Advertisement

ರಾಷ್ಟ್ರೀಯ ಪಕ್ಷ ತಿರಸ್ಕರಿಸಿ ಜೆಡಿಎಸ್‌ ಬೆಂಬಲಿಸಿ

05:31 PM May 05, 2022 | Team Udayavani |

ಚಿತ್ರದುರ್ಗ: ದೇಶಕ್ಕೆ ಮಾರಕವಾಗಿರುವ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಕಿತ್ತೂಗೆದು ಪ್ರಾದೇಶಿಕ ಪಕ್ಷವಾದ ಜೆಡಿಎಸ್‌ ಪಕ್ಷವನ್ನು ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ತರುವಂತೆ ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ. ಯಶೋಧರ ಮನವಿ ಮಾಡಿದರು.

Advertisement

ಜೆಡಿಎಸ್‌ ಪಕ್ಷದಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ರಥಯಾತ್ರೆ ಬುಧವಾರ ಚಿತ್ರದುರ್ಗಕ್ಕೆ ಆಗಮಿಸಿದ ವೇಳೆ ಒನಕೆ ಓಬವ್ವ ವೃತ್ತದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕೋಮುವಾದಿ ಬಿಜೆಪಿ ಧರ್ಮಗಳ ನಡುವೆ ಕೋಮು ದ್ವೇಷ ಬಿತ್ತುವ ಕೆಲಸ ಮಾಡುತ್ತಿದೆ. ಅವನತಿಯತ್ತ ಸಾಗುತ್ತಿರುವ ಕಾಂಗ್ರೆಸ್‌ ಇದರಲ್ಲಿ ಲಾಭ ಮಾಡಿಕೊಳ್ಳಲು ಹವಣಿಸುತ್ತಿದೆ. ಇಂತಹ ಪಕ್ಷಗಳನ್ನು ಅಧಿಕಾರದಿಂದ ದೂರವಿಟ್ಟು ಮತದಾರರೇ ಮಾಲೀಕರಾಗಿರುವ ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತಂದರೆ ನೀರಾವರಿ ಯೋಜನೆಗಳಿಗೆ ಒತ್ತು ನೀಡಲಾಗುವುದು ಎಂದರು.

ರೈತರ ಸಾಲ ಮನ್ನಾ ಮಾಡಿದ ಕೀರ್ತಿ ಜೆಡಿಎಸ್‌ ಪಕ್ಷಕ್ಕಿದೆ. ರಾಷ್ಟ್ರೀಯ ಪಕ್ಷಗಳಿಂದ ಆಗದಿರುವ ಮೇಕೆದಾಟು ವಿವಾದವನ್ನು ಬಗೆಹರಿಸುತ್ತೇವೆ. ಚಿತ್ರದುರ್ಗ ಜಿಲ್ಲೆಯನ್ನು ಸಂಪೂರ್ಣ ಜೆಡಿಎಸ್‌ಮಯ ಮಾಡಬೇಕು. ಈ ಮೂಲಕ ಹೊಸ ರಾಜಕೀಯ ಭಾಷ್ಯ ಬರೆಯಬೇಕಾಗಿದೆ. ಕಾರ್ಯಕರ್ತರು ಈಗಿನಿಂದಲೇ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲುವು ತಂದುಕೊಡಬೇಕು ಎಂದು ಕರೆ ನೀಡಿದರು.

ದೇವರು, ಧರ್ಮ, ಜಾತಿ ಹೆಸರಿನಲ್ಲಿ ಹಿಂದೂ ಮುಸಲ್ಮಾನರ ಭಾವನೆಗಳನ್ನು ಕೆರಳಿಸುತ್ತಿರುವ ಬಿಜೆಪಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಕೃಷಿಕರು, ಕೂಲಿ ಕಾರ್ಮಿಕರು, ಬಡವರು ತತ್ತರಿಸುವಂತೆ ಮಾಡಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಅಬ್ಬರಕ್ಕೆ ಜಗ್ಗುವುದಿಲ್ಲ. ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ, ವರ್ಗಾವಣೆ ದಂಧೆಯಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಶೇ.10 ರಷ್ಟು ಕಮಿಷನ್‌ ಪಡೆಯುತ್ತಿದೆ ಎಂದು ಆರೋಪ ಮಾಡಿದ್ದ ಬಿಜೆಪಿ ಅದನ್ನು ಶೇ. 40ಕ್ಕೆ ಹೆಚ್ಚಿಸಿದೆ. ಇಂತಹ ಭ್ರಷ್ಟ ಪಕ್ಷಗಳನ್ನು ಅಧಿಕಾರದಿಂದ ದೂರ ಇಡುವ ಕಾಲ ಸನ್ನಿಹಿತವಾಗಿದೆ ಎಂದರು.

ತುಂಗಾ, ಭದ್ರಾ, ವಿವಿ ಸಾಗರ, ಸುವರ್ಣಮುಖೀ ನದಿಯ ಜಲ ಸಂಗ್ರಹಿಸಿ ಚಿತ್ರದುರ್ಗಕ್ಕೆ ಆಗಮಿಸಿರುವ ಜನತಾ ಜಲಧಾರೆ ರಥಯಾತ್ರೆ ರಾಜ್ಯದ 15 ಕಡೆ ಸಂಚರಿಸಿ ಮೇ 13ರಂದು ಬೆಂಗಳೂರು ತಲುಪಲಿದೆ. ನಂತರ ಪಕ್ಷದ ಕಚೇರಿ ಇರುವ ಜೆ.ಪಿ. ಭವನದಲ್ಲಿ ಲಕ್ಷಾಂತರ ಕಾರ್ಯಕರ್ತರ ಸಮ್ಮುಖದಲ್ಲಿ ಬೃಹತ್‌ ಸಮಾವೇಶ ಜರುಗಲಿದೆ ಎಂದು ತಿಳಿಸಿದರು.

Advertisement

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್‌, ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್‌ ಮಾತನಾಡಿದರು. ಪಕ್ಷದ ಮುಖಂಡರಾದ ಎಂ.ಕೆ. ಹಟ್ಟಿ ವೀರಣ್ಣ, ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲಲಿತಾ ಕೃಷ್ಣಮೂರ್ತಿ, ಪಕ್ಷದ ಪದಾಧಿ ಕಾರಿಗಳಾದ ಗೀತಾ, ನಜೀರ್‌, ಓ. ಪ್ರತಾಪ್‌ ಜೋಗಿ, ಸಣ್ಣತಿಮ್ಮಪ್ಪ, ಪರಮೇಶ್ವರಪ್ಪ, ಗಣೇಶಮೂರ್ತಿ, ಹನುಮಂತರಾಯಪ್ಪ, ನಗರಸಭೆ ಸದಸ್ಯರಾದ ನಸ್ರುಲ್ಲಾ, ದೀಪು, ಮಾಜಿ ಸದಸ್ಯ ತಿಪ್ಪೇಸ್ವಾಮಿ, ಲಿಂಗಾ ನಾಯ್ಕ, ಕಾಟಿಹಳ್ಳಿ ಕರಿಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಹೊಳಲ್ಕೆರೆ ರಸ್ತೆಯ ಕನಕ ವೃತ್ತದಿಂದ ಆರಂಭವಾದ ಜನತಾ ಜಲಧಾರೆ ರಥಯಾತ್ರೆ ನಗರದ ವಿವಿಧ ರಸ್ತೆಗಳ ಮೂಲಕ ಒನಕೆ ಓಬವ್ವ ವೃತ್ತಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ವೀರಗಾಸೆ, ಸೋಮನ ಕುಣಿತ, ಗೊಂಬೆ ಕುಣಿತ, ಡೊಳ್ಳು, ಉರುಮೆ, ತಮಟೆ ಕಲಾವಿದರು ಭಾಗವಹಿಸಿದ್ದರು.

ಕಳೆದ ಏಳು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೀರಾವರಿಗೆ ಆದ್ಯತೆ ನೀಡಿಲ್ಲ. ಕಾಂಗ್ರೆಸ್‌ ಪಕ್ಷ ಹೇಳಹೆಸರಿಲ್ಲದಂತಾಗಿದೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ನೀರಾವರಿಗೆ ಒತ್ತು ನೀಡಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಇಲ್ಲದಂತೆ ಮಾಡಲಾಗುವುದು. – ಡಿ. ಯಶೋಧರ, ಜೆಡಿಎಸ್‌ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next