ಉದ್ವೇಗ, ಮಾನಸಿಕ ಒತ್ತಡ, ನಿದ್ರಾಹೀನತೆ, ಹಾರ್ಮೋನ್‌ಗಳ ಅಸಮತೋಲನ, ಧೂಳಿನ ಅಲರ್ಜಿ, ಕಂಪ್ಯೂಟರ್ ಕೆಲಸ, ಶಬ್ದ ಮಾಲಿನ್ಯ… ಇಂಥವೇ ಹಲವು ಕಾರಣಗಳಿಂದ ತಲೆನೋವು ಬರುತ್ತದೆ. ತಲೆ ಒಂದೇ ಆದರೂ, ತಲೆನೋವಿಗೆ ಕಾರಣಗಳು ಹತ್ತಾರು. ದಿನನಿತ್ಯ ತಲೆನೋವು ಕಾಡುತ್ತಿದ್ದರೆ, ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯ. ಬೆಳಗಿನ ವಾಕಿಂಗ್, ಧ್ಯಾನ, ವ್ಯಾಯಾಮ, ಯೋಗದಂಥ ಚಟುವಟಿಕೆಗಳಿಂದ, ತಲೆನೋವನ್ನು ದೂರವಿಡಬಹುದು. ಅಷ್ಟೇ ಅಲ್ಲ, ತಲೆನೋವಿಗೆ ಕೆಲವು ಮನೆಮದ್ದು ಕೂಡಾ ಇದೆ…
-ಶ್ರೀಗಂಧ ಹಾಗೂ ಅಶ್ವಗಂಧವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು, ಹಸುವಿನ ಹಾಲಿನೊಂದಿಗೆ ಬೆರೆಸಿ ಹಣೆಯ ಮೇಲೆ ಲೇಪಿಸಿಕೊಳ್ಳಿ.
-ಬೆಳ್ಳುಳ್ಳಿಯನ್ನು ಜಜ್ಜಿ, ಸೋಸಿದ ರಸಕ್ಕೆ ಅಷ್ಟೇ ಪ್ರಮಾಣದ ಶುಂಠಿಯ ರಸ ಬೆರೆಸಿ, ಅರ್ಧ ಗಂಟೆಗೊಮ್ಮೆಯಂತೆ ನಾಲ್ಕೈದು ಬಾರಿ ಹಣೆಗೆ ಹಚ್ಚಿ.
– ಬ್ಲಾಕ್ ಟೀ ಜೊತೆಗೆ ಲಿಂಬೆರಸ ಬೆರೆಸಿ ಕುಡಿದರೆ, ತಲೆನೋವು ಕಡಿಮೆಯಾಗುತ್ತದೆ.
-ಪುದೀನಾ ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ, ಕುದಿಸಿ ಮಾಡಿದ ಕಷಾಯ ಸೇವಿಸಿ.
-ಒಂದು ಚಮಚ ತುಳಸಿ ರಸಕ್ಕೆ, ಎರಡೂ¾ರು ಏಲಕ್ಕಿ ಕಾಳುಗಳನ್ನು ಬೆರೆಸಿ, ಚೆನ್ನಾಗಿ ಅರೆದು ಹಣೆ ಮೇಲೆ ಹಚ್ಚಿಕೊಳ್ಳಿ.
– ಮೂರು ಹನಿ ಕೊಬ್ಬರಿ ಎಣ್ಣೆಗೆ, ಮೂರು ಹನಿ ಲವಂಗದ ಎಣ್ಣೆ ಸೇರಿಸಿ ಹಣೆಗೆ ಹಚ್ಚಿ, ನಿಧಾನವಾಗಿ ಮಸಾಜ್ ಮಾಡಿ.
-ನುಗ್ಗೆ ಸೊಪ್ಪನ್ನು ಚೆನ್ನಾಗಿ ರುಬ್ಬಿ ರಸ ತೆಗೆದು, ಅದಕ್ಕೆ ಒಂದೆರಡು ಕಾಳುಮೆಣಸು ಬೆರೆಸಿ ಪುನಃ ಅರೆದು, ಹಣೆಗೆ ಲೇಪಿಸಿ.
-ಔಡಲದ ಬೇರು ಮತ್ತು ಶುಂಠಿಯನ್ನು ಮಜ್ಜಿಗೆಯಲ್ಲಿ ತೇಯ್ದು ಹಣೆಗೆ ಹಚ್ಚಬೇಕು.
-ಕೆ. ಲೀಲಾ ಶ್ರೀನಿವಾಸ್