ಬಾಗಲಕೋಟೆ: ಪ್ರಸಕ್ತ ಸಾಲಿನ ಹಂಗಾಮಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್‌ಗೆ ಬಿಳಿ ಜೋಳ (ಹೈಬ್ರಿಡ್) 620 ರೂ. ಬಿಳಿಜೋಳ (ಮಾಲ್ದಂಡಿ) 2640 ರೂ.ಗಳಂತೆ ಖರೀದಿಸಲು ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ| ಕೆ.ರಾಜೇಂದ್ರ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಂದ ಪ್ರತಿ ಎಕರೆಗೆ 15 ಕ್ವಿಂಟಲ್‌ನಂತೆ ಗರಿಷ್ಠ 75 ಕ್ವಿಂಟಲ್ ಬಿಳಿ ಜೋಳವನ್ನು ಖರೀದಿಸಲಾಗುತ್ತಿದೆ. ಕೇಂದ್ರ ಸರಕಾರ ನಿಗದಿಪಡಿಸಿದ ಎಫ್‌ಎಕ್ಯೂ ಗುಣಮಟ್ಟದ ಮಾನದಂಡಗಳ ಆಧಾರ ಮೇಲೆ ಗ್ರೇಡರ್ ಗಳು ದೃಢೀಕರಿಸಿದ ಉತ್ಪನ್ನಗಳನ್ನು ಮಾತ್ರ ಖರೀದಿಸಲಾಗುತ್ತದೆ ಎಂದು ತಿಳಿಸಿದರು. ಸರಕಾರವು ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ ಗುರುತಿನ ಸಂಖ್ಯೆ ಮೂಲಕ ನೋಂದಾಯಿತ ರೈತರಿಂದ ಮಾತ್ರ ಖರೀದಿಸುವಂತೆ ಆದೇಶಿಸಿದ್ದಾರೆ.
ಈ ಗುರುತಿನ ಸಂಖ್ಯೆ ಹೊರತುಪಡಿಸಿ ಬೇರಾವುದೇ ದಾಖಲೆಗಳು ತರುವುದು ಅವಶ್ಯವಿರುವದಿಲ್ಲ. ನೋಂದಣಿಗೆ ಮಾ.14 ಕೊನೆಯ ದಿನವಾಗಿರುತ್ತದೆ. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಿಂದ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ 64131 ಹೆಕ್ಟೇರ್ ಪ್ರದಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಆರು ತಾಲೂಕು ಕೇಂದ್ರಗಳಲ್ಲಿ ಬಿಳಿಜೋಳ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ.ಬಾಗಲಕೋಟೆಯ ಎಪಿಎಂಸಿ ಆವರಣದಲ್ಲಿರುವ ಕೆಎಫ್‌ಸಿಎಸ್‌ಸಿ ಗೋದಾಮು, ಬಾದಾಮಿ ಎಪಿಎಂಸಿ ಆವರಣದಲ್ಲಿರುವ ಕೆಎಫ್‌ಸಿಎಸ್‌ಸಿ ಗೋದಾಮು, ಹುನಗುಂದ ಎಪಿಎಂಸಿ ಆವರಣದಲ್ಲಿರುವ ಕೆಎಫ್ ಸಿಎಸ್‌ಸಿ ಗೋದಾಮು, ಮುಧೋಳನ ನಿರಾಣಿ ಸಕ್ಕರೆ ಕಾರ್ಖಾನೆ ಎದುರಿಗೆ ಇರುವ ಎಸ್.ಎಚ್. ಶಹ ಗೋದಾಮು, ಬೀಳಗಿ ಬಸ್ ನಿಲ್ದಾಣದ ಹತ್ತಿರವಿರುವ ಟಿಎಪಿ ಗೋದಾಮು ಹಾಗೂ ಜಮಖಂಡಿ ಪಿಎಂಸಿಯಲ್ಲಿ ನೋಂದಣಿ ಹಾಗೂ ಖರೀದಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಪ್ರತಿಯೊಂದು ಖರೀದಿ ಕೇಂದ್ರಗಳಿಗೆ ತಲಾ ಒಬ್ಬರಂತೆ ಕೃಷಿ ಇಲಾಖೆಯಿಂದ ಗ್ರೇಡರ್‌ಗಳನ್ನು ನೇಮಿಸಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು. ಕೇಂದ್ರ ಸರಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ರೈತರ ಫ್ರುಟ್ಸ್ ಗುರುತಿನ ಸಂಖ್ಯೆಯ ನೋಂದಾವಣೆ ಕಡ್ಡಾಯವಾಗಿದ್ದು, ಅಂತಹ ರೈತರಿಂದ ಮಾತ್ರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಅವಕಾಶವಿರುತ್ತದೆ. ಖರೀದಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳಾದ ಅಂತರ್ ಜಾಲ ವ್ಯವಸ್ಥೆ, ಕಂಪ್ಯೂಟರ್, ಪ್ರಿಂಟರ್ ಮತ್ತು ಅದಕ್ಕೆ ಬೇಕಾಗುವ ಇನ್ನಿತರ ಅಗತ್ಯ ಉಪಕರಣಗಳು, ಲೇಖನ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಿದರು.
ಇದನ್ನೂ ಓದಿ :ನಡು ರಸೆಯಲ್ಲೇ ಕಂಬವಿದ್ದರೂ ರಸ್ತೆ ಕಾಮಗಾರಿ ನಡೆಯುತ್ತೆ !
ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಕೃಷಿ ಮಾರುಕಟ್ಟೆ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಎ. ಲಕ್ಕುಂಡಿ, ರಾಜ್ಯ ಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕಿ ಶಿಲ್ಪಾ ಸುರಪುರ, ಎಪಿಎಂಸಿ ಕಾರ್ಯದರ್ಶಿಗಳಾದ ಜಮಖಂಡಿಯ ಎಸ್.ಎನ್. ಪತ್ತಾರ, ಹುನಗುಂದದ ನದಾಫ್, ಬಾಗಲಕೋಟೆಯ ಉಣ್ಣಿಭಾವಿ, ಬಾದಾಮಿಯ ರಾಠೊಡ ಸೇರಿದಂತೆ ಇತರರಿದ್ದರು.