ಈಗಂತೂ ಯುವಕರ ಚಿತ್ರಗಳದ್ದೇ ಕಾರುಬಾರು. ಆ ಸಾಲಿಗೆ ಈಗ “ಗೋಸಿ ಗ್ಯಾಂಗ್’ ಚಿತ್ರವೂ ಸೇರುತ್ತದೆ. ಶೀರ್ಷಿಕೆ ಕೇಳಿದರೆ ಇದೊಂದು ಪಕ್ಕಾ ಯೂತ್ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಹೌದು, “ಗೋಸಿ ಗ್ಯಾಂಗ್’ ಪಕ್ಕಾ ಯೂತ್‌ಫುಲ್ ಸಿನಿಮಾ. ಈಗಾಗಲೇ ಒಂದಷ್ಟು ಸುದ್ದಿಯಾಗಿರುವ ಈ ಚಿತ್ರ ಮಾ.8 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಎಲ್ಲಾ ಚಿತ್ರಗಳಲ್ಲೂ ಕಾಲೇಜ್ ಸ್ಟೋರಿಗಳು ಮತ್ತು ಲವ್‌ಸ್ಟೋರಿ ಕಾಮನ್.
ಇಲ್ಲೂ ಅದು ಇದ್ದರೂ, ಹೊಸ ವಿಷಯದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ ಚಿತ್ರತಂಡ. ಈ ಚಿತ್ರದಲ್ಲಿ ಅಜಯ್ ಕಾರ್ತಿಕ್ ಮತ್ತು ಯತಿರಾಜ್ ಜಗ್ಗೇಶ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಅಜಯ್ ಕಾರ್ತಿಕ್‌ಗೆ ಮೊದಲ ಚಿತ್ರವಿದು. ಇನ್ನು, ಕೆ.ಶಿವಕುಮಾರ್ ಈ ಚಿತ್ರ ನಿರ್ಮಾಣ ಮಾಡಿದರೆ, ರಾಜು ದೇವಸಂದ್ರ ಅವರು ನಿರ್ದೇಶಕರು. ಇಲ್ಲಿ ಕಾಲೇಜ್ ಮತ್ತು ಲವ್‌ಸ್ಟೋರಿ ಜೊತೆ ಡ್ರಗ್ಸ್ ವಿಷಯ ಹೈಲೈಟ್ ಎಂಬುದು ವಿಶೇಷ.
ಸಾಮಾನ್ಯವಾಗಿ ಬಹುತೇಕ ಚಿತ್ರಗಳಲ್ಲಿ ಡ್ರಗ್ಸ್ ಕಥೆ ಬಂದರೂ, ಅದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರೋದಿಲ್ಲ. ಇಲ್ಲಿ ಡ್ರಗ್ಸ್ ಮಾಫಿಯಾ ಅನ್ನೋದು, ಚಿತ್ರದ ಕಥಾನಾಯಕರ ಲೈಫಲ್ಲಿ ಏನೆಲ್ಲಾ ಎಡವಟ್ಟು ಮಾಡುತ್ತೆ ಎಂಬುದು ಕೇಂದ್ರಬಿಂದು. “ಗೋಸಿ ಗ್ಯಾಂಗ್’ ಎಂಬ ಟೈಟಲ್ ಕೇಳಿದವರಿಗೆ ಇದು ಪುಂಡರ ಚಿತ್ರವಿರಬೇಕು ಎಂಬ ಪ್ರಶ್ನೆ ಎದುರಾಗಬಹುದು. ಇಲ್ಲಿ ಅಂತಹ ವಿಷಯವಿದ್ದರೂ, ಮುಗ್ಧ ಮನಸುಗಳ ವಿಷಯವಿದೆ. ಚಿತ್ರದಲ್ಲೊಂದು ಸಂದೇಶವೂ ಇದೆ.
ಇದು ಯೂತ್ ಚಿತ್ರವಾಗಿದ್ದರೂ ಪ್ರೀತಿ, ಗೀತಿ ಇತ್ಯಾದಿ ಇಲ್ಲ. ಆದರೆ, ಒಂಚೂರು ಕಾಮಿಡಿಯೊಂದಿಗೆ ಕ್ರಶ್ ಆಗುವಂತಹ ಅಂಶಗಳು ಇಲ್ಲಿರಲಿವೆ. ಎಸ್ಸೆಸ್ಸೆಲ್ಸಿ ಪಾಸ್ ಆದ ಹುಡುಗರು, ಹಳ್ಳಿಯಿಂದ ಸಿಟಿಗೆ ಬಂದಾಗ, ಅವರಲ್ಲಿ ಆಗುವ ಬದಲಾವಣೆಗಳು, ಸಿಟಿ ಹುಡುಗಿಯರನ್ನು ನೋಡಿದಾಗ ಆಗುವಂತಹ ಆಕರ್ಷಣೆ ಮತ್ತು ಗೊತ್ತಿಲ್ಲದೆಯೇ ಮಾಫಿಯಾದಲ್ಲಿ ಸಿಲುಕಿಕೊಳ್ಳುವ ಸಂದರ್ಭಗಳು ಚಿತ್ರದಲ್ಲಿವೆ. ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣವಿದೆ. ಆರವ್ ಸಂಗೀತದಲ್ಲಿ ನಾಲ್ಕು ಹಾಡುಗಳು ಚಿತ್ರದಲ್ಲಿವೆ.