Advertisement

ಈ ಶಾಲಾ ಮಕ್ಕಳಿಗೆ ಮರದ ಕೆಳಗೆ ನಿತ್ಯ ಬೋಧನೆ

10:12 AM Oct 23, 2021 | Team Udayavani |

ಹುಮನಾಬಾದ: ಪಟ್ಟಣದ ಥೇರ ಮೈದಾನದಲ್ಲಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಸೂಕ್ತ ಕೊಠಡಿಗಳು ಇಲ್ಲದ ಕಾರಣ ಶಾಲಾ ಆವರಣದಲ್ಲಿನ ಗಿಡಗಳ ಕೆಳಗೆ ವಿದ್ಯಾರ್ಥಿಗಳು ಪಾಠ ಕೇಳುವಂತಾಗಿದೆ.

Advertisement

ಗೌರ್ಮೆಂಟ್ ಜೂನಿಯರ್‌ ಕಾಲೇಜು ಎಂದು ಗುರುತಿಸಿಕೊಂಡ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಕಟ್ಟಡ ಕಳೆದ ಏಳು ದಶಕಗಳ ಹಿಂದೆ ನಿರ್ಮಾಣಗೊಂಡಿದ್ದು, ಈ ಹಿಂದೆ ನಡೆದ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಕಟ್ಟಡದ ಕೆಲ ಭಾಗ ತೆರವು ಮಾಡಲಾಗಿತ್ತು. ಅಲ್ಲದೆ, ವರ್ಷಗಳು ಕಳೆದಂತೆ ಕಟ್ಟಡ ಶಿಥಿಲಗೊಂಡು ಯಾವಾಗ ಬೀಳುತ್ತೋ ಎಂಬ ಆತಂಕ ಮೂಡಿಸಿತ್ತು.

ಆದರೆ, ಕಳೆದ ಒಂದು ತಿಂಗಳು ಹೊಸ ಕಟ್ಟಡ ಕಾಮಗಾರಿಗೆ ಅನುಮೋದನೆ ದೊರೆತ್ತಿರುವ ಕಾರಣ ಹಳೆ ಕಟ್ಟಡ ಸಂಪೂರ್ಣ ತೆರವು ಮಾಡಲಾಗಿದ್ದು, ಪರ್ಯಾಯ ವ್ಯವಸ್ಥೆಗಳು ಇಲ್ಲದ ಕಾರಣ ವಿದ್ಯಾರ್ಥಿಗಳು ಗಿಡದ ಕೆಳಗೆ, ಮೈದಾನದಲ್ಲಿ, ಕಟ್ಟಡದ ಕಟ್ಟೆ ಮೇಲೆ ಕುಳಿತು ಶಿಕ್ಷಕರು ಹೇಳುವ ಪಾಠ ಕೇಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕಳೆದ ಅನೇಕ ವರ್ಷಗಳಿಂದ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಗಳು ಒಂದೇ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಬೆಳಿಗ್ಗೆ ಅವಧಿ ಕಾಲೇಜು, ಮಧ್ಯಾಹ್ನ ಶಾಲೆ ನಡೆಯುತ್ತಿತ್ತು. ಕೆಲ ವರ್ಷಗಳ ಹಿಂದೆ ಪಿಯುಸಿ ಕಾಲೇಜಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣಗೊಂಡ ನಂತರ ಪೂರ್ಣ ಅವಧಿಯಲ್ಲಿ ಶಾಲಾ, ಕಾಲೇಜುಗಳು ನಡೆದಿದ್ದು, ಇದೀಗ ಕಟ್ಟಡ ತೆರವುಗೊಂಡ ಕಾರಣ ಪ್ರೌಢ ಶಾಲಾ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.

ಇದನ್ನೂ ಓದಿ: 29ರಿಂದ ಕರ್ನಾಟಕ ಸಾಂಸ್ಕೃತಿಕ ಉತ್ಸವ

Advertisement

ಸದ್ಯ ಶಾಲೆಯಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮಗಳಿದ್ದು, ಒಟ್ಟಾರೆ, 265ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಮೂರು ತರಗತಿಗಳ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪಾಠ ಮಾಡಲು ಮೂರು ಕೊಠಡಿಗಳು ಇಲ್ಲದ ಸ್ಥಿತಿ ಇಲ್ಲಿದೆ. ಪ.ಪೂ ಕಾಲೇಜಿನವರು ಎರಡು ಕೋಣೆಗಳು ನೀಡಿದ್ದರು ಕೂಡ ಹಳೆ ಕಟ್ಟಡದಲ್ಲಿನ ಮಹತ್ವದ ವಸ್ತುಗಳು ಇರಿಸಲು ಬಳಸಿಕೊಂಡಿದ್ದಾರೆ. ಅಡುಗೆ ಮಾಡುವ ಕೊಠಡಿಯಲ್ಲಿ ಆಹಾರ ಧಾನ್ಯಗಳ ಸಂಗ್ರಹ ಮಾಡಿಕೊಂಡಿದ್ದಾರೆ. ಮಧ್ಯಾಹ್ನ ಮಕ್ಕಳ ಊಟಕ್ಕೂ ಕೂಡ ಸೂಕ್ತ ಸ್ಥಳವಿಲ್ಲದಂತಾಗಿದ್ದು, ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಹಳೆ ಪದ್ಧತಿ ಮುಂದುವರಿಸಿ

ಈ ಹಿಂದೆ ಬೆಳಿಗ್ಗೆ ಕಾಲೇಜು ಮಧ್ಯಾಹ್ನ ಪ್ರೌಢಶಾಲೆ ನಡೆಯುತ್ತಿದ್ದು, ಅದೇ ಮಾದರಿಯಲ್ಲಿ ತಾತ್ಕಾಲಿಕವಾಗಿ ತರಗತಿಗಳು ನಡೆಸಬೇಕು ಎಂಬ ಅಭಿಪ್ರಾಯ ಕೆಲ ಶಿಕ್ಷಕರು ಹೇಳುತ್ತಿದ್ದಾರೆ. ಸದ್ಯ ಹೊಸ ಕಟ್ಟಡ ಕಾಮಗಾರಿ ಆಗುವರೆಗೂ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬೋಧನೆ ಮಾಡಬೇಕು ಎಂಬ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ. ಈ ಕುರಿತು ಈಗಾಗಲೇ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳು ಮಾತುಕತೆಗಳು ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹಳೆ ಕಟ್ಟಡ ತೆರವುಗೊಳ್ಳಿಸಿದ ಹಿನ್ನೆಲೆಯಲ್ಲಿ ಕೊಠಡಿಗಳ ಸಮಸ್ಯೆ ಉಂಟಾಗಿದೆ. ಈ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆದು ಹತ್ತಿರದಲ್ಲಿನ ಸರ್ಕಾರಿ ಕಟ್ಟಡಗಳಲ್ಲಿ ತರಗತಿ ನಡೆಸಲು ವ್ಯವಸ್ಥೆ ಮಾಡುವಂತೆ ಮನವರಿಕೆ ಮಾಡಲಾಗಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಉತ್ತಮವಾಗಿದ್ದು, ಆದಷ್ಟು ಬೇಗ ಕೋಣೆಗಳ ವ್ಯವಸ್ಥೆ ಮಾಡಿಸುವ ಭರವಸೆ ಮೇಲಧಿಕಾರಿಗಳು ನೀಡಿದ್ದಾರೆ. -ಜಿ.ಪರಮೇಶ್ವರ, ಮುಖ್ಯಶಿಕ್ಷಕ

-ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next