Advertisement

ಸೌಲಭ್ಯ ಪಡೆಯಲು ನೋಂದಣಿ ಕಡ್ಡಾಯ

09:23 AM Jan 25, 2019 | |

ಚಿಕ್ಕಮಗಳೂರು: ಕಟ್ಟಡ ಕಾರ್ಮಿಕರು ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಲು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದು ಸಹಾಯಕ ಕಾರ್ಮಿಕ ಆಯುಕ್ತ ಕೆ.ಜಿ. ಜಾನ್‌ಸನ್‌ ಹೇಳಿದರು. ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ ಗುರುವಾರ ನಗರದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ 3ನೇ ತಾಲೂಕು ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಸರ್ಕಾರದಿಂದ ಕಟ್ಟಡ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳು ದೊರೆಯುತ್ತವೆ. ಆದರೆ, ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ನೋಂದಣಿ ಮಾಡಿಸಿಕೊಳ್ಳುವುದು ಹಾಗೂ ಪ್ರತಿ ವರ್ಷ ನೋಂದಣಿ ನವೀಕರಿಸುವುದು ಅಗತ್ಯ ಎಂದರು.

ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರೂ ಸೇರಿದಂತೆ ಕಟ್ಟಡ ಕಾರ್ಮಿಕರ ಏಳ್ಗೆಗಾಗಿ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಿದ್ದು, ಈ ಮಂಡಳಿ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಅನೇಕ ಜನಪರ ಸೌಲಭ್ಯಗಳನ್ನು ಜಾರಿ ಮಾಡಿದೆ. ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ಇದುವರೆಗೂ 26 ಕಾರ್ಮಿಕ ಕಾಯ್ದೆಗಳನ್ನು ಜಾರಿ ಮಾಡಿ ವಿವಿಧ ಸೌಲಭ್ಯಗಳನ್ನು ಕಾರ್ಮಿಕರಿಗೆ ನೀಡುತ್ತಿದೆ. ಇದುವರೆಗೂ ಈ ಸೌಲಭ್ಯಗಳು ಕೇವಲ ಶೇ. 8ರಷ್ಟು ಕಾರ್ಮಿಕರನ್ನು ಮಾತ್ರ ತಲುಪಲು ಸಾಧ್ಯವಾಗಿತ್ತು ಎಂದು ಹೇಳಿದರು.

2006ರಲ್ಲಿ ಜಾರಿಗೆ ಬಂದ ಕಾಯ್ದೆಯಡಿಯಲ್ಲಿ ಕಟ್ಟಡ ಕಾರ್ಮಿಕರು ಮತ್ತು ಇತರ ನಿರ್ಮಾಣ ಕ್ಷೇತ್ರಗಳ ಅಸಂಘಟಿತ ಕಾರ್ಮಿಕರಿಗೂ ಈ ಸೌಲಭ್ಯ ವಿಸ್ತರಿಸಲು ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ಈ ಮೂಲಕ ಎಲ್ಲ ಕಾರ್ಮಿಕರು ಸರ್ಕಾರ ಒದಗಿಸುವ ಸೌಲಭ್ಯ ಪಡೆಯಬೇಕು. ಕಾರ್ಮಿಕರು ಸೂಕ್ತ ದಾಖಲಾತಿಗಳೊಂದಿಗೆ ಸದಸ್ಯತ್ವ ನೋಂದಣಿ ಮಾಡಿಸುವುದರಿಂದ ಈ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.

ಈವರೆಗೂ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿದ್ದ ಕಾರ್ಮಿಕರಿಗೆ ಪೇಪರ್‌ ಗುರುತಿನ ಚೀಟಿ ನೀಡಲಾಗುತ್ತಿತ್ತು. ಅದನ್ನು ಬದಲಿಸಿ ಸ್ಮಾರ್ಟ್‌ ಕಾರ್ಡ್‌ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಶೀಘ್ರದಲ್ಲಿಯೇ ಸದಸ್ಯರಿಗೆ ಸ್ಮಾರ್ಟ್‌ ಕಾರ್ಡ್‌ ಮಾದರಿ ಗುರುತಿನ ಚೀಟಿ ದೊರೆಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

Advertisement

ಜಿಲ್ಲೆಯಲ್ಲಿ ಹೆಚ್ಚು ಕಾರ್ಮಿಕರು ಇದ್ದರೂ ಈವರೆಗೂ 29 ಸಾವಿರ ಕಾರ್ಮಿಕರು ಮಾತ್ರ ನೋಂದಾಯಿಸಿಕೊಂಡಿದ್ದಾರೆ. ಬಾಕಿ ಕಾರ್ಮಿಕರು ಶೀಘ್ರ ನೋಂದಣಿಯಾಗುವುದರ ಮೂಲಕ ಸರ್ಕಾರಿ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಿ. ರಘು, ಕಟ್ಟಡ ಕಾರ್ಮಿಕರು ದೇಶದ ಆಸ್ತಿಯಾಗಿದ್ದಾರೆ. ಆದರೆ, ಸರ್ಕಾರಗಳು ಅವರನ್ನು ನಿರ್ಲಕ್ಷಿ ್ಯಸಿವೆ. ಯಾವುದೇ ಕಟ್ಟಡ ನಿರ್ಮಾಣವಾದರೂ ಶೇ. 1ನ್ನು ತೆರಿಗೆ ರೂಪದಲ್ಲಿ ಸರ್ಕಾರ ಕಟ್ಟಿಸಿಕೊಳ್ಳುತ್ತದೆ. ಆ ಹಣವನ್ನು ಕಾರ್ಮಿಕರಿಗೆ ವಿವಿಧ ರೀತಿಯ ಸವಲತ್ತುಗಳನ್ನು ಕೊಡಲು ಬಳಕೆ ಮಾಡಿಕೊಳ್ಳಬೇಕು. ಆದರೆ ಸರ್ಕಾರ ಈ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕಟ್ಟಡ ಕಾಮಿಕರು ಸಂಘಟಿತರಾಗದಿರುವುದು ಕಾರಣ ಎಂದರು.

ಕಾರ್ಮಿಕರ ಹಣ ಕಾರ್ಮಿಕರಿಗೇ ಧಕ್ಕುವಂತಾಗಲು ಬಲಿಷ್ಠ ಸಂಘಟನೆ ಅತ್ಯಗತ್ಯ. ನಗರದ ಪ್ರದೇಶಗಳಲ್ಲಿರುವ ಕಟ್ಟಡ ಕಾರ್ಮಿಕರು ನಿವೇಶನ ರಹಿತರಾಗಿದ್ದು, ಬಾಡಿಗೆ ಮನೆಗಳಲ್ಲಿ ವಾಸಿಸುವಂತಾಗಿದೆ. ಸರ್ಕಾರ ಇಂತಹ ಕಾರ್ಮಿಕರಿಗೆ ನಿವೇಶನಗಳೊಂದಿಗೆ ಸೌಕರ್ಯ ಒದಗಿಸಬೇಕೆಂದರು .

ಕಟ್ಟಡ ಮಾಲೀಕರು ಪಾವತಿಸುವ ಸೆಸ್‌ ಹಣವನ್ನು ನಿರ್ಮಾಣ ಕ್ಷೇತ್ರಗಳಲ್ಲಿನ ಎಲ್ಲ ಕಾರ್ಮಿಕರ ಕಲ್ಯಾಣಕ್ಕೆ ಮಾತ್ರ ಸರ್ಕಾರ ಬಳಸುವಂತಾಗಬೇಕು ಎಂದರು.

ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಕಟ್ಟಡ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ವಸಂತ್‌ಕುಮಾರ್‌, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್‌ಕುಮಾರ್‌ ಮತ್ತಿತರರು ಮಾತನಾಡಿದರು.

ಸಮಾರಂಭದ ಬಳಿಕ ಕಟ್ಟಡ ಕಾರ್ಮಿಕರ ಸಂಘದ ಪ್ರತಿನಿಧಿಗಳ ಸಭೆ ನಡೆಯಿತು. ಸಂಘದ ತರೀಕೆರೆ ತಾಲೂಕು ಅಧ್ಯಕ್ಷ ಶ್ರೀನಿವಾಸ್‌, ಮೂಡಿಗೆರೆ ಕಷ್ಣ, ಮಂಜೇಗೌಡ, ಕಟ್ಟಡ ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next