Advertisement

ನಗರದಲ್ಲಿ ಮತ್ತೆ ಅಬ್ಬರಿಸಿದ ವರುಣ

11:54 AM May 14, 2018 | Team Udayavani |

ಬೆಂಗಳೂರು: ನಗರದಲ್ಲಿ ಶನಿವಾರ ಮತದಾನಕ್ಕೆ ವಿರಾಮ ನೀಡಿದಂತಿದ್ದ ವರುಣ, ಭಾನುವಾರ ಮತ್ತೆ ಅಬ್ಬರಿಸಿದ್ದಾನೆ. ಜೋರಾದ ಗಾಳಿಯೊಂದಿಗೆ ಆಲಿಕಲ್ಲು ಸಹಿತ ಸುರಿದ ಭಾರಿ ಮಳೆಗೆ ಹಲವೆಡೆ 15ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಯಿತು. 

Advertisement

ಭಾನುವಾರ ಬೆಳಗ್ಗೆಯಿಂದಲೇ ನಗರದ ಹಲವಾರು ಕಡೆಗಳಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ 10ಕ್ಕೂ ಹೆಚ್ಚು ಬೃಹತ್‌ ಮರಗಳು ಹಾಗೂ ಮರದ ಕೊಂಬೆಗಳು ಉರುಳಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯನಗರದ ಆರ್‌ಪಿಸಿ ಬಡಾವಣೆ, ಎಂ.ಕೆ.ಅಹಮದ್‌ ನಗರ, ಪೈಪ್‌ಲೈನ್‌ ರಸ್ತೆ, ಕೋರಮಂಗಲದ ಜ್ಯೋತಿನಿವಾಸ ಕಾಲೇಜು, ನಾಗರಬಾವಿ, ಪ್ರಸನ್ನ ಚಿತ್ರಮಂದಿರ, ಕೆ.ಪಿ.ಅಗ್ರಹಾರ, ರಿಚ್‌ಮಂಡ್‌ ಟೌನ್‌ ಸೇರಿದಂತೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಉಳಿದಂತೆ ಒಕಳಿಪುರ ಅಂಡರ್‌ಪಾಸ್‌, ಸುಜಾತ ಚಿತ್ರಮಂದಿರ, ಶಿವಾನಂದ ವೃತ್ತ ಸೇರಿದಂತೆ ಹಲವು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಸಮಸ್ಯೆ ಅನುಭವಿಸಿದರು. 

ಇದಲ್ಲದೆ ಪ್ರಮುಖ ರಸ್ತೆಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಆದರೆ, ಭಾನುವಾರವಾಗಿದ್ದರಿಂದ ಸಂಚಾರಕ್ಕೆ ಅಂತಹ ಸಮಸ್ಯೆ ಎದುರಾಗಲಿಲ್ಲ. ಈ ಮಧ್ಯೆ ಮಳೆ ಇನ್ನೂ ಎರಡು-ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.

ನಗರದ ನಾಗರಬಾವಿಯಲ್ಲಿ ಗರಿಷ್ಠ 50 ಮಿ.ಮೀ. ಮಳೆ ದಾಖಲಾಗಿದೆ. ಆರ್‌ಪಿಸಿ ಲೇಔಟ್‌ನಲ್ಲಿ ಆಲಿಕಲ್ಲು ಮಳೆಯಾಗಿದೆ. ಉಳಿದಂತೆ ಕೆಂಗೇರಿ 15.5, ಮಲ್ಲಸಂದ್ರ 19, ಅಗ್ರಹಾರ ದಾಸರಹಳ್ಳಿ 13, ಲಾಲ್‌ಬಾಗ್‌ 7, ಎಚ್‌ಎಸ್‌ಆರ್‌ ಲೇಔಟ್‌ 6, ಉತ್ತರಹಳ್ಳಿ 4, ಆರ್‌.ಆರ್‌. ನಗರ 3, ಕೋರಮಂಗಲ ಮತ್ತು ಬಸವನಗುಡಿ 1.5 ಮಿ.ಮೀ. ಮಳೆಯಾಗಿದೆ. ಇದಲ್ಲದೆ, ಮಲ್ಲೇಶ್ವರ, ರಾಜಾಜಿನಗರ, ಯಶವಂತಪುರ ಮತ್ತಿತರ ಕಡೆ ಸಾಧಾರಣ ಮಳೆ ದಾಖಲಾಗಿದೆ.

Advertisement

2 ಡಿಗ್ರಿ ತಗ್ಗಿದ ತಾಪಮಾನ: ಮೋಡ ಕವಿದ ವಾತಾವರಣ ಮತ್ತು ಸಂಜೆಯ ವೇಳೆ ಮಳೆ ಬೀಳುತ್ತಿರುವುದರಿಂದ ನಗರದಲ್ಲಿ ತಾಪಮಾನದಲ್ಲಿ ಇಳಿಕೆ ಕಂಡುಬಂದಿದೆ. ಭಾನುವಾರ ನಗರದಲ್ಲಿ 32 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದು, ಮಳೆಯಿಂದ 2 ಡಿಗ್ರಿಯಷ್ಟು ಕಡಿಮೆಯಾಗಿದೆ. ಸರಾಸರಿ ತಾಪಮಾನ 34 ಡಿಗ್ರಿಯಷ್ಟು ಇರಬೇಕಿತ್ತು.

Advertisement

Udayavani is now on Telegram. Click here to join our channel and stay updated with the latest news.

Next