– ಈ ಸಾಧನೆಗೈದ ಭಾರತದ ಮೊದಲ ಕಂಪನಿ ಎಂಬ ಖ್ಯಾತಿಋ
– 1,579.95 ರೂ.ಗೆ ತಲುಪಿದ ರಿಲಯನ್ಸ್ ಷೇರು ದರ
Advertisement
ನವದೆಹಲಿ: ಉದ್ಯಮಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಹೊಸ ದಾಖಲೆ ಸೃಷ್ಟಿಸಿದೆ. 10 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ರಿಲಯನ್ಸ್ ಪಾತ್ರವಾಗಿದೆ. ಗುರುವಾರದ ಷೇರು ಮಾರುಕಟ್ಟೆಯ ವಹಿವಾಟಿನಲ್ಲಿ ಕಂಪನಿಯ ಷೇರು ಮೌಲ್ಯ ಏರಿದ ಬೆನ್ನಲ್ಲೇ ಕಂಪನಿಗೆ ಇಂಥದ್ದೊಂದು ಗರಿಮೆ ದೊರೆತಿದೆ.
Related Articles
ಈ ವರ್ಷವೇ ಮುಕೇಶ್ ಅಂಬಾನಿ ಅವರ ಆಸ್ತಿಯಲ್ಲಿ 13.70 ಬಿಲಿಯನ್ ಡಾಲರ್ ಏರಿಕೆಯಾಗಿದೆ. ಅಲ್ಲದೆ, ಇತ್ತೀಚಿನ ದಿನಗಳಲ್ಲಿ ರಿಲಾಯನ್ಸ್ ಷೇರುಗಳ ಮೌಲ್ಯ ಹೆಚ್ಚಾಗಿದ್ದರಿಂದ ಆಸ್ತಿ ಮೌಲ್ಯವೂ ಹೆಚ್ಚಾಗುತ್ತಿದೆ. ಈಚೆಗಷ್ಟೇ ಬಿಡುಗಡೆಯಾದ ಬ್ಲೂಮಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 14ನೇ ಸ್ಥಾನದಲ್ಲಿದ್ದ ಮುಕೇಶ್ ಅಂಬಾನಿ ಈಗ 12ನೇ ಸ್ಥಾನಕ್ಕೇರಿದ್ದಾರೆ. ಈಗ ಅವರ ಒಟ್ಟಾರೆ ಆಸ್ತಿ ಮೌಲ್ಯ 61.50 ಬಿಲಿಯನ್ ಡಾಲರ್.
Advertisement
ಕಾರಣ ಏನಿರಬಹುದು?ಕಂಪನಿಯ ಸಾಲ ಕಡಿತ ಯೋಜನೆ, ಸದ್ಯದಲ್ಲೇ ಜಾರಿಯಾಗಲಿರುವ ಸೇವಾ ಶುಲ್ಕ ಏರಿಕೆ ಮತ್ತು ಗ್ರಾಹಕ ವ್ಯವಹಾರದತ್ತ ಹೆಚ್ಚಿನ ಗಮನ ನೆಟ್ಟಿರುವುದು ರಿಲಯನ್ಸ್ ಷೇರು ಮೌಲ್ಯ ಹೆಚ್ಚಲು ಕಾರಣ ಎಂದು ವಿಶ್ಲೇಷಿಸಲಾಗಿದೆ. ಚಿಲ್ಲರೆ ವಹಿವಾಟಿನಲ್ಲಿ ಕಂಪನಿಯ ಆದಾಯ ಕಳೆದ 6 ವರ್ಷಗಳಲ್ಲಿ 7 ಪಟ್ಟು ಮತ್ತು ಲಾಭದ ಪ್ರಮಾಣ 14 ಪಟ್ಟು ಹೆಚ್ಚಳವಾಗಿದೆ. ಇನ್ನು ಜಿಯೋ ದೇಶದ ಅತಿದೊಡ್ಡ ದೂರಸಂಪರ್ಕ ಸೇವಾದಾರ ಕಂಪನಿಯಾಗಿ ಹೊರಹೊಮ್ಮಿದ್ದು, ಪ್ರತಿ ತಿಂಗಳು 1 ಕೋಟಿ ಹೊಸ ಗ್ರಾಹಕರು ಜಿಯೋಗೆ ಸೇರ್ಪಡೆಯಾಗುತ್ತಿದ್ದಾರೆ. ಸದ್ಯದಲ್ಲೇ ಜಿಯೋ ಸೇವಾ ಶುಲ್ಕ ಹೆಚ್ಚಳ ಮಾಡುವುದಾಗಿಯೂ ಘೋಷಿಸಿದೆ. ಇದಲ್ಲದೇ ಇತರೆ ಕ್ಷೇತ್ರಗಳಲ್ಲೂ ಕಂಪನಿಯು ತನ್ನದೇ ಆದ ಛಾಪು ಮೂಡಿಸಿದೆ. – 2018ರ ಆಗಸ್ಟ್- 8 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿದ ಭಾರತದ ಮೊದಲ ಕಂಪನಿ ಎಂಬ ಹೆಗ್ಗಳಿಕೆ – 2019ರ ಅಕ್ಟೋಬರ್- 9 ಲಕ್ಷ ಕೋಟಿ ರೂ. ತಲುಪಿದ ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ – 2019 ನವೆಂಬರ್ – 10 ಲಕ್ಷ ಕೋಟಿ ರೂ. ಎಂ-ಕ್ಯಾಪ್ ಹೊಂದಿದ ದೇಶದ ಮೊದಲ ಕಂಪನಿ ಎಂಬ ಖ್ಯಾತಿ ಎಂ-ಕ್ಯಾಪ್ ಯಾರದ್ದು ಹೆಚ್ಚು?
1. ರಿಲಯನ್ಸ್ ಇಂಡಸ್ಟ್ರೀಸ್- 10 ಲಕ್ಷ ಕೋಟಿ ರೂ.
2. ಟಿಸಿಎಸ್- 7.79 ಲಕ್ಷ ಕೋಟಿ ರೂ.
3. ಎಚ್‌ಡಿಎಫ್ಸಿ ಬ್ಯಾಂಕ್- 6.92 ಲಕ್ಷ ಕೋಟಿ ರೂ.
4. ಹಿಂದುಸ್ಥಾನ್ ಯುನಿಲಿವರ್ – 4.51 ಲಕ್ಷ ಕೋಟಿ ರೂ.
(ಪ್ರತಿ ದಿನದ ಷೇರು ದರದ ಏರಿಳಿತದ ಆಧಾರದಲ್ಲಿ ಕಂಪನಿಗಳ ಎಂ-ಕ್ಯಾಪ್ ಅಂಕಿಅಂಶಗಳು ಬದಲಾಗುತ್ತಿರುತ್ತವೆ) ಸೆನ್ಸೆಕ್ಸ್ ದಾಖಲೆಯ ಓಟ ಮುಂದುವರಿಕೆ
ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಐಸಿಐಸಿಐ ಬ್ಯಾಂಕ್‌ನ ಷೇರು ಮೌಲ್ಯ ವೃದ್ಧಿಸುತ್ತಲೇ ಮುಂಬೈ ಷೇರುಪೇಟೆ ಸತತ 2ನೇ ದಿನವೂ ನಾಗಾಲೋಟ ಮುಂದುವರಿಸಿದ್ದು, ಮತ್ತೆ ಸಾರ್ವಕಾಲಿಕ ದಾಖಲೆ ಬರೆದಿದೆ. ಷೇರು ಖರೀದಿಯು ಭರದಿಂದ ಸಾಗಿದ ಪರಿಣಾಮ ಗುರುವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 109 ಅಂಕ ಏರಿಕೆ ಕಂಡು, 41,130ರಲ್ಲಿ ವಹಿವಾಟು ಅಂತ್ಯಗೊಳಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿತು. ನಿಫ್ಟಿ ಕೂಡ 50 ಅಂಕ ಏರಿಕೆ ದಾಖಲಿಸಿ, 12,151ರಲ್ಲಿ ಕೊನೆಗೊಂಡಿತು. ಇಂಡಸ್‌ಇಂಡ್ ಬ್ಯಾಂಕ್ ಷೇರುಗಳು ಶೇ.2.68 ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳು ಶೇ.2.68ರಷ್ಟು ಏರಿಕೆ ಕಂಡವು.