Advertisement

ಮೀನುಗಾರರ ಸಾಲಮನ್ನಾ ಹಣ ಬಿಡುಗಡೆ

07:58 AM Jun 17, 2020 | Suhan S |

ಕಾರವಾರ: ಮಹಿಳಾ ಮೀನುಗಾರರಿಗೆ ಸಾಲ ನೀಡಲು ಬ್ಯಾಂಕ್‌ಗಳು ಆದ್ಯತೆ ನೀಡಬೇಕೆಂದು ಮೀನುಗಾರಿಕೆ ಹಾಗೂ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮೀನುಗಾರಿಕಾ ಇಲಾಖೆ ಪ್ರಗತಿ ಪರಿಶೀಲಿಸಿ ಮಾತನಾಡಿ, ಮಹಿಳೆಯರಿಗೆ ನೀಡಿದ ಸಾಲ ಸೂಕ್ತ ಕಾಲದಲ್ಲಿ ಮರು ಪಾವತಿಯಾಗುತ್ತದೆ. ಹಾಗಾಗಿ ಮಹಿಳಾ ಮೀನುಗಾರರಿಗೆ ಸಾಲ ನೀಡಲು ಬ್ಯಾಂಕ್‌ಗಳು ಆದ್ಯತೆ ನೀಡಬೇಕು. ಈ ಮಹಿಳೆಯರು 50 ಸಾವಿರದವರೆಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಬ್ಯಾಂಕ್‌ಗಳು ಮಾರ್ಜಿನ್‌ ವಿಧಿಸದೇ ಸಾಲ ನೀಡಬೇಕೆಂದರು.

ಅಲ್ಲದೇ, ಬೋಟ್‌ ಖರೀದಿ ಸಾಲಕ್ಕೆ ಅರ್ಜಿ ಸಲ್ಲಿಸುವ ಮೀನುಗಾರರಿಗೆ 2 ಲಕ್ಷದವರೆಗೆ ಯಾವುದೇ ಸೆಕ್ಯೂರಿಟಿ ಇಲ್ಲದೆ ಸಾಲ ವಿಧಿಸುವ ಕಾರ್ಯವಾಗಬೇಕೆಂದರು. ಜಿಲ್ಲೆಯಲ್ಲಿ ಮೀನುಗಾರರಿಗೆ ಕಿಸಾನ್‌ ಕಾರ್ಡ್‌ ವಿತರಣೆ ಪ್ರಗತಿದಾಯಕವಾಗಿರುವುದಿಲ್ಲ. ಮುಂದಿನ 2 ತಿಂಗಳೊಳಗಾಗಿ ಕಿಸಾನ್‌ ಕಾರ್ಡ್‌ ವಿತರಿಸುವ ಕಾರ್ಯವಾಗಬೇಕು. ರಾಜ್ಯ ಸರ್ಕಾರವು ಮೀನುಗಾರರ ಸಾಲ ಮನ್ನಾ ಮಾಡಿ 62 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, 23 ಸಾವಿರ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲ್ಲಿದ್ದಾರೆ. ಈಗಾಗಲೇ 17 ಸಾವಿರ ಫಲಾನುಭವಿಗಳು ಗ್ರೀನ್‌ ಲಿಸ್ಟ್‌ನಲ್ಲಿದ್ದು, ಭೂಮಿ ತಂತ್ರಾಂಶದಲ್ಲಿ ದಾಖಲೆಗಳ ಪರಿಶೀಲನೆಯಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆ ಮೀನುಗಾರರಿಗೆ 2.2 ಕೋಟಿ ಸಾಲ ಮನ್ನಾಕ್ಕಾಗಿ ಪ್ರಸ್ತಾಪಿಸಲಾಗಿದ್ದು, 1 ಸಾವಿರ ಫಲಾನುಭವಿಗಳ ದಾಖಲಾತಿಗಳ ಪರಿಶೀಲನೆಯನ್ನು ಆದಷ್ಟು ಶೀಘ್ರವೇ ಕೈಗೊಳ್ಳಬೇಕೆಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಫಲಾನುಭವಿಗಳಿಗೆ ದಾಖಲಾತಿಗಳನ್ನು ಸಲ್ಲಿಸುವ ಸಂದರ್ಭದಲ್ಲಿ ಭಾಷಾ ಸಮಸ್ಯೆ ಉಂಟಾಗುತ್ತಿದ್ದು, ಬ್ಯಾಂಕ್‌ನ ಸಿಬ್ಬಂದಿ ಕನ್ನಡ ಭಾಷೆ ಕಲಿತು ಕನ್ನಡದಲ್ಲಿಯೇ ವ್ಯವಹರಿಸಬೇಕೆಂದು ಸೂಚಿಸಿದರು. ಜಿಲ್ಲಾಧಿಕಾರಿ ಡಾ| ಹರೀಶ ಕುಮಾರ ಮಾತನಾಡಿ, ಮೀನುಗಾರಿಕೆ ಇಲಾಖೆಯು ಬ್ಯಾಂಕ್‌ ಹಾಗೂ ಮೀನುಗಾರರ ಸಂಘಗಳ ಮಧ್ಯೆ ಸಂಪರ್ಕ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಸರ್ಕಾರದ ಯೋಜನೆಗಳನ್ನು ಮೀನುಗಾರರಿಗೆ ತಲುಪಿಸಲು ಸಾಧ್ಯವಾಗುತ್ತದೆ. ಶೂನ್ಯ ಬಡ್ಡಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ 11 ಸಾವಿರ ಅರ್ಜಿಗಳನ್ನು ಇನ್ನೆರೆಡು ತಿಂಗಳಲ್ಲಿ ವಿಲೇವಾರಿ ಮಾಡುವಂತಹ ಕಾರ್ಯವನ್ನು ಮೀನುಗಾರಿಕೆ ಇಲಾಖೆಯು ಕೈಗೊಳ್ಳಬೇಕೆಂದು ಸೂಚಿಸಿದರು.

ಶಾಸಕಿ ರೂಪಾಲಿ ನಾಯ್ಕ, ಜಿ.ಪಂ. ಸಿಇಒ ಎಂ. ರೋಷನ್‌, ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ. ನಾಗರಾಜ್‌ ಹಾಗೂ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next