ಪುಣೆ, ಜ. 24: ಪುಣೆಯಲ್ಲಿರುವ ಸಾಹಿತ್ಯ ಪ್ರೇಮಿಗಳು ಪ್ರೀತಿಯಿಂದ ನೀಡಿದ ಸಮ್ಮಾನಕ್ಕೆ ನಾನು ಚಿರಋಣಿಯಾಗಿದ್ದೇನೆ. ಪುಣೆಯು ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿಯಾಗಿದ್ದು ಮಹಾರಾಷ್ಟ್ರದ ಓದುಗರು, ಸಾಹಿತ್ಯ ಪ್ರೇಮಿಗಳು ಅನ್ಯ ಭಾಷಿಕರಿಗಿಂತ ಹೆಚ್ಚು ಪ್ರೀತಿಯನ್ನು ನೀಡಿದ್ದಾರೆ. ಮರಾಠಿ ಭಾಷಿಕರು ಸಾಹಿತ್ಯವನ್ನು ತುಲನಾತ್ಮಕವಾಗಿ ಅಧ್ಯಯನ ಮಾಡಿಕೊಂಡು ವಿಮರ್ಶಾತ್ಮಕವಾದ ಪ್ರಶ್ನೆಯನ್ನು ಕೇಳುತ್ತಾರೆ.
ನನ್ನ ಹಲವಾರು ಪುಸ್ತಕಗಳು ವಿವಿಧ ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಎಲ್ಲಾ ಭಾಷಿಕ ಓದುಗ ಅಭಿಮಾನಿಗಳಿದ್ದರೂ ಮರಾಠಿ ಭಾಷಿಕರ ಅಭಿ ಮಾನಕ್ಕೆ, ಸಾಹಿತ್ಯಾಸಕ್ತಿಗೆ ಮೆಚ್ಚಬೇಕಾಗಿದೆ. ಆದುದರಿಂದ ಕನ್ನಡದ ಉತ್ತಮ ಸಾಹಿತ್ಯಗಳನ್ನು ಮರಾಠಿಗೆ ಹಾಗೂ ಮರಾಠಿಯ ಸಾಹಿತ್ಯಗಳನ್ನು ಕನ್ನಡಕ್ಕೆ ಭಾಷಾತರಿಸುವ ಹೆಚ್ಚೆಚ್ಚು ಕೆಲಸಗಳು ಇಲ್ಲಿ ನಡೆಯಬೇಕಾಗಿದೆ. ಇದರಿಂದ ಮರಾಠಿ ಕನ್ನಡಿಗರ ಬಾಂಧವ್ಯ ವೃದ್ಧಿಯಾಗಲಿದೆ ಎಂದರು.
ಅವರು ಜ. 19 ರಂದು ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಭವನ, ಗಣೇಶ್ ನಗರ, ಪುಣೆ ಕನ್ನಡ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ಆಯೋಜನೆಯಲ್ಲಿ ಪುಣೆ ಕನ್ನಡ ಸಂಘದ ಸಮ್ಮಾನ ಸ್ವೀಕರಿಸಿ ಮಾತನಾಡಿ, ಮರಾಠಿ ಭಾಷಿಕರು ಸಾಹಿತ್ಯ ಹಾಗೂ ಸಂಗೀತ ಪ್ರೇಮಿಗಳಾಗಿದ್ದಾರೆ. ಆದುದರಿಂದ ಪುಣೆ ನಗರವು ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಸಂಗೀತ ಮತ್ತು ಸಾಹಿತ್ಯ ಒಂದಕ್ಕೊಂದು ಪೂರಕವಾಗಿದ್ದು ನನ್ನ ಸಾಹಿತ್ಯ ರಚನೆಗೂ ಸಂಗೀತ ಪ್ರೇರಣೆ ನೀಡುತ್ತದೆ. ಐತಿಹಾಸಿಕವಾಗಿಯೂ ಮಹಾರಾಷ್ಟ್ರ ಮಹತ್ವದ ಸ್ಥಾನದಲ್ಲಿದ್ದು ಭಾರತೀಯ ಸಂಸ್ಕೃತಿ ಬೇರೆಲ್ಲ ಕಡೆ ನಶಿಸುತ್ತಿರುವವಾಗ ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮಹಾರಾಜರು ಸೈನ್ಯವನ್ನು ಕಟ್ಟಿ ಶತ್ರುಗಳನ್ನು ಸೆದೆಬಡಿದು ನಮ್ಮ ಸಂಸ್ಕೃತಿಯನ್ನು ಉಳಿಸುವಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.
ಮುಖ್ಯವಾಗಿ ದಕ್ಷಿಣದ ಭಾಗಗಳಿಗೆ ಇದೊಂದು ದೊಡ್ಡ ಪ್ರೇರಣೆ ನೀಡುವಂತಾಯಿತು. ಮಹಾರಾಷ್ಟ್ರದ ರಾಜಕೀಯದಲ್ಲೂ ಇದು ಪರಿಣಾಮ ಬೀರಿದೆ. ಮಹಾರಾಷ್ಟ್ರದ ಫಲೋಸ್ಕರ ನಂತಹ ಸಂಗೀತ ದಿಗ್ಗಜರು ಸಂಗೀತ ಕ್ಷೇತ್ರಕ್ಕೆ ಶ್ರೇಷ್ಠವಾದ ಕೊಡುಗೆಯನ್ನು ನೀಡಿರುತ್ತಾರೆ. ಅಲ್ಲದೆ ಹಲವಾರು ಶ್ರೇಷ್ಠ ವಿದ್ವಾಂಸರನ್ನೂ, ದೇಶಭಕ್ತರನ್ನೂ ಹೊಂದಿದ ನಾಡು ಮಹಾರಾಷ್ಟ್ರವಾಗಿದ್ದು ಇಲ್ಲಿನ ಸಾಂಸ್ಕೃತಿಕ ಭವ್ಯತೆ ಹಾಗೂ ಪರಂಪರೆಗಳನ್ನು ಗೌರವಿಸಬೇಕಾಗಿದೆ ಎಂದರು.
ಮರಾಠಿ ನಾಟಕಕಾರ ಹಾಗೂ ನಟ ಆಗಾಶೆ ಉಪಸ್ಥಿತರಿದ್ದು ಮಾತನಾಡಿ, ಮಹಾರಾಷ್ಟ್ರ ಹಾಗೂ ಕನ್ನಡಿಗರೊಂದಿಗೆ ಅವಿನಾಭಾವ ಸಂಬಂಧ ವನ್ನು ಹೊಂದಿದೆ. ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿದೆ. ಕನ್ನಡ ಸುಂದರವಾದ ಭಾಷೆ ಯಾಗಿದೆ ಇಲ್ಲಿನ ಸಾಹಿತ್ಯವೂ ವಿಶೇಷತೆಯಿಂದಕೂಡಿದೆ. ಗಿರೀಶ್ ಕಾರ್ನಾಡ್ ಹಾಗೂ ಶಿವರಾಮ ಕಾರಂತರ ಒಡನಾಟದಿಂದ ಕನ್ನಡ ಸಂಸ್ಕೃತಿಯ ಪರಿಚಯ ನನಗಾಯಿತು. ರಾಜಕಾರಣಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿರೋಧಾಭಾಸ ಹೊಂದಿದ್ದರೂ ನಾವು ಸಾಹಿತ್ಯ ಹಾಗೂ ಸಂಗೀತ ಕ್ಷೇತ್ರದ ಮೂಲಕ ನಮ್ಮ ಸಂಬಂಧವನ್ನು ಬಲಪಡಿಸಬೇಕಾಗಿದೆ. ಮುಂದಿನ ಜನ್ಮವೊಂದಿದ್ದರೆ ಕರ್ನಾಟಕದಲ್ಲಿ ಹುಟ್ಟಬೇಕೆಂಬ ಅದಮ್ಯ ಇಚ್ಚೆಯಾಗಿದೆ ಎಂದರು.
ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಇಂದಿರಾ ಸಾಲ್ಯಾನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಎಸ್. ಎಲ್. ಭೈರಪ್ಪನವರು ಕನ್ನಡ ಸಾಹಿತ್ಯ ಲೋಕದ ಮಿನುಗುತ್ತಿರುವ ನಕ್ಷತ್ರದಂತಿರುವ ಶ್ರೇಷ್ಠ ಸಾಹಿತಿಯಾಗಿದದಾರೆ. ಅವರ ಕಾದಂಬರಿಗಳು ಮುತ್ತು ರತ್ನಗಳಂತೆ ಅನಘ್ರವಾದ ಮೌಲ್ಯವನ್ನು ಹೊಂದಿದೆ. ಸಾಹಿತ್ಯಾಭಿಮಾನಿಗಳ ಪ್ರೀತಿಯೇ ಅವರಿಗೆ ಜ್ಞಾನಪೀಠ ಪ್ರಶಸ್ತಿಗಿಂತಲೂ ಮಿಗಿಲಾದ ಪ್ರಶಸ್ತಿಯಾಗಿದೆ. ಅವರಲ್ಲಿರುವ ಶಿಸ್ತು, ಸಹನೆ, ಸ್ಥಿತಪ್ರಜ್ಞೆ ಅವರಿಂದ ನಾವು ಕಲಿಯಬೇಕಾಗಿದೆ. ತನ್ನ ಅಮೋಘವಾದಂತಹ ಸಾಹಿತ್ಯದ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಭೈರಪ್ಪನವರು ನಮ್ಮೊಂದಿಗಿರುವುದು ನಮ್ಮ ಅದೃಷ್ಟವಾಗಿದೆ ಎಂದರು.
ವೇದಿಕೆಯಲ್ಲಿ ಪುಣೆ ಕನ್ನಡ ಸಂಘದ ಉಪಾಧ್ಯಕ್ಷರಾದ ನಾರಾಯಣ ಹೆಗಡೆ, ಕಾರ್ಯದರ್ಶಿ ಮಾಲತಿ ಕಲ್ಮಾಡಿ, ವಿಶ್ವಸ್ಥರಾದ ಡಾ| ಬಾಲಾಜಿತ್ ಶೆಟ್ಟಿ, ಅಶ್ವಿನ್ ಶಾಸ್ತ್ರಿ, ಸುಧಾಕರ್ ರಾವ್, ಜನಸಂಪರ್ಕಾಧಿಕಾರಿ ರಾಮದಾಸ್ ಆಚಾರ್ಯ ಕಲಾಗಂಗೋತ್ರಿಯ ನಿರ್ದೇಶಕ ವಿ. ಜಯರಾಮ್, ಸಾಹಿತಿ ಉಮಾ ಕುಲಕರ್ಣಿ ಉಪಸ್ಥಿತರಿದ್ದರು. ಎಸ್. ಎಲ್. ಭೈರಪ್ಪನವರನ್ನು ಶಾಲು ಹೊದೆಸಿ, ಹಾರ ತೊಡಿಸಿ, ಫಲಪುಷ್ಪವನ್ನಿತ್ತು ಸಮ್ಮಾನಿಸಲಾಯಿತು. ಅತಿಥಿಗಳನ್ನು ಹೂವಿನ ಗಿಡಗಳನ್ನು ನೀಡಿ ಸತ್ಕರಿಸಲಾಯಿತು. ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲಾ ಪ್ರಾಂಶುಪಾಲೆ ಜ್ಯೋತಿ ಕಡಕೊಳ್ ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ಮಾಧ್ಯಮ ಹೈಸ್ಕೂಲ್ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ರಾಮದಾಸ್ ಆಚಾರ್ಯ ಕನ್ನಡ ಸಂಸ್ಕೃತಿ ಸಚಿವರಾದ ಸಿ. ಟಿ. ರವಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಪಾತ್ರವನ್ನು ವಾಚಿಸಿದರು. ಕಾರ್ಯಕ್ರಮದ ನಂತರ ಡಾ| ಎಸ್. ಎಲ್. ಭೈರಪ್ಪನವರ ಕಾದಂಬರಿ ಮಂದ್ರ ಆಧಾರಿತ ಕಲಾತರಂಗ ಬೆಂಗಳೂರು ಕಲಾವಿದರು ಅಭಿನಯಿಸಿದ ಕನ್ನಡ ಸಂಗೀತ ನಾಟಕ ಪ್ರದರ್ಶನಗೊಂಡಿತು. ಕಾರ್ಯಕ್ರಮದಲ್ಲಿ ಕನ್ನಡಿಗರು, ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
–ಚಿತ್ರ-ವರದಿ: ಕಿರಣ್ ಬಿ. ರೈ ಕರ್ನೂರು