Advertisement

ಬಿಜೆಪಿ ಭಿನ್ನಮತ ಶಮನ: 19ಕ್ಕೆ ಸಭೆ ಕರೆದ ಪಕ್ಷಾಧ್ಯಕ್ಷ ಯಡಿಯೂರಪ್ಪ 

03:45 AM Jan 16, 2017 | |

ಬೆಂಗಳೂರು: ತಮ್ಮ ಕಾರ್ಯವೈಖರಿ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತಕ್ಕೆ ಪಕ್ಷದ ಕೆಲವು ನಿಷ್ಠಾವಂತರು ಬೆಂಬಲ ಸೂಚಿಸುತ್ತಿದ್ದಂತೆ ಅಸಮಾಧಾನ ಶಮನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮುಂದಾಗಿದ್ದು, ಇದಕ್ಕಾಗಿ ಜ. 19ಕ್ಕೆ ಸಭೆ ಕರೆದಿದ್ದಾರೆ.

Advertisement

ಸಭೆಗೆ ತಮ್ಮ ಮೇಲೆ ಅಸಮಾಧಾನಗೊಂಡವರಿಗೆ ಮುಕ್ತ ಆಹ್ವಾನ ನೀಡಿರುವ ಯಡಿಯೂರಪ್ಪ ಅವರು, ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವರ ಬೇಡಿಕೆಗಳನ್ನು ಆಲಿಸಲು ಮುಂದಾಗಿದ್ದಾರೆ. ಜತೆಗೆ ಅದಕ್ಕೆ ಪರಿಹಾರ ಒದಗಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ.

ಇದೇ ತಿಂಗಳ 21 ಮತ್ತು 22ರಂದು ಕಲಬುರಗಿಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ಅದಕ್ಕೆ ಮೊದಲು ಈಗ ಬಹಿರಂಗಗೊಂಡಿರುವ ಅಸಮಾಧಾನವನ್ನು ಸರಿಪಡಿಸಿ ಕಾರ್ಯಕಾರಿಣಿಯಲ್ಲಿ ಯಾವುದೇ ಗೊಂದಲವಾಗದೆ ನೋಡಿಕೊಳ್ಳುವ ಉದ್ದೇಶದಿಂದ ಜ. 19ರಂದು ಸಭೆ ಕರೆಯಲಾಗಿದೆ ಎಂದು ಹೇಳಲಾಗಿದೆ.

ಇದಕ್ಕೂ ಮುನ್ನ ಜ. 17ರಂದು (ಮಂಗಳವಾರ) ಪಕ್ಷದ ಮಾತೃ ಸಂಸ್ಥೆಯಾಗಿರುವ ಆರ್‌ಎಸ್‌ಎಸ್‌ನ ಅಡಿಯಲ್ಲಿ ಬರುವ ವಿವಿಧ ಸಂಘಟನೆಗಳ ಸಮನ್ವಯ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ವಿಚಾರ ಹಾಗೂ ಪದಾಧಿಕಾರಿಗಳ ನೇಮಕಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮತ್ತು ಕೆ.ಎಸ್‌.ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯದ ಬಗ್ಗೆಯೂ ಪ್ರಸ್ತಾಪವಾಗುವ ಸಾಧ್ಯತೆಯಿದೆ. ಒಂದು ವೇಳೆ ಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾದರೆ ಅದು ಪಕ್ಷದ ರಾಜ್ಯ ಕಾರ್ಯಕಾರಿಣಿಯಲ್ಲೂ ಚರ್ಚೆಗೆ ಬರುವ ಸಾಧ್ಯತೆ ಇದೆ. ಹೀಗಾಗಿ ಅದಕ್ಕೆ ಮುನ್ನವೇ ತಮ್ಮ ಕಾರ್ಯವೈಖರಿ ಬಗ್ಗೆ ಅಸಮಾಧಾನಗೊಂಡು ಬರೆದಿರುವ ಪತ್ರದ ವಿಚಾರವನ್ನು ಮುಕ್ತಾಯಗೊಳಿಸಲು ಯಡಿಯೂರಪ್ಪ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌ ಸೇರಿದಂತೆ ಇತರೆ ಶಾಸಕರು, ಮುಖಂಡರು ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರ ಬಹಿರಂಗವಾಗುತ್ತಿದ್ದಂತೆ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಬಿಜೆಪಿ ವಕ್ತಾರ ಗೋ.ಮಧುಸೂಧನ್‌, ಪತ್ರವು ಕಿಡಿಗೇಡಿಗಳ ಕೃತ್ಯವಾಗಿದೆ. ಈ ಪತ್ರದಲ್ಲಿ ಉಲ್ಲೇಖೀಸಲಾದ ಯಾವುದೇ ಪ್ರಮುಖರೂ ಪತ್ರಕ್ಕೆ ಸಹಿ ಮಾಡಿಲ್ಲ. ಅಲ್ಲದೇ ರಾಜ್ಯ ಅಧ್ಯಕ್ಷರಿಗೂ ಈ ಪತ್ರವನ್ನು ತಲುಪಿಸಿಲ್ಲ ಎಂದು ಹೇಳಿದ್ದು, ಅಸಮಾಧಾನಗೊಂಡವರನ್ನು ಮತ್ತಷ್ಟು ಕೆರಳಿಸಿದೆ.
ಈ ನಿಟ್ಟಿನಲ್ಲಿ ತಮಗೆ ಪತ್ರ ಬರೆದಿರುವರನ್ನು ಜ. 19ರ ಸಭೆಗೆ ಆಹ್ವಾನಿಸಿದ್ದು, ಅಲ್ಲಿ ಅವರು ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ರಾಜ್ಯ ಕಾರ್ಯಕಾರಿಣಿ ವೇಳೆಗೆ ಈ ಭಿನ್ನಮತಕ್ಕೆ ತೇಪೆ ಹಾಕಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

Advertisement

ತಮ್ಮ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ ಎಂಎಲ್‌ಸಿ ಭಾನುಪ್ರಕಾಶ್‌ ಸೇರಿದಂತೆ ಹಲವರು ಬರೆದಿರುವ ಪತ್ರ ತಮ್ಮ ಕೈಗೆ ಸಿಕ್ಕಿಲ್ಲ. ಆದರೂ ಪಕ್ಷದ ಮುಖಂಡರ ಅಸಮಾಧಾನ ಶಮನಕ್ಕೆ ಜ. 19ರಂದು ಬಿಜೆಪಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ. ಅಸಮಾಧಾನಗೊಂಡವರ ಬೇಡಿಕೆಗಳೇನು ಎಂಬುದನ್ನು ತಿಳಿದು ಸಮಸ್ಯೆ ಪರಿಹರಿಸಲಾಗುವುದು. ಪಕ್ಷದಿಂದ ಉಚ್ಚಾಟನೆ ಮಾಡಲಾಗಿರುವವರನ್ನು ಹೊರತುಪಡಿಸಿ ಮಿಕ್ಕ ಎಲ್ಲ ಅಸಮಾಧಾನಿಗಳೊಂದಿಗೆ ಕುಳಿತು ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು.
– ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next