ಬೆಂಗಳೂರು: ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಹೊರಡಿಸಿದ್ದ ಖಾಸಗಿ ದೇವಾಲಯಗಳ ನೋಂದಣಿಗೆ ಸಂಬಂಧಿಸಿದ ಆದೇಶವನ್ನು ರಾಜ್ಯ ಸರ್ಕಾರ ತಡೆ ಹಿಡಿದಿದೆ.
ಹಿಂದೂ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿರುವ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಆದೇಶ ಹೊರಡಿಸಿದ್ದು, ಖಾಸಗಿ ದೇವಾಲಯಗಳ ನೋಂದಣಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲು ಆದೇಶ ನೀಡಿದ್ದಾರೆ.
2015ರ ಆ.3ರಂದು ಅಂದಿನ ಸರ್ಕಾರ 2011ರ ಧಾರ್ಮಿಕ ದತ್ತಿ ಕಾಯ್ದೆಯ ನಿಯಮ 53ರನ್ನು ಉಲ್ಲೇಖೀಸಿ ಖಾಸಗಿ ದೇವಾಲಯಗಳ ನೋಂದಣಿ ಪ್ರಕ್ರಿಯೆಗೆ ಆದೇಶ ಮಾಡಿತ್ತು. ಅಲ್ಲಿಂದ ಪ್ರತಿ ವರ್ಷವೂ ಇಲಾಖೆಯಿಂದ ಹೊರಡಿಸಿದ ಸುತ್ತೋಲೆಗಳು ಜಿಲ್ಲೆಯ ಸಹಾಯಕ ಆಯುಕ್ತರಿಂದ ಅನುಮೋದನೆಗೊಳ್ಳುತ್ತಿದ್ದವು. ಇದೀಗ ಭಕ್ತಾದಿಗಳ ಭಾವನೆಗಳಿಗೆ ಒತ್ತುಕೊಟ್ಟು ಕಾನೂನು ಕಾಯ್ದೆ ಸರ್ಕಾರದ ಆದೇಶಗಳ ನಡುವೆಯೂ ಖಾಸಗಿ ದೇವಸ್ಥಾನಗಳ ನೋಂದಣಿ ತಡೆ ಹಿಡಿಯಲು ಆದೇಶಿಸಲಾಗಿದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ರೂವಾರಿ ಸ್ವಪ್ನಾ ಸುರೇಶ್‌ಗೆ ರಾಜಕೀಯ ಪ್ರಭಾವ ಇಲ್ಲ: NIA
ಈ ವಿಷಯ ಗುರುವಾರ ಬೆಳಿಗ್ಗೆ ಬಿಜೆಪಿ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ವಿಧಾನಪರಿಷತ್ತಿನಲ್ಲಿ ಪ್ರಸ್ತಾಪಿಸಿದ್ದರು. ಅದಕ್ಕೆ ಉತ್ತರಿಸಿದ್ದ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ಸರ್ಕಾರ ಹೊಸದಾಗಿ ಸುತ್ತೋಲೆ ಅಥವಾ ಆದೇಶ ಹೊರಡಿಸಿಲ್ಲ. ಹಿಂದಿನ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ನೆನಪೋಲೆ ಕಳಿಸಿದ್ದು ಅಷ್ಟೇ. ಖಾಸಗಿ ದೇವಾಲಯಗಳನ್ನು ಸರ್ಕಾರದ ಅಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಉದ್ದೇಶ ನಮ್ಮ ಸರ್ಕಾರಕ್ಕಿಲ್ಲ. ಒಂದೊಮ್ಮೆ ಈ ಸುತ್ತೋಲೆ ಭಕ್ತರ ಭಾವನೆಗಳಿಗೆ ಧಕ್ಕೆ ತರುತ್ತಿದ್ದರೆ ಅದನ್ನು ತಡೆ ಹಿಡಿಯುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಅದರಂತೆ, ಗುರುವಾರ ಸಂಜೆ ಸರ್ಕಾರ ಆದೇಶ ಹೊರಡಿಸಿದೆ.