Advertisement

ನೆಮ್ಮದಿ, ಘನತೆ ಅಷ್ಟೇ ಸಾಕು!

11:20 AM Sep 25, 2017 | Team Udayavani |

“ನೀರ್‌ ದೋಸೆ’ ನಂತರ ಜಗ್ಗೇಶ್‌ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವ “8 ಎಂಎಂ’ ಚಿತ್ರದ ಚಿತ್ರೀಕರಣ ಶುಕ್ರವಾರ ಪ್ರಾರಂಭವಾಗಿದ್ದುದೆ. ಈ ಚಿತ್ರವನ್ನು ಹರಿಕೃಷ್ಣ ಎನ್ನುವವರು ನಿರ್ದೇಶಿಸುತ್ತಿದ್ದು, ನಾರಾಯಣ ಸ್ವಾಮಿ ಇನ್ಫೆಂಟ್‌ ಪ್ರದೀಪ್‌, ಸಲೀಮ್‌ ಶಾ ನಿರ್ಮಾಪಕರು. ಚಿತ್ರಕ್ಕೆ ವಿನ್ಸೆಂಟ್‌ ಛಾಯಾಗ್ರಹಣ, ಜೂಡಾ ಸ್ಯಾಂಡಿ ಸಂಗೀತವಿದೆ.

Advertisement

ಈ ಹಿಂದೆ, ಇದು ತಮಿಳಿನ  “8 ತೊಟ್ಟಕ್ಕಲ್‌’ ಎಂಬ ಚಿತ್ರದ ರೀಮೇಕ್‌ ಎಂದು ಹೇಳಲಾಗಿತ್ತು. ಆದರೆ, ಚಿತ್ರತಂಡ ಮಾತ್ರ ಚಿತ್ರದ ಕಥೆಯ ಕುರಿತಾಗಿ ಯಾವೊಂದು ರಹಸ್ಯವನ್ನೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಜಗ್ಗೇಶ್‌ ಅವರೇ ಈ ಚಿತ್ರದ ಸ್ಫೂರ್ತಿ ಏನು ಎಂದು ಹೇಳಿಕೊಂಡಿದ್ದಾರೆ. ಅವರು ಹೇಳುವಂತೆ, “8 ಎಂಎಂ’ ಚಿತ್ರವು ತಮಿಳಿನ  “8 ತೊಟ್ಟಕ್ಕಲ್‌’ ಎಂಬ ಚಿತ್ರದ ರೀಮೇಕ್‌ ಚಿತ್ರವಲ್ಲವಂತೆ.

ಹಲವು ದಶಕಗಳ ಹಿಂದೆ ಬಂದ ಜಾಪನೀಸ್‌ ಚಿತ್ರ “ಸ್ಟ್ರೇ ಡಾಗ್ಸ್‌’ ಈ ಚಿತ್ರಕ್ಕೆ ಸ್ಫೂರ್ತಿಯಂತೆ. ಜಪಾನ್‌ನ ಜನಪ್ರಿಯ ನಿರ್ದೇಶಕ ಅಕಿರಾ ಕುರೋಸಾವಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದರು. ಆ ಚಿತ್ರದಿಂದ ಸ್ಫೂರ್ತಿ ಪಡೆದು, ಇದೀಗ “8 ಎಂಎಂ’ ಚಿತ್ರ ಮಾಡಲಾಗುತ್ತಿದೆ ಎಂದು ಸ್ವತಃ ಚಿತ್ರದ ನಾಯಕ ಜಗ್ಗೇಶ್‌ ಅವರು ಹೇಳಿಕೊಂಡಿದ್ದಾರೆ.

ಬೇಕಾಗಿರೋದು ಒಳ್ಳೆಯ ಪಾತ್ರ ಮಾತ್ರ: ಜಗ್ಗೇಶ್‌ ಹೇಳುವಂತೆ ಅವರಿಗೆ ಬೇಕಾಗಿರೋದು ಒಂದೇ. ಅದು ಒಳ್ಳೆಯ ಪಾತ್ರ. “ಈ ಹಿಂದೆ ಊಟಕ್ಕೆ, ಜೀವನಕ್ಕೆ, ಸ್ಪರ್ಧೆಗೆ ಅಂತೆಲ್ಲಾ ಸಿನಿಮಾ ಮಾಡಿಯಾಯ್ತು. ಈಗ ಸಂತೋಷಕ್ಕೆ, ಆತ್ಮತೃಪ್ತಿಗೆ ಸಿನಿಮಾ ಮಾಡುತ್ತಿದ್ದೇನೆ. ಸಿನಿಮಾ ಮಾಡೋಕೆ ತುಂಬಾ ಜನ ಬರುತ್ತಾರೆ. ಬರುವಾಗ ಅಣ್ಣ, ದೇವ್ರು ಅಂತ ಬರುತ್ತಾರೆ. ಚಿತ್ರ ಗೆಲ್ಲುತ್ತಿದ್ದಂತೆ ನಾನು ಮಾಯ. ಇದರಿಂದ  ಬಹಳ ಬೇಸರ ಆಗೋದು.

ಈ ಮಧ್ಯೆ ಒಂದು ಪರವಾಗಿಲ್ಲ ಎನ್ನುವಂತಹ ಸ್ಕ್ರಿಪ್ಟ್ ಬಂತು. ಆದರೆ, ಮಗ ಬೇಡ ಅಂದ. ನಿನಗೆ ಸೂಟ್‌ ಆಗಲ್ಲ ಅಂತ ಅರ್ಥ ಮಾಡಿಸಿದ. ಈ ಹಿಂದೆ ಆ ತರಹದ ಪಾತ್ರ ಮಾಡುತ್ತಿದ್ದೆ. ಈಗ ನೆಮ್ಮದಿ, ಘನತೆ ಬೇಕು. ಈ ಬಾರಿ ಆರಾಧನೆಗೆ ಮಂತ್ರಾಲಯಕ್ಕೆ ಹೋದಾಗ, ರಾಯರಲ್ಲಿ ಒಳ್ಳೆಯ ಪಾತ್ರ ಕೊಡಿ ಅಂತ ಬೇಡಿಕೊಂಡೆ. ಅದಾಗಿ ಸ್ವಲ್ಪ ದಿನಕ್ಕೇ ಈ ಹುಡುಗ ಬಂದ. ಕಥೆ ಕೇಳಿ ವೈಬ್ರೇಶನ್‌ ಆಯ್ತು. ಒಪ್ಪಿಕೊಂಡೆ’ ಎನ್ನುತ್ತಾರೆ ಅವರು.

Advertisement

ಚುನಾವಣೆ ಸ್ಪರ್ಧಿಸುವ ಯೋಚನೆ ಇಲ್ಲ: ಈ ಮಧ್ಯೆ ಮಾಗಡಿ ಪಾಂಡು ಒಂದು ಕಥೆ ಹೇಳಿದ್ದಾರಂತೆ. ಮರಾಠಿ ನಾಟಕದಿಂದ ಸ್ಫೂರ್ತಿ ಪಡೆದಿದೆ. ಆ ಚಿತ್ರದಲ್ಲಿ ಜಗ್ಗೇಶ್‌ ಅವರು ನಟಿಸುವ ಸಾಧ್ಯತೆ ಇದೆ. ಈ ಮಧ್ಯೆ ಚುನಾವಣೆ ಬೇರೆ ಇದೆ. ಆದರೆ, ಜಗ್ಗೇಶ್‌ ಅವರಿಗೆ ಚುನಾವಣೆ ಸ್ಪರ್ಧಿಸುವ ಇರಾದೆ ಇಲ್ಲ. “ನನಗೆ ಒಂದೇ ಕ್ಷೇತ್ರಕ್ಕೆ ಸೀಮಿತವಾಗುವುದಕ್ಕೆ ಇಷ್ಟ ಇಲ್ಲ.

ಓಡಾಡಿಕೊಂಡು ಒಂದಿಷ್ಟು ಒಳ್ಳೆಯ ಕೆಲಸ ಮಾಡುವುದಕ್ಕೆ ಆಸೆ. ಆದರೆ, ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೋ ಗೊತ್ತಿಲ್ಲ’ ಎನ್ನುತ್ತಾರೆ ಅವರು. ಹಾಗಾದರೆ, ಮುಂದೇನು ಎಂದರೆ, “ಸದ್ಯಕ್ಕೆ ಯಾವ ಯೋಚನೆ ಇಲ್ಲ. ಎದ್ದಾಗಲೇ ಬೆಳಿಗ್ಗೆ, ಮಲಗಿದಾಗಲೇ ರಾತ್ರಿ. ಆರಾಮಾಗಿ ಇದ್ದೀನಿ. ಒಳ್ಳೆಯ ಕಥೆ ಬಂದರೆ ಮಾಡುತ್ತೀನಿ. ಇಲ್ಲವಾದರೆ ಇಲ್ಲ. ಹೆಚ್ಚು ಖರ್ಚಿಲ್ಲ. ಒಳ್ಳೆಯ ಸಿನಿಮಾಗಳನ್ನು ಮಾಡುವುದಷ್ಟೇ ನನ್ನ ಉದ್ದೇಶ’ ಎನ್ನುತ್ತಾರೆ ಅವರು.

ಬೃಂದಾವನದ ಎದುರು ನಿದ್ದೆ: ಎಲ್ಲಾ ಸರಿ, ಗುರು ರಾಘವೇಂದ್ರ ಸ್ವಾಮಿಗಳ ದೊಡ್ಡ ಭಕ್ತ ಎಂದು ಗುರುತಿಸಿಕೊಂಡವರು ಜಗ್ಗೇಶ್‌. ರಾಘವೇಂದ್ರ ಸ್ವಾಮಿಗಳ ಕುರಿತ ಸಿನಿಮಾ ಯಾಕೆ ಮಾಡಬಾರದು ಎಂದರೆ, ಬೆಚ್ಚಿ ಬೀಳುತ್ತಾರೆ ಅವರು. “ಖಂಡಿತಾ ಆಗಲ್ಲ. ಅದಕ್ಕೆ ಪರಿಶುದ್ಧವಾಗಿರಬೇಕು’ ಎನ್ನುತ್ತಾರೆ ಅವರು.

ಅವರಿಗೆ ಬೇಸರವಾದಾಗಲೆಲ್ಲಾ ಮಂತ್ರಾಲಯಕ್ಕೆ ಹೋಗುತ್ತಾರಂತೆ. “ಅದೊಂಥರಾ ನಮ್ಮ ತವರು ಮನೆ ಇದ್ದಂತೆ. ನನಗೆ ಅಲ್ಲಿ ಒಳ್ಳೆಯ ಅವಕಾಶ ಕೊಟ್ಟಿದ್ದಾರೆ. ಬೃಂದಾವನದ ಎದುರು ಮಲಗೋಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆ ಅನುಭವ, ಅಲ್ಲಿ ಮಲಗಿದಾಗ ಆಗುವ ಆನಂದ ಹೇಳ್ಳೋದು ಕಷ್ಟ. ಬೆಳಿಗ್ಗೆ ಎದ್ದರೆ ಆಗುವ ಸಂತೋಷವೇ ಬೇರೆ’ ಎನ್ನುತ್ತಾರೆ ಜಗ್ಗೇಶ್‌.

Advertisement

Udayavani is now on Telegram. Click here to join our channel and stay updated with the latest news.

Next