿವರು

ದುರಂತ ಸಂಭವಿಸಿದಾಗ ಮೀನುಗಾರಿಕಾ ಇಲಾಖೆಯಿಂದ ನೀಡುವ ಪರಿಹಾರ ಮೊತ್ತ ಅಲ್ಪ. ಹೆಚ್ಚೆಂದರೆ 1ರಿಂದ 2 ಲಕ್ಷ ರೂ. ಸಿಗುತ್ತದೆ. ಇದನ್ನು ಕನಿಷ್ಠ 5 ಲಕ್ಷ ರೂ.ಗೆ ಏರಿಸಬೇಕು. ಜತೆಗೆ ಇದು ತುರ್ತು ಪರಿಹಾರವಾಗಿರುವುದರಿಂದ ಮೀನುಗಾರರಿಗೆ ತ್ವರಿತವಾಗಿ ಸಿಗಬೇಕು. ಮಾನದಂಡಗಳ ಸಡಿಲಿಕೆ ಆಗಬೇಕು.
– ಯಶವಂತ ಗಂಗೊಳ್ಳಿ , ಅಧ್ಯಕ್ಷರು, ಗಂಗೊಳ್ಳಿ ವಲಯ ನಾಡದೋಣಿ ಮೀನುಗಾರರ ಸಂಘ

ದೋಣಿ, ಬೋಟ್‌ ಅವಘಡಗಳಾದಾಗ ಸಾವನ್ನಪ್ಪಿದರೆ ತತ್‌ಕ್ಷಣ ಪರಿಹಾರ ಕೊಡಲಾಗುತ್ತಿದೆ. ಹಾನಿ ಪ್ರಕರಣಗಳಲ್ಲಿ ಪರಿಹಾರ ಸಿಗಲು ಬಾಕಿ ಇರುವ ಬಗ್ಗೆ ಶೀಘ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
– ಡಾ| ರಾಜೇಂದ್ರ ಕೆ.ವಿ. ಮತ್ತು ಕೂರ್ಮಾ ರಾವ್‌,
ದ.ಕ., ಉಡುಪಿ ಜಿಲ್ಲಾಧಿಕಾರಿಗಳು


 -ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next