ಬೆಂಗಳೂರು: ಅತಿಥಿ ಶಿಕ್ಷಕರು ನಿಯೋಜನೆಗೊಂಡ ತತ್‌ಕ್ಷಣವೇ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆಯ ಪ್ರಧಾನ ಕಾರ್ಯ ದರ್ಶಿಗಳಿಗೆ ಸೂಚಿಸಿದ್ದಾರೆ.
ಅತಿಥಿ ಶಿಕ್ಷಕರು ನಿಯೋಜನೆ ಗೊಂಡಿದ್ದರೂ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಂಡಿರುವ ಶಿಕ್ಷಕರನ್ನು ಬಿಡುಗಡೆ ಮಾಡದಿರುವ ಹಲವು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಈ ಸೂಚನೆ ನೀಡಿದ್ದಾರೆ.
ಬಿಡುಗಡೆ ಮಾಡದಿದ್ದರೆ ಕಠಿನ ಕ್ರಮ
ಈ ಮಧ್ಯೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ. ಕಾವೇರಿ ಅವರು ಉಪನಿರ್ದೇಶಕರಿಗೆ ಪತ್ರ ಬರೆದಿದ್ದು, ಕೆಲವು ಜಿಲ್ಲೆಗಳಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಶಾಲಾ ಕರ್ತವ್ಯದಿಂದ ಬಿಡುಗಡೆ ಮಾಡಿಲ್ಲ. ಅಲ್ಲದೆ ನಿಯಮ ಬಾಹಿರವಾಗಿ ಅದೇ ಹುದ್ದೆಯನ್ನು ಖಾಲಿ ಹುದ್ದೆಯೆಂದು ಪರಿಗಣಿಸಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವುದರ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಒಂದೇ ಹುದ್ದೆಯಲ್ಲಿ ಇಬ್ಬರು ಶಿಕ್ಷಕರನ್ನು ನೇಮಕ ಮಾಡಿ ವೇತನ ಪಾವತಿಸುತ್ತಿರುವುದು ಕಾನೂನುಬಾಹಿರ. ಈ ರೀತಿಯ ಪ್ರಕರಣ ಕಂಡುಬಂದರೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರನ್ನು ಹೊಣೆ ಗಾರರನ್ನಾಗಿಸುವುದರ ಜತೆಗೆ ಸಂಬಂಧಪಟ್ಟವರಿಂದ ಸರಕಾರಕ್ಕೆ ಆಗಿರುವ ನಷ್ಟವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.