Advertisement

ಅಪೂರ್ಣ ಕಾಮಗಾರಿಗೆ ಹಣ ಬಿಡುಗಡೆ

03:44 PM Jul 24, 2018 | |

ದಾವಣಗೆರೆ: ಹೊನ್ನಾಳಿ ತಾಲೂಕು ಸುಂಕದಕಟ್ಟೆಯ ಶ್ರೀ ನರಸಿಂಹಸ್ವಾಮಿ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದ
ಮಹಾದ್ವಾರ ಮತ್ತು ರಾಜಗೋಪುರ ಕಾಮಗಾರಿ ಅಪೂರ್ಣಗೊಂಡಿದ್ದರೂ ಕಾಮಗಾರಿ ಮುಗಿದಿದೆ ಎಂದು ಹಣ
ಬಿಡುಗಡೆ ಮಾಡಿದವರು, ಪಡೆದವರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯ ಅಧ್ಯಕ್ಷ ಗುರುಪಾದಯ್ಯ ಮಠದ್‌ ಒತ್ತಾಯಿಸಿದ್ದಾರೆ.

Advertisement

ದೇವಸ್ಥಾನದ ಮಹಾದ್ವಾರ ಮತ್ತು ರಾಜಗೋಪುರದ ಒಂದೇ ಕಾಮಗಾರಿಗೆ ಎರಡು ಬಾರಿ ಟೆಂಡರ್‌ ಕರೆಯಲಾಗಿದೆ.
ಅಲ್ಲದೆ ಕೆಲಸ ಮುಗಿದಿದೆ ಎಂದು 49.95 ಲಕ್ಷ ಹಣ ಬಿಡುಗಡೆಯೂ ಆಗಿದೆ. ಆದರೆ, ಮಹಾದ್ವಾರದ ಕೆಲಸವೇ ಆಗಿಲ್ಲ. ಸಂಬಂಧಿತ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಜಿಲ್ಲಾಧಿಕಾರಿಗಳು 8 ದಿನದ ಒಳಗೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಹೊನ್ನಾಳಿಯಲ್ಲಿ ಹೋರಾಟ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು. 

ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಎ ಶ್ರೇಣಿ ದೇವಸ್ಥಾನ ಇದಾಗಿದ್ದು, ವರ್ಷಕ್ಕೆ ಕೋಟ್ಯಾಂತರ ಆದಾಯ ಸರ್ಕಾರಕ್ಕೆ ಬರುತ್ತದೆ. 2011 ರಲ್ಲಿ ದೇವಸ್ಥಾನದ ಮಹಾದ್ವಾರ ಮತ್ತು ರಾಜಗೋಪುರ ನಿರ್ಮಾಣಕ್ಕೆ 49.95 ಲಕ್ಷ ಮೊತ್ತದ ಟೆಂಡರ್‌ ಕರೆಯಲಾಗಿತ್ತು. ಸುಂಕದಕಟ್ಟೆಯವರೇ ಆದ ಎಸ್‌.ಕೆ. ನರಸಿಂಹಮೂರ್ತಿ ಎಂಬುವರು 38.89 ಲಕ್ಷಕ್ಕೆ ಟೆಂಡರ್‌ ಪಡೆದು, ಕಾಮಗಾರಿ
ಕೈಗೊಂಡಿದ್ದರು. 2016 ರ ಏ. 11 ರಂದು ಕಾಮಗಾರಿ ಪೂರ್ಣಗೊಂಡಿದೆ ಎಂದು ಹಣ ಡ್ರಾ ಮಾಡಿಕೊಂಡಿದ್ದರು. ಆದರೆ, ಈ ಕ್ಷಣದವರೆಗೆ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.

ಪ್ರಾರಂಭದಲ್ಲಿ 38.89 ಲಕ್ಷಕ್ಕೆ ಮಹಾದ್ವಾರ ಮತ್ತು ರಾಜಗೋಪುರ ನಿರ್ಮಾಣದ ಟೆಂಡರ್‌ ಆಗಿತ್ತು. ಮತ್ತೆ ಅದೇ ಕಾಮಗಾರಿಗೆ 10 ಲಕ್ಷ ರೂ. ಉಪ ಅಂದಾಜು ಪಟ್ಟಿ ತಯಾರಿಸಿ, ಅದೇ ಗುತ್ತಿಗೆದಾರರಿಗೆ ನೀಡಲಾಗಿದ್ದರೂ ಕೆಲಸ ಮಾತ್ರ ಮುಗಿದಿಲ್ಲ. ಕೆಲಸ ಮಾಡದೇ ಹಣ ಬಿಡುಗಡೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್‌.ಎಚ್‌. ನರಸಪ್ಪ ಅವರು 2018ರ ಮೇ. 25 ರಂದು
ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ. ಆದರೂ, ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ಮೂರನೇ ವ್ಯಕ್ತಿಯಿಂದ ಕಾಮಗಾರಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಜುರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ಶ್ರೀ ನರಸಿಂಹಸ್ವಾಮಿ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳುವ ಮುನ್ನ ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು. ಆದರೆ, 10 ಲಕ್ಷ ವೆಚ್ಚದ ಭೋಜನಾಲಯ ಕಟ್ಟುವುದಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ಸುಸ್ಥಿತಿಯಲ್ಲಿದ್ದ ಶೌಚಾಲಯಗಳನ್ನು ಧ್ವಂಸಗೊಳಿಸಲಾಗಿದೆ. ಭೋಜನಾಲಯಕ್ಕೆ ಮತ್ತೆ ಟೆಂಡರ್‌ ಕರೆಯಲಾಗಿದೆ. ಯಾವುದೇ ಅನುಮತಿ ಪಡೆಯದೇ ಕಟ್ಟಡಗಳ ಧ್ವಂಸ ಮಾಡಿರುವವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಬೇಕು ಎಂದು ಒತ್ತಾಯಿಸಿದರು.

Advertisement

ವೇದಿಕೆಯ ರಾಜು ಕಣಗಣ್ಣನವರ್‌, ಡಾ| ಉಮೇಶ್‌ ಹಿರೇಮಠ್…, ಬಿ.ಎಲ್‌.ಶಾಂತಮೂರ್ತಿ, ಎ. ಉಮೇಶ್‌, ಎನ್‌.ಟಿ. ಮಂಜುನಾಥ್‌, ವಾಸಪ್ಪ, ಶಿವಾನಂದ್‌ ಹಳ್ಳೂರು, ಶ್ರೀ ನರಸಿಂಹಸ್ವಾಮಿ, ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ
ಸಮಿತಿ ಅಧ್ಯಕ್ಷ ಎಸ್‌.ಎಚ್‌. ನರಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next