Advertisement

ದೇಶದ್ರೋಹಿಗಳ ಬಿಡುಗಡೆಗೆ ಒತ್ತಡ ಹಾಕಿಲ್ಲ: ಕೆಎಲ್‌ಇ ಐಟಿ ಸ್ಪಷ್ಟನೆ

10:34 AM Feb 18, 2020 | Suhan S |

ಹುಬ್ಬಳ್ಳಿ: ಪಾಕಿಸ್ತಾನ ಪರ ಘೋಷಣೆ ಕೂಗಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಕೆಎಲ್‌ಇ ಐಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿಗಳ ಬಿಡುಗಡೆ ಮಾಡುವಂತೆ ನಮ್ಮ ಕಾಲೇಜು ಆಡಳಿತ ಮಂಡಳಿ ಯಾವುದೇ ರೀತಿಯ ವಿನಂತಿ ಅಥವಾ ಒತ್ತಡ ಹಾಕಿಲ್ಲ ಎಂದು ಕೆಎಲ್‌ಇ ಐಟಿ ಕಾಲೇಜು ಪ್ರಾಚಾರ್ಯ ಬಸವರಾಜ ಅನಾಮಿ ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳ ಬಿಡುಗಡೆಗೆ ಯಾವುದೇ ರೀತಿಯ ಮುಚ್ಚಳಿಕೆ ಪತ್ರ ಬರೆದುಕೊಟ್ಟಿಲ್ಲ. ಈ ಕೃತ್ಯ ಎಸಗಿದ ಮೂವರು ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳು ಪ್ರಧಾನಮಂತ್ರಿಗಳ ವಿಶೇಷ ಸ್ಕಾಲರ್‌ಶಿಪ್‌ ಕೋಟಾದಡಿ ನಮ್ಮ ಕಾಲೇಜಿನಲ್ಲಿ ಪ್ರವೇಶ ಪಡೆದಿದ್ದರು. ಈ ವಿದ್ಯಾರ್ಥಿಗಳ ಆಯ್ಕೆ ನಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಈ ರೀತಿಯ ಕೋಟಾಗಳು ಎಲ್ಲ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಅನ್ವಯಿಸುತ್ತವೆ.

ಈ ವಿದ್ಯಾರ್ಥಿಗಳ ಶಿಕ್ಷಣ ಶುಲ್ಕ ಹಾಗೂ ಸ್ಕಾಲರ್‌ಶಿಪ್‌ ಹಣವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ. ವಿದ್ಯಾರ್ಥಿಗಳು ಮಾಡಿರುವ ಕೃತ್ಯ ಬಯಲಿಗೆ ಬಂದ ತಕ್ಷಣವೇ ಫೆ.15ರಂದು ಗೋಕುಲ ರಸ್ತೆ ಪೊಲೀಸ್‌ ಠಾಣೆಗೆ ದೂರುಸಲ್ಲಿಸಲಾಗಿದೆ. ನಂತರ ಪೊಲೀಸ್‌ ಅಧಿಕಾರಿಗಳು ನಮ್ಮ ಕಾಲೇಜಿಗೆಬಂದು ವಿದ್ಯಾರ್ಥಿಗಳನ್ನು ವಿಚಾರಿಸಿ ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರು ವಿದ್ಯಾರ್ಥಿಗಳ ಮೇಲೆ ಎಫ್‌ ಐಆರ್‌ ದಾಖಲಿಸಿದ್ದಾರೆ.

ವಿದ್ಯಾರ್ಥಿಗಳ ಕೃತ್ಯ ಗಮನಕ್ಕೆ ಬಂದ ತಕ್ಷಣ ಕಾಲೇಜಿನಿಂದ ಅಮಾನತು ಮಾಡಲಾಗಿದೆ. ದೇಶಪ್ರೇಮ ಹಾಗೂ ರಾಷ್ಟ್ರೀಯತೆಯನ್ನು ಎತ್ತಿ ಹಿಡಿದಿರುವ ಕೆಎಲ್‌ಇ ಸಂಸ್ಥೆ ಇಂಥ ಕೃತ್ಯವನ್ನು ಎಂದಿಗೂ ಸಹಿಸಲ್ಲ. ದೇಶದ್ರೋಹ ಕೃತ್ಯ ಎಸಗಿರುವ ಮೂವರು ವಿದ್ಯಾರ್ಥಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅವರಿಗೆ ಶಿಕ್ಷೆಯಾಗಲೇಬೇಕೆಂದು ಸಂಸ್ಥೆ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ .

Advertisement

Udayavani is now on Telegram. Click here to join our channel and stay updated with the latest news.

Next