ಗದಗ: ಕೆಲಸದಿಂದ ತೆರವುಗೊಳಿಸಿರುವ ಹಾಸ್ಟೆಲ್ ಹೊರ ಸಂಪನ್ಮೂಲ ಸಿಬ್ಬಂದಿಯನ್ನು ಮತ್ತೆ ಸೇವೆಯಲ್ಲಿ ಮುಂದುವರಿಸಬೇಕು. ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನೂರಾರು ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.
ಈ ಕುರಿತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ರತ್ನಮ್ಮ ಹೊಸಮನಿ ಅವರಿಗೆ ಮನವಿ ಸಲ್ಲಿಸಿ, ಕಳೆದ 2019 ಆಗಸ್ಟ್ ತಿಂಗಳ 21, 22ರಂದು ಹಾಸ್ಟೆಲ್ ಹೊರ ಸಂಪನ್ಮೂಲ ಸಿಬ್ಬಂದಿಯನ್ನು ಸೇವೆಯಲ್ಲಿ ಮುಂದುವರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಸ್ವಾತಂತ್ರ್ಯಉದ್ಯಾನವನದಲ್ಲಿ ಧರಣಿ ನಡೆಸಲಾಗಿದೆ.
ಅಂದು ಉಪ ಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವಥನಾರಾಯಣ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಸಿಬ್ಬಂದಿಗಳ ಸೇವೆಯನ್ನು ತಕ್ಷಣಕ್ಕೆ ಒಂದು ತಿಂಗಳು ಮುಂದುವರಿಸಲಾಗುವುದು. ಮುಂದಿನ ಅವಧಿಗೆ ಅವರ ಸೇವೆಯನ್ನು ಪಡೆಯುವ ಬಗ್ಗೆ ತೀರ್ಮಾನಿಸಲಾಗುವುದೆಂದು ಭರವಸೆ ನೀಡಿದ್ದರು. ಆದರೆ, 2019ರ ಅಕ್ಟೋಬರ್ ತಿಂಗಳ 15, 16ರಂದು ಮತ್ತೂಮ್ಮೆ ಧರಣಿ ನಡೆಸಿದಾಗ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ರಾಮಲು ಅವರು ಕೊಟ್ಟ ಭರವಸೆಯೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊರ ಸಂಪನ್ಮೂಲ ಸಿಬ್ಬಂದಿ ಸೇವೆಯನ್ನು ಆರು ತಿಂಗಳ ಅವಧಿಗೆ ಈ ಹಿಂದೆ 2 ಸಲ ವಿಸ್ತರಿಸಲಾಗಿದ್ದು, ಆ ತಿಂಗಳುಗಳಲ್ಲಿ ಮಾಡಿದ ಕೆಲಸಕ್ಕೆ ಇದುವರೆಗೂ ವೇತನ ಸಂದಾಯವಾಗಿಲ್ಲ. ಇದೇ ಕೆಲಸವನ್ನು ನಂಬಿರುವ ನೌಕರರ ಕುಟುಂಬಗಳು ಇದೀಗ ಬೀದಿಗೆ ಬರುವಂತಾಗಿದೆ. ಹೀಗಾಗಿ ತಕ್ಷಣವೇಬಾಕಿ ವೇತನ ಸಂದಾಯ ಮಾಡಿ ನಿವೃತ್ತಿವರೆಗೂ ತಮ್ಮನ್ನು ಕೆಲಸದಲ್ಲಿ ಮುಂದುವರಿಸಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪೀರು ರಾಠೊಡ, ಹನಮವ್ವ ಹೀರೆಮನಿ, ಮುತ್ತುರಾಜ ಮಾದರ, ಶಾಚಿತವ್ವ ಚಟ್ಟಿ, ಕಲ್ಲಮ್ಮ ಮ್ಯಾಗೇರಿ, ಮುದಕವ್ವ ನೀಲಣ್ಣವರ, ಎಸ್.ಎಂ. ಕ್ವಾಟಿ, ಶಂಕವ್ವ ಕೆ.ಅಡವಿ, ಗೀರಿಜವ್ವ ವಗ್ಗರ, ಮಾತೇಶ ಶಹರಸೂರಿ, ಚನ್ನವ್ವ ಗದ್ದಿ, ಸತೀಶ ವೀರನಗೌಡ್ರ ಕುರಡ್ಡಿ ಮತ್ತಿತರರು ಇದ್ದರು.