Advertisement

ಶಹರ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕ್ಷೀಣ

04:38 PM Jul 05, 2018 | Team Udayavani |

ಹುಬ್ಬಳ್ಳಿ: ಸರಕಾರಿ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಕುಸಿಯುತ್ತಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಹರ ಸರಕಾರಿ ಶಾಲೆಗಳಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಸುಮಾರು 163 ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗಿದೆ. ಇದಕ್ಕೆ ಆರ್‌ಟಿಇ ಸೌಲಭ್ಯವೂ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಕೆಲವೊಂದು ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಾಗಿರುವುದು ಆಶಾದಾಯ ಸ್ಥಿತಿ ಮೂಡಿಸಿದೆ.

Advertisement

ಆರ್‌ಟಿಇ ಯೋಜನೆಯಡಿ ಸೌಲಭ್ಯ ಪಡೆದು ಅನೇಕರು ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುತ್ತಿದ್ದು, ಇದರಲ್ಲಿ ಹೆಚ್ಚಿನವರು ಸರಕಾರಿ ಶಾಲೆ ಪ್ರವೇಶ ಪಡೆಯುವವರೆ ಎನ್ನಲಾಗುತ್ತಿದ್ದು, ಇದರಿಂದ ಸರಕಾರಿ ಶಾಲೆಗಳಲ್ಲಿನ ಮಕ್ಕಳ ಹಾಜರಾತಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಶಹರದಲ್ಲಿ ಬರುವ ಸುಮಾರು 88 ಶಾಲೆಗಳಲ್ಲಿ 2017-18ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾತಿ ಪಡೆದ ವಿದ್ಯಾರ್ಥಿಗಳ ಸಂಖ್ಯೆ 1987 ಇದ್ದರೆ, 2018-19ನೇ ಸಾಲಿನಲ್ಲಿ ಜೂನ್‌.15ರ ವರೆಗೆ 1824ಕ್ಕೆ ಬಂದು ನಿಂತಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳ ದಾಖಲಾತಿ ಇಳಿಮುಖವಾಗುತ್ತಿದೆ. ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸರಕಾರದಿಂದ ವಿವಿಧ ಯೋಜನೆಗಳು ಜಾರಿಯಾಗುತ್ತಿದ್ದರೂ ಕೂಡಾ, ದಾಖಲಾತಿಯಲ್ಲಿ ಏರಿಕೆಯಾಗುತ್ತಿಲ್ಲ. ಹಾಜರಾತಿ ಕೊರತೆಯಿಂದಾಗಿ ಹೆಚ್ಚುವರಿ ಶಿಕ್ಷಕರ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಅನೇಕ ಶಿಕ್ಷಕರನ್ನು ಬೇರೆ ಕಡೆ ವರ್ಗಾಯಿಸಲಾಗಿದೆ ಎನ್ನುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.

ಪ್ರವೇಶ ಹೆಚ್ಚಳದ ಶಾಲೆಗಳು: 88 ಶಾಲೆಗಳ ಪರವಾಗಿ 32 ಶಾಲೆಗಳಲ್ಲಿ ದಾಖಲಾತಿ ಹೆಚ್ಚಳವಿದ್ದು, 49 ಶಾಲೆಗಳಲ್ಲಿ ದಾಖಲಾತಿ ಕುಸಿತ ಕಂಡಿವೆ. ಇನ್ನುಳಿದ 7 ಶಾಲೆಗಳು ಯಥಾಸ್ಥಿತಿ ಕಾಯ್ದುಕೊಂಡಿವೆ. ಕಳೆದ ವರ್ಷ 2017-18ನೇ ಸಾಲಿನಲ್ಲಿ ನಾಗಶೆಟ್ಟಿಕೊಪ್ಪ ಎಚ್‌ ಪಿಎಸ್‌ ಶಾಲೆ ನಂ.15ರಲ್ಲಿ ಕಳೆದ 16 ವಿದ್ಯಾರ್ಥಿಗಳು ದಾಖಲಾತಿ ಪಡೆದರೆ, ಈ ವರ್ಷ 40 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ನಾರಾಯಣಸೋಫಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 31 ವಿದ್ಯಾರ್ಥಿಗಳು ದಾಖಲಾತಿ ಪಡೆದರೇ ಈ ವರ್ಷ 50 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಎಸ್‌.ಎಂ. ಕೃಷ್ಣಾ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷ 58 ವಿದ್ಯಾರ್ಥಿಗಳು ದಾಖಲಾತಿ ಪಡೆದರೇ, ಈ ವರ್ಷ 74 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ಸದಾಶಿವನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ರಣದಮ್ಮ ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ವರ್ಷಕ್ಕಿಂತ 13 ವಿದ್ಯಾರ್ಥಿಗಳ ಹೆಚ್ಚಿನ ದಾಖಲಾತಿಗಳಾಗಿವೆ. ದಾಖಲಾತಿ ಕುಸಿದಿರುವ ಶಾಲೆಗಳು: ಕಸಬಾಪೇಟೆ ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ ನಂ.3ರಲ್ಲಿ ಕಳೆದ ವರ್ಷ 97 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದರೇ, ಈ ವರ್ಷ 60 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಹೆಗ್ಗೇರಿ ಎಲ್‌ಪಿಎಸ್‌ ಶಾಲೆ ಕಳೆದ ವರ್ಷ 28 ವಿದ್ಯಾರ್ಥಿಗಳ ದಾಖಲಾತಿ ಪಡೆದಿದ್ದರೇ, ಈ ವರ್ಷ ಕೇವಲ 5 ವಿದ್ಯಾರ್ಥಿಗಳು ದಾಖಲಾತಿಯಾಗಿದೆ. ಕಸಬಾಪೇಟೆ ಸರಕಾರಿ ಗಂಡು ಮಕ್ಕಳ ಶಾಲೆ ನಂ.6ರಲ್ಲಿ ಕಳೆದ ವರ್ಷ 52 ವಿದ್ಯಾರ್ಥಿಗಳು ದಾಖಲಾತಿಯಾಗಿದ್ದರೇ, ಈ ವರ್ಷ 36 ಜನರ ದಾಖಲಾತಿಯಾಗಿದೆ. ಇದೇ ರೀತಿ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸುಮಾರು 49 ಶಾಲೆಗಳ ದಾಖಲಾತಿಯಲ್ಲಿ ಇಳಿಕೆಯಾಗಿದೆ.

ಪೂರ್ವ ಕ್ಷೇತ್ರದಲ್ಲಿ ಹೆಚ್ಚು ಸರಕಾರಿ ಶಾಲೆಗಳು: ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ವ್ಯಾಪ್ತಿಯಲ್ಲಿ ಒಟ್ಟು 88 ಶಾಲೆಗಳು ಬರುತ್ತಿದ್ದು ಇದರಲ್ಲಿ 75 ಶಾಲೆಗಳು ಪೂರ್ವ ಕ್ಷೇತ್ರದ ವ್ಯಾಪ್ತಿಯಲ್ಲಿ ಬಂದರೆ, ಇನ್ನುಳಿದ 13 ಶಾಲೆಗಳು ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಪೂರ್ವ ಕ್ಷೇತ್ರದಲ್ಲಿ ಖಾಸಗಿ ಶಾಲೆಗಳು ಬೆರಳೆಣಿಕೆಯಷ್ಟು ಇದ್ದು, ಸರಕಾರಿ ಶಾಲೆಗಳು ಹೆಚ್ಚಿದ್ದು ಅಲ್ಲಿ ಹೆಚ್ಚಿನ ಸೌಲಭ್ಯ ನೀಡಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಪೂರ್ವ ಕ್ಷೇತ್ರದಲ್ಲಿ ಶಾಸಕರ ಅನುದಾನದಲ್ಲಿ ಸುಮಾರು 48 ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ 3 ಶಾಲೆಗಳಿಗೆ ಸ್ಮಾರ್ಟ್‌ ಬೋರ್ಡ್‌ ವ್ಯವಸ್ಥೆ ಮಾಡಲಾಗಿದೆ.

Advertisement

ಆರ್‌ಟಿಇ ಇದ್ದರೂ ಕೂಡಾ ಶಹರ ವಿಭಾಗದಲ್ಲಿ ಹೆಚ್ಚಿನ ದಾಖಲಾತಿ ಮಾಡಲು ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಕ್ಷೇತ್ರದಲ್ಲಿ ಹಲವಾರು ಕಾರ್ಯಕ್ರಮ, ಜಾಥಾ ಸಹ ನಡೆಸಲಾಗಿದ್ದು, ಮಕ್ಕಳನ್ನು ಸರಕಾರಿ ಶಾಲೆಗಳಿಗೆ ದಾಖಲು ಮಾಡಿ ಎಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದಲ್ಲದೇ ಆರಂಭದಲ್ಲಿ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಬಿದ್ದು ಖಾಸಗಿ ಶಾಲೆಗೆ ಪ್ರವೇಶ ಪಡೆಯುವ ಬಡವರು ನಂತರದ ದಿನಗಳಲ್ಲಿ ಅಲ್ಲಿನ ಹೆಚ್ಚಿನ ಹೊರೆ ಅನುಭವಿಸಿ ಸರಕಾರಿ ಶಾಲೆಗಳಿಗೆ ಪ್ರವೇಶಕ್ಕೆ ಮುಂದಾಗುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳನ್ನು ಕೂಡಾ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಮಾಡಸಿಕೊಳ್ಳಲಾಗುತ್ತಿದೆ. 
 ಅಶೋಕ ಕುಂಬಾರ,
 ಪ್ರಭಾರಿ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ

„ಬಸವರಾಜ ಹೂಗಾರ 

Advertisement

Udayavani is now on Telegram. Click here to join our channel and stay updated with the latest news.

Next