Advertisement
ಉಡುಪಿಯಿಂದ ತೀರ್ಥಹಳ್ಳಿ ನಡುವಣ ರಾಷ್ಟ್ರೀಯ ಹೆದ್ದಾರಿ 169ಎಯ ಮಣಿಪಾಲದ ಟೈಗರ್ ಸರ್ಕಲ್ ಬಳಿಯಿದ್ದ 7 ಮರಗಳಲ್ಲಿದ್ದ 200 ಹೆಚ್ಚು ನೀರು ಕಾಗೆಗಳು ರಸ್ತೆ ಕಾಮಗಾರಿಯಿಂದಾಗಿ ತಮ್ಮ ಗೂಡು ಕಳೆದುಕೊಂಡಿವೆ. ಈಗ ಈ ನೀರು ಕಾಗೆಗಳ ರಕ್ಷಣೆಗೆ ಮಣಿಪಾಲ್ ಬರ್ಡ್ಸ್ ಕ್ಲಬ್ ಮುಂದಾಗಿದೆ. ಡಾ|ವಿದ್ಯಾ ಪ್ರತಾಪ್, ಡಾ| ಪ್ರಸ್ಟಿನ್, ಡಾ| ರಾಘವೇಂದ್ರ ಮತ್ತು ತೇಜಸ್ವಿ ಅವರನ್ನು ಒಳಗೊಂಡ ಮಣಿಪಾಲ್ ಬರ್ಡ್ಸ್ ಕ್ಲಬ್ ನೆಲೆಕಳೆದುಕೊಂಡ ಮರಿಗಳು, ಗಾಯಗೊಂಡ ನೀರುಕಾಗೆಗಳನ್ನು ಮಣ್ಣಪಳ್ಳದಲ್ಲಿ ಪೋಷಿಸುತ್ತಿದ್ದಾರೆ.
ನತದೃಷ್ಟ ನೀರುಕಾಗೆಗಳ ಶುಶ್ರೂಷೆ, ಪುನರ್ವಸತಿಗೆ ಶ್ರಮಿಸುತ್ತಿರುವ ಈ ನಾಲ್ವರೂ ಮಣಿಪಾಲ ಕೆಎಂಸಿಯಲ್ಲಿ ವೈದ್ಯರು ಎಂಬುದು ಗಮನಾರ್ಹ. ನೀರಕಾಗೆಗಳ ಆರೈಕೆಯಲ್ಲಿ ಇವರಿಗೆ ಪಶುವೈದ್ಯ ಡಾ| ಪ್ರಶಾಂತ್ ಅವರು ನೆರವಾಗುತ್ತಿದ್ದಾರೆ. ಪ್ರತಿ ಮರಿ ಕಾಗೆಯ ಕಾಲಿಗೆ ನಂಬರ್ ಹೊಂದಿರುವ ಟ್ಯಾಗ್ ಅಳವಡಿಸಲಾಗಿದ್ದು, ಅವು ಎಷ್ಟರ ಮಟ್ಟಿಗೆ ಆಹಾರ ಸೇವಿಸುತ್ತಿವೆ, ಪ್ರತಿ ದಿನ ಎಷ್ಟರ ಮಟ್ಟಿಗೆ ಚೇತರಿಸಿಕೊಳ್ಳುತ್ತಿವೆ ಎಂಬುದರ ಮೇಲೆ ನಿಗಾ ಇರಿಸಲಾಗುತ್ತಿದೆ. ಇದರ ಆಧಾರದಲ್ಲಿಯೇ ಅವುಗಳಿಗೆ ಆಹಾರ ಮತ್ತು ಚಿಕಿತ್ಸೆಯಲ್ಲಿ ಮಾರ್ಪಾಟುಗಳನ್ನು ಮಾಡಿಕೊಳ್ಳಲಾಗುತ್ತಿದೆ.
Related Articles
ಮಣಿಪಾಲ್ ಬರ್ಡ್ಸ್ ಕ್ಲಬ್‌ನವರು ಹೇಳುವ ಪ್ರಕಾರ ಹೆದ್ದಾರಿ ಪ್ರತಿಯೊಬ್ಬರಿಗೂ ಬೇಕು. ಆದರೆ ರಸ್ತೆಗಳಿಗಾಗಿ ನೂರಾರು ವರ್ಷಗಳಿಂದ ಬೆಳೆದು ನಿಂತಿರುವ ಮರಗಳನ್ನು ಕಡಿಯುತ್ತಾ ಹೋದರೆ ಮುಂದೊಂದು ದಿನ ನಾವು ಅದಕ್ಕಾಗಿ ಪಶ್ಚಾತಾಪ ಪಡಬೇಕಾಗುತ್ತದೆ. ಟೈಗರ್ ಸರ್ಕಲ್ ಬಳಿ ಬೈಪಾಸ್ ರಸ್ತೆ ನಿರ್ಮಿಸುತ್ತಿದ್ದರೆ ಈ ಮರಗಳನ್ನು ಕಡಿಯುವುದನ್ನು ತಪ್ಪಿಸಬಹುದಿತ್ತು.
Advertisement
ಚೇತರಿಸಿಕೊಳ್ಳುತ್ತಿವೆಹತ್ತು ದಿನಗಳ ಹಿಂದೆಯಷ್ಟೇ ಸುಮಾರು 50 ನೀರು ಕಾಗೆಗಳನ್ನು ಮಣ್ಣಪಳ್ಳಕ್ಕೆ ತರಲಾಗಿದೆ. ತಂದ ಎರಡು ಮೂರು ದಿನಗಳಲ್ಲಿ ಕೆಲವು ಕಾಗೆಗಳು ಚೇತರಿಸಿಕೊಂಡು ಹಾರಿಹೋಗಿವೆ. ಇನ್ನುಳಿದ ಹತ್ತಿಪ್ಪತ್ತು ಮರಿಗಳಲ್ಲಿ ಕೆಲವು ಮೀನುಗಳನ್ನು ತಿಂದು ಬದುಕಿದ್ದರೆ, ಕೆಲವು ಮರಿಗಳು ಆಹಾರ ಜೀರ್ಣವಾಗದೇ ಸಾವನ್ನಪ್ಪಿವೆ. ಮಣ್ಣಪಳ್ಳದ ವಾತಾವರಣ ಈ ಪಕ್ಷಿಗಳಿಗೆ ಅನುಕೂಲಕರವಾಗಿದೆ. ಬೆಳಗ್ಗೆ ಮತ್ತು ಸಂಜೆ ಇವನ್ನು ನೋಡಲು ಬರುವ ಮಣಿಪಾಲ ಬರ್ಡ್ಸ್ ಗ್ರೂಪ್‌ನ ಸದಸ್ಯರು ಸ್ವಲ್ಪ ಹೊತ್ತು ಅವುಗಳನ್ನು ಗೂಡಿನಿಂದ ಹೊರಬಿಟ್ಟು ಬೇಕಾದ ಆಹಾರವನ್ನು ನೀಡುತ್ತಾರೆ. ಪಶುವೈದ್ಯ ಡಾ| ಪ್ರಶಾಂತ್ ಅವರು ಹೇಳುವಂತೆ ಇವುಗಳು ಸಂಪೂರ್ಣವಾಗಿ ಚೇತರಿಸಿಕೊಳ್ಳುವರೆಗೆ ಗೂಡಿನಲ್ಲಿಯೇ ಇಟ್ಟು ಆರೈಕೆ ಮಾಡಬೇಕಾಗಿದೆ. ಕರಿದ ತಿಂಡಿಗಳನ್ನು ಕೊಡಬೇಡಿ
ಮಣ್ಣಪಳ್ಳದಲ್ಲಿ ಬೆಳಗ್ಗೆ ಬರುವವರು ಇವಕ್ಕೆ ಆಹಾರ ಕೊಡುತ್ತಾರೆ. ಆದರೆ ಕೆಲವರು ಇದಕ್ಕೆ ಜೀರ್ಣಿಸಿಕೊಳ್ಳಲಾಗದ ಆಹಾರವನ್ನು ನೀಡುತ್ತಿದ್ದಾರೆ. ಇದರಿಂದ ಅವು ಸಾವನ್ನಪ್ಪುತ್ತಿವೆ. ಈ ಮರಿಗಳಿಗೆ ಆಹಾರ ಕೊಡುವುದೇ ಆದಲ್ಲಿ ಕರಿದ ತಿಂಡಿಗಳನ್ನು ಕೊಡಬೇಡಿ. ಅಲ್ಲದೆ ಅವುಗಳಿಗೆ ಅನಗತ್ಯ ತೊಂದರೆ ನೀಡುವುದನ್ನು ನಿಲ್ಲಿಸಿ.
– ಡಾ| ವಿದ್ಯಾ ಪ್ರತಾಪ್,
ಪ್ರೊಫೆಸರ್, ಒಬಿ ಮತ್ತು ಎಚ್‌ಆರ್ ವಿಭಾಗ, ಟ್ಯಾಪ್ಮಿ