Advertisement

ಶಿಖರಾರೋಹಣ 2ನೇ ಆವೃತ್ತಿ ಬಿಡುಗಡೆ ಇಂದು

12:37 PM Feb 10, 2018 | |

ಮೈಸೂರು: ಪ್ರಧಾನ ಮಂತ್ರಿಗಳಾಗಿ ಎಚ್‌.ಡಿ.ದೇವೇಗೌಡರ ಸಾಧನೆ ಕುರಿತಂತೆ ಹೊರತರಲಾಗಿರುವ ಸಾಧನೆಯ ಶಿಖರಾರೋಹಣ ಎರಡನೇ ಆವೃತ್ತಿ ಶನಿವಾರ ಮೈಸೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಜೆಡಿಎಸ್‌ ಮುಖಂಡರಾದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್‌.ರಂಗಪ್ಪ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಶ್ವವಿದ್ಯಾನಿಲಯದ ಸೆನೆಟ್‌ ಭವನದಲ್ಲಿ ಸಂಜೆ 4.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಗ್ರಂಥ ಬಿಡುಗಡೆ ಮಾಡಲಿದ್ದಾರೆ. ಇತಿಹಾಸ ತಜ್ಞರಾದ ವಿಶ್ರಾಂತ ಕುಲಪತಿ ಡಾ.ಬಿ.ಷೇಕ್‌ ಅಲಿ ಅಧ್ಯಕ್ಷತೆವಹಿಸಲಿದ್ದಾರೆ. ಎಚ್‌.ಡಿ.ದೇವೇಗೌಡ ಹಾಗೂ ಚೆನ್ನಮ್ಮ ದೇವೇಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.

ಸಾಧನೆಗೆ ಅಕ್ಷರ ರೂಪ: ಪುಸ್ತಕ ರಚನೆಕಾರರಲ್ಲಿ ಒಬ್ಬರಾದ ಸಾಹಿತಿ ಡಾ.ಪ್ರಧಾನ್‌ ಗುರುದತ್ತ ಮಾತನಾಡಿ, ಕೇವಲ 10 ತಿಂಗಳು 11 ದಿನಗಳ ಕಾಲ ಪ್ರಧಾನಮಂತ್ರಿಯಾಗಿದ್ದ ದೇವೇಗೌಡರು, ರಾಷ್ಟ್ರದ ಅನೇಕ ಜ್ವಲಂತ ಸಮಸ್ಯೆಗಳನ್ನು ನಿವಾರಿಸಿ ಸಾಧನೆ ಮಾಡಿದ್ದಾರೆ.

ಅವರೊಂದಿಗೆ ನಾನು ಮತ್ತು ಡಾ.ಸಿ.ನಾಗಣ್ಣ ಅವರು 40 ರಿಂದ 50 ಸಂದರ್ಶನ ಮಾಡಿ ಅವರ ಅಭಿಪ್ರಾಯಗಳಿಗೆ ಅಕ್ಷರ ರೂಪ ನೀಡಿದ್ದೇವೆ. ದೇವೇಗೌಡರು ಹೇಳುತ್ತಿದ್ದ ಒಂದೊಂದು ಮಾಹಿತಿಯಲ್ಲೂ ಖಚಿತತೆ ಇತ್ತು. ದಿನಾಂಕಗಳ ಸಹಿತ ವಿವರಿಸುತ್ತಿದ್ದರು.

ಅವರೊಬ್ಬ ಮಾನವ ಕಂಪ್ಯೂಟರ್‌ ಇದ್ದಂತೆ, ದೇವೇಗೌಡರು ಕೊಟ್ಟ ಮಾಹಿತಿಗಳನ್ನು ಧೂತವಾಸದಿಂದ ಖಚಿತಪಡಿಸಿಕೊಂಡೇ ಪ್ರಕಟಿಸಿದ್ದೇವೆ. ಇದರಲ್ಲಿ ನಮ್ಮದು ಅಳಿಲು ಸೇವೆ ಎಂದು ಹೇಳಿದರು. 24 ಅಧ್ಯಾಯವನ್ನು ಒಳಗೊಂಡ 400 ಪುಟದ ಈ ಗ್ರಂಥದಲ್ಲಿ ದೇವೇಗೌಡರು ತಮ್ಮ ಸಾಧನೆಯನ್ನು ಹೇಳಿಕೊಂಡಿದ್ದಾರೆಯೇ ಹೊರತು, ಯಾರ ಬಗ್ಗೆಯೂ ಆರೋಪ ಮಾಡಿಲ್ಲ ಎಂದರು. 

Advertisement

ದೋಷ ಸರಿಪಡಿಸಿ 2ನೇ ಆವೃತ್ತಿ: ಬೆಂಗಳೂರಿನಲ್ಲಿ ಮೊದಲ ಆವೃತ್ತಿ ಬಿಡುಗಡೆಯಾದ ಒಂದೇ ವಾರದಲ್ಲಿ 2 ಸಾವಿರ ಪ್ರತಿಗಳು ಮಾರಾಟವಾಗಿದೆ. ಹೀಗಾಗಿ ಮೊದಲ ಆವೃತ್ತಿಯಲ್ಲಿನ ಕೆಲ ಸಣ್ಣಪುಟ್ಟ ಮುದ್ರಣ ದೋಷಗಳನ್ನು ಸರಿಪಡಿಸಿ, ಪ್ರಧಾನಿಯಾಗಿ ಕರ್ನಾಟಕಕ್ಕೆ ಅವರ ಕೊಡುಗೆ ಎಂಬ ಅಧ್ಯಾಯವನ್ನು ಸೇರಿಸಿ 2ನೇ ಆವೃತ್ತಿ ಹೊರತಂದಿದ್ದೇವೆ ಎಂದರು. ಜೆಡಿಎಸ್‌ ನಗರ ಅಧ್ಯಕ್ಷ ಕೆ.ಟಿ.ಚೆಲುವೇಗೌಡ, ನಗರಪಾಲಿಕೆ ಸದಸ್ಯರಾದ ಆರ್‌.ಲಿಂಗಪ್ಪ, ಎಸ್‌.ಬಿ.ಎಂ.ಮಂಜು ಮೊದಲಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಸಾಧನೆಯ ಶಿಖರಾರೋಹಣ ಗ್ರಂಥವನ್ನು ಡಾ.ಪ್ರಧಾನ್‌ ಗುರುದತ್ತ ಮತ್ತು ಡಾ.ಸಿ.ನಾಗಣ್ಣ ಅವರೇ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯಲ್ಲಿ ಬರೆಯುತ್ತಿದ್ದು, ಮೂರು ತಿಂಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಾಗುವುದು. ಎಚ್‌.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಸಾಧನೆಯನ್ನು ದಾಖಲಿಸಲು ಬಹಳಷ್ಟು ಸಾಹಿತಿಗಳು ಮುಂದೆ ಬಂದಿದ್ದಾರೆ. ಆದರೆ, ಕುಮಾರಸ್ವಾಮಿ ಅವರಿಗೆ ಸಮಯ ಇಲ್ಲದಿರುವುದರಿಂದ ಆ ಕೆಲಸ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರ ಸಾಧನೆಯ ಪುಸ್ತಕವನ್ನೂ ಹೊರತರಲಾಗುವುದು.
-ಪ್ರೊ.ಕೆ.ಎಸ್‌.ರಂಗಪ್ಪ, ಜೆಡಿಎಸ್‌ ಮುಖಂಡರು

Advertisement

Udayavani is now on Telegram. Click here to join our channel and stay updated with the latest news.

Next