ಬೆಂಗಳೂರು: ಗಣರಾಜ್ಯೋತ್ಸವದ ಮರುದಿನವೇ, ಜೀವಾವಧಿ ಶಿಕ್ಷೆ ಎದುರಿಸುತ್ತಿರುವ ಕೈದಿಗಳಿಗೆ ಸರಕಾರ “ಬಿಡುಗಡೆ ಭಾಗ್ಯ’ ನೀಡಿದೆ.
ಜೀವಾವಧಿ ಶಿಕ್ಷೆಯಲ್ಲಿದ್ದ 166 ಬಂದಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಪೂರ್ವವೇ ಬಿಡುಗಡೆ ಮಾಡಲು ಸರಕಾರ ನಿರ್ಧರಿಸಿದ್ದು, ಈ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಹೇಳಿದರು.
ಇದರಲ್ಲಿ ಹೆಚ್ಚಿನವರು ಬೆಂಗಳೂರು ಕೇಂದ್ರ ಕಾರಾಗೃಹ, ಬಳ್ಳಾರಿ ಕಾರಾಗೃಹದಲ್ಲಿನ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಳಿದಂತೆ ಮೈಸೂರು, ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುವವರಿದ್ದಾರೆ.
ತಲೆಯೆತ್ತಲಿದೆ ಗುಪ್ತದಳ ತರಬೇತಿ ಅಕಾಡೆಮಿ:
ನಗರದ ಬೇಗೂರು ಹೋಬಳಿಯ ಹುಳಿಮಾವಿನಲ್ಲಿ ಶೀಘ್ರದಲ್ಲೇ ರಾಜ್ಯ ಗುಪ್ತದಳ ತರಬೇತಿ ಅಕಾಡೆಮಿ ತಲೆಯೆತ್ತಲಿದೆ. ಈ ಸಂಬಂಧದ ಪ್ರಸ್ತಾವನೆಗೆ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹುಳಿಮಾವು ಗ್ರಾಮದಲ್ಲಿ ಸುಮಾರು 4.19 ಎಕರೆ ಸರಕಾರಿ ಜಮೀನಿನಲ್ಲಿ ಉದ್ದೇಶಿತ ಗುಪ್ತದಳ ಘಟಕದ ತರಬೇತಿ ಅಕಾಡೆಮಿ ಸ್ಥಾಪಿಸಲು ಒಳಾಡಳಿ ಇಲಾಖೆ ನಿರ್ಧರಿಸಿದೆ. ಈ ಜಮೀನನ್ನು ಉಚಿತವಾಗಿ ಮಂಜೂರು ಮಾಡಲು ಸಂಪುಟ ಅನುಮೋದನೆ ನೀಡಿತು.