ಕೊಡಿಯಾಲ್‌ಬೈಲ್: ಹಿರಿಯ ಸಾಹಿತಿ, ವಿದ್ವಾಂಸ ಡಾ| ಬಿ.ಎ.ವಿವೇಕ ರೈ ಅವರು ಬರೆದ ‘ಓರಲ್ ಟ್ರೆಡಿಷನ್ಸ್ ಇನ್ ಸೌತ್ ಇಂಡಿಯಾ’, ‘ಕನ್ನಡ-ದೇಸಿ ಸಮ್ಮಿ ಲನದ ನುಡಿಗಳು’ ಹಾಗೂ ’80 ದಿನಗಳಲ್ಲಿ ವಿಶ್ವ ಪರ್ಯಟನ’ ಎಂಬ ಮೂರು ಕೃತಿಗಳ ಬಿಡುಗಡೆ ಸಮಾರಂಭ ಕೆನರಾ ಕಾಲೇಜು ಸಭಾಂಗಣದಲ್ಲಿ ರವಿವಾರ ಜರಗಿತು.
ಆಕೃತಿ ಆಶಯ ಪಬ್ಲಿಕೇಶನ್ಸ್ ಹಾಗೂ ರಂಗ ಸಂಗಾತಿ ಆಯೋಜಿಸಿದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ| ತಾಳ್ತಜೆ ವಸಂತ ಕುಮಾರ್ ಅವರು, ಡಾ| ವಿವೇಕ್ ರೈ ತಮ್ಮ ಆತ್ಮ ಚರಿತ್ರೆ ಬರೆಯುವ ಮುಖೇನ ಸಾಹಿತ್ಯಾಸಕ್ತ ಮನಸುಗಳಿಗೆ ಹೊಸ ಬೆಳಕು ನೀಡಬೇಕು ಎಂದರು.
ವಿವೇಕ ರೈ ಹಸನ್ಮುಖೀ ಮನೋ ಭೂಮಿಕೆಯ ಮೂಲಕವೇ ಗುರುತಿಸುವವರು. ಕೋಟಿ ಚೆನ್ನಯ ಚಿತ್ರದಲ್ಲಿ ಎಕ್ಕಸಕ ಹಾಡು ಬರೆಯುವ ಮೂಲಕ ತಾನು ಕವಿ ಹೃದಯದ ವ್ಯಕ್ತಿ ಎಂಬುದನ್ನು ಸಾಕ್ಷೀಕರಿಸಿದ್ದಾರೆ. ಕಥೆಯೊಂದು ದೊಡ್ಡದಿದ್ದರೆ, ಅದನ್ನು ಎಲ್ಲವನ್ನೂ ಸಣ್ಣದಾಗಿ ಎಲ್ಲೂ ಕಥೆಯ ಸಾರ ತಪ್ಪದ ಹಾಗೆ ವಿವರಿಸಿದ ರೈಗಳು ಪಂಪನ ವಾರಸುದಾರಿಕೆಯವರು ಎಂದರೆ ತಪ್ಪಲ್ಲ ಎಂದು ವಿಶ್ಲೇಷಿಸಿದರು.
‘ಓರಲ್ ಟ್ರೆಡಿಷನ್ಸ್ ಇನ್ ಸೌತ್ ಇಂಡಿಯಾ’ ಪುಸ್ತಕವನ್ನು ಹಿರಿಯ ಸಾಹಿತಿ ಡಾ| ಬಿ.ಸುರೇಂದ್ರ ರಾವ್, ‘ಕನ್ನಡ ದೇಸಿ ಸಮ್ಮಿಲನದ ಕೃತಿಗಳನ್ನು ಹಿರಿಯ ವಿದ್ವಾಂಸ ಡಾ| ಕೆ.ಚಿನ್ನಪ್ಪ ಗೌಡ, ’80 ದಿನಗಳಲ್ಲಿ ವಿಶ್ವ ಪರ್ಯಟನ’ ಕೃತಿಯನ್ನು ಸಾಹಿತಿ ಡಾ| ನರೇಂದ್ರ ರೈ ದೇರ್ಲ ಅವರು ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಾಹಿತಿ ಡಾ| ನಾ.ದಾ. ಶೆಟ್ಟಿ ಉಪಸ್ಥಿತರಿದ್ದರು.
ವಿವೇಕ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಲೂರು ನಾಗೇಶ್ ವಂದಿಸಿದರು. ಶಶಿರಾಜ್ ಕಾವೂರು ನಿರೂಪಿಸಿದರು.