Advertisement

ಅಕ್ರಮ ವಲಸಿಗರ ಗಡೀಪಾರು ಮಾಡಿ

02:55 PM Aug 12, 2018 | Team Udayavani |

ದಾವಣಗೆರೆ: ಕರ್ನಾಟಕದ ವಿವಿಧ ಭಾಗದಲ್ಲಿರುವ ಬಾಂಗ್ಲಾ ಒಳಗೊಂಡಂತೆ ಇತರೆ ದೇಶಗಳ ಅಕ್ರಮ ವಲಸಿಗರನ್ನು ಕೂಡಲೇ ಗಡೀಪಾರು ಮಾಡಲು ಒತ್ತಾಯಿಸಿ ಶನಿವಾರ ಸುವರ್ಣ ಕರ್ನಾಟಕ ವೇದಿಕೆ ಕಾರ್ಯಕರ್ತರು ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ.

Advertisement

ಕಳೆದ 7-8 ವರ್ಷದಿಂದ ರಾಜ್ಯದ ವಿವಿಧ ಭಾಗದಲ್ಲಿ ಬಾಂಗ್ಲಾ ಮೂಲದ ನಾಗರಿಕರು ಅಕ್ರಮವಾಗಿ ನೆಲೆಯೂರುತ್ತಿದ್ದಾರೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಬಾಂಗ್ಲಾ ದೇಶದ ರೂಹಿಗಳು, ನೈಜಿರಿಯನ್‌ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಾರಂಭಿಕ ಹಂತದಲ್ಲಿ ಇಲ್ಲಿನ ಜನರೊಂದಿಗೆ ಬಹಳ ಅನ್ಯೋನ್ಯವಾಗಿ ಇದ್ದುಕೊಂಡು ಅವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ನಮ್ಮವರ ಮೇಲೆ ಆಕ್ರಮಣ, ಹಗೆ ಸಾಧಿಸುವ, ಪ್ರತ್ಯೇಕ ವ್ಯಾಪಾರ-ವಹಿವಾಟು ನಡೆಸುವಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಮುಂದಿನ ದಿನಗಳಲ್ಲಿ ಆಂತರಿಕ ಕಲಹಕ್ಕೆ ಕಾರಣವಾಗಲಿದೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ವಿದ್ಯಾಭ್ಯಾಸ, ಪ್ರವಾಸ ಮುಂತಾದ ಕಾರಣಗಳ ನೆಪದಲ್ಲಿ ಇಲ್ಲಿಗೆ ಬಂದಿರುವವರು ವೀಸಾ ಅವಧಿ ಮುಗಿದರೂ ಇಲ್ಲಿಯೇ ನೆಲೆಯೂರುತ್ತಿದ್ದಾರೆ. ಅಕ್ರಮ ವಲಸಿಗರು ದುಶ್ಚಟಗಳ ದಾಸರಾಗಿ ನಮ್ಮ ಸಂಸ್ಕೃತಿ ಹಾಳು ಮಾಡುವ ಜೊತೆಗೆ ಆನೇಕ ಅಪರಾಧ ಕೃತ್ಯದಲ್ಲಿ ತೊಡಗುತ್ತಿದ್ದಾರೆ. ಇದೇ ಸ್ಥಿತಿ ಮುಂದುವರೆದಲ್ಲಿ ಇಡೀ ರಾಜ್ಯದಲ್ಲಿ ಅಕ್ರಮ ವಲಸಿಗರ ಸಂಖ್ಯೆಯೇ ಹೆಚ್ಚಾಗಿ, ಕನ್ನಡಿಗರೇ ಅಲ್ಪಸಂಖ್ಯಾತರಾಗುವ ಎಲ್ಲಾ ಸಾಧ್ಯತೆ ಇವೆ. ಹಾಗಾಗಿ ಸರ್ಕಾರ ಮುಂಜಾಗ್ರತೆಯಾಗಿ ಅಕ್ರಮ ವಲಸಿಗರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು.ಇಲ್ಲದಿದ್ದಲ್ಲಿ, ವೇದಿಕೆಯಿಂದ ರಾಜ್ಯದ್ಯಾಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವೇದಿಕೆ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಆರ್‌. ಸಂತೋಷ್‌ ಕುಮಾರ್‌, ಮಂಜುನಾಥ್‌ ಬಾಳೆಕಾಯಿ, ಮಹಮ್ಮದ್‌ ಅಲಿ, ವಿರುಪಾಕ್ಷ, ಶಿವಕುಮಾರ್‌, ಉದಯ್‌ಕುಮಾರ್‌, ಸೋಮಶೇಖರ್‌, ಪ್ರಭು, ದೇವರಾಜ್‌, ಶಂಕರಮೂರ್ತಿ, ಆರ್‌.ಕೆ. ರಾಮು, ಚಂದ್ರಶೇಖರ್‌, ಕೆ.ಟಿ. ರಂಗನಾಥ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next