ಮಂಡ್ಯ: ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಭತ್ತದ ಹೊಸ ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಈವರೆಗೆ ಸುಮಾರು 300ಕ್ಕೂ ಹೆಚ್ಚು ತಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರು ಕೃಷಿ ವಿಸ್ತರಣಾ ಧಿಕಾರಿ ಡಾ.ಎನ್ .ದೇವಕುಮಾರ್ ತಿಳಿಸಿದರು.
ತಾಲೂಕಿನ ಗೊರವಾಲೆ ಗ್ರಾಮದ ದೇವರಾಜು ಅವರ ಜಮೀನಿನಲ್ಲಿ ಕೃಷಿ ವಿಶ್ವವಿದ್ಯಾಲಯ, ವಿ.ಸಿ.ಫಾರಂ ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ನಡೆದ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರತೀ ವರ್ಷ ಕೃಷಿ ವಿವಿಯಿಂದ ರೈತರಿಗಾಗಿ ಹಲವಾರು ತಳಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಜತೆಗೆ ಅದನ್ನು ರೈತರ ಜಮೀನಿನಲ್ಲಿ ಬೆಳೆದು ಉತ್ತಮವಾದ ತಳಿಗಳಾದಲ್ಲಿ ರೈತರಿಗೆ ಅರಿವು ಮೂಡಿಸಲಾಗುತ್ತದೆ ಎಂದು ಹೇಳಿದರು.
ಸದ್ಬಳಕೆ ಮಾಡಿಕೊಳ್ಳಬೇಕು: ರೈತರ ಜಮೀನಿನಲ್ಲಿ ಬೆಳೆಯುವ ಇಂತಹ ತಳಿಗಳು ಯಾವ ರೀತಿ ಬರುತ್ತೆ, ಇಳುವರಿ ಹೇಗೆ ಬರುತ್ತದೆ ಎಂಬುದರ ಕುರಿತಂತೆ ಬೆಳಕು ಚೆಲ್ಲಲು ಇಂಥ ಕ್ಷೇತ್ರೋತ್ಸವಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅದನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆದಾಯ ಕಂಡುಕೊಳ್ಳಬೇಕು: ಯಾವುದೋ ಒಂದು ಪ್ರದೇಶಕ್ಕೆ, ವಾತಾವರಣಕ್ಕೆ ಅನುಗುಣವಾ ಗಿಯೂ ತಳಿಗಳನ್ನು ಉತ್ಪಾದಿಸಲಾಗುತ್ತದೆ. ಅದರ ಬಗ್ಗೆಯೂ ರೈತರಿಗೆ ಮಾಹಿತಿ ನೀಡಲಾಗುತ್ತದೆ. ಯಾವ ಪ್ರದೇಶಕ್ಕೆ ಯಾವ ತಳಿಗಳು ಅಗತ್ಯವಿದೆಯೋ ಅದನ್ನು ಪರಿಶೀಲಿಸಿ ತಮ್ಮ ಜಮೀನುಗಳಲ್ಲಿ ಬೆಳೆದು ಕೃಷಿಯಲ್ಲಿ ಆದಾಯ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಉಪಯೋಗುವ ತಳಿಗಳನ್ನು ಹೆಚ್ಚಾಗಿ ಉತ್ಪಾದನೆ ಮಾಡುತ್ತಿದ್ದು, ಹೆಚ್ಚಿನ ವಿತರಣೆಗಾಗಿ ಬಿತ್ತನೆ ಬೀಜ ತಯಾರಿಸುವುದು, ರೈತರಿಗೆ ಹೊಸ ತಳಿ ಬಗ್ಗೆ ಮನವರಿಕೆ ಮಾಡಿಕೊಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಬಿತ್ತನೆ ಬೀಜದ ಬಗ್ಗೆ ತಾಂತ್ರಿಕ ಮಾಹಿತಿ ಅಗತ್ಯವಿದ್ದಲ್ಲಿ ಕೃಷಿ ವಿಜ್ಞಾನಿಗಳನ್ನು ಸಂಪರ್ಕಿಸ ಬಹುದು ಎಂದು ಸಲಹೆ ನೀಡಿದರು.
ತಳಿವರ್ಧಕ ಬೀಜವನ್ನು ಒಂದು ವರ್ಷ ಮೊದಲೇ ಕರ್ನಾಟಕ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ ಅಲ್ಲಿಂದಲೂ ಸಹ ಬೀಜೋತ್ಪಾದನೆ ಮಾಡಿ ನೀಡಲಾಗುತ್ತದೆ ಎಂದು ತಿಳಿಸಿದರು. ಕೆವಿಕೆ ಹಿರಿಯ ವಿಜ್ಞಾನಿ ಡಾ.ಎನ್.ಪಿ.ನರೇಶ್, ವಿಜ್ಞಾನಿ ಡಾ.ಷಡಕ್ಷರಿ, ಬೇಸಾಯ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಡಿ.ಎಚ್.ರೂಪಶ್ರೀ, ಸಹ ಸಂಶೋಧನಾ ನಿರ್ದೇಶಕ ಡಾ.ವೆಂಕಟೇಶ್, ಸಹ ವಿಸ್ತರಣಾ ನಿರ್ದೇಶಕ ಡಾ.ರಘುಪತಿ, ವಿಸ್ತರಣಾ ಮುಂದಾಳು ಡಾ.ಸಿ.ರಾಮಚಂದ್ರ, ಹೈಬ್ರೀಡ್ ಭತ್ತದ ಪ್ರಾಧ್ಯಾಪಕ ಡಾ.ಶಿವಕುಮಾರ್, ಕಾರ್ಯಕ್ರಮ ಸಹಾಯಕ ಎಚ್.ಎಂ.ಮಹೇಶ್ ಸೇರಿದಂತೆ ಮತ್ತಿತರರಿದ್ದರು.