ವಿಧಾನ ಪರಿಷತ್ತು: ಕೊರೊನಾ ವೈರಸ್ ಸೋಂಕು ಪತ್ತೆಗಾಗಿ ರಾಜ್ಯದ ಆಯ್ದ ಭಾಗಗಳಲ್ಲಿ ಪ್ರಾದೇಶಿಕ ಪರೀಕ್ಷಾ ಕೇಂದ್ರ ತೆರೆಯಲಾಗುವುದು ಎಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಸದನದಲ್ಲಿ ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಸ್ವಯಂ ಪ್ರೇರಿತವಾಗಿ ಮಾಹಿತಿ ನೀಡಿದ ಅವರು, ಪ್ರಸ್ತುತ ನಗರದ ರಾಜೀವ್‌ಗಾಂಧಿ ಎದೆರೋಗಗಳ ಸಂಸ್ಥೆಯ ಆವರಣ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಮಾತ್ರ ಈ ವೈರಸ್ ಸೋಂಕು ಪರೀಕ್ಷಾ ಕೇಂದ್ರಗಳಿವೆ.
ನಿಮ್ಹಾನ್ಸ್‌ನಲ್ಲೂ ಇದೇ ಮಾದರಿಯ ಪ್ರಯೋಗಾಲಯ ತೆರೆಯುವ ಬಗ್ಗೆ ಚರ್ಚೆ ನಡೆದಿದೆ. ಅಷ್ಟೇ ಅಲ್ಲ, ಪ್ರಾದೇಶಿಕ ಪರೀಕ್ಷಾ ಕೇಂದ್ರಗಳನ್ನೂ ಆರಂಭಿಸುವ ಉದ್ದೇಶವಿದೆ. ಈ ಸಂಬಂಧ ರಾಷ್ಟ್ರೀಯ ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣೆ ಮಾನ್ಯತಾ ಮಂಡಳಿ (ಎನ್‌ಎಬಿಎಚ್) ಜತೆಗೆ ಮಾತುಕತೆ ನಡೆಸಲಾಗುವುದು ಎಂದರು.
ಬೆಂಗ್ಳೂರಿಗೆ ಸೀಮಿತ ಆಗ್ಬೇಡಿ; ಸದಸ್ಯರು: ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿವಿಧ ಪಕ್ಷಗಳ ಸದಸ್ಯರು, ಜಾಗತಿಕ ಮಟ್ಟದಲ್ಲಿ ತೀವ್ರವಾಗಿ ವ್ಯಾಪಿ ಸುತ್ತಿರುವ ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರದ ಮುನ್ನೆಚ್ಚರಿಕೆ ಕ್ರಮಗಳು ಕೇವಲ ರಾಜ ಧಾನಿಗೆ ಸೀಮಿತವಾಗಬಾರದು. ದುಬೈನಿಂದ ಮಂಗಳೂರಿಗೆ, ಇಟಲಿಯಿಂದ ನೇರವಾಗಿ ಗೋವಾಕ್ಕೂ ಜನ ಬಂದಿಳಿಯುತ್ತಾರೆ. ಅಷ್ಟೇ ಅಲ್ಲ, ಈ ವೈರಸ್ ಸೋಂಕಿತ ಟೆಕ್ಕಿ ನೆಲೆಸಿರುವ ತೆಲಂಗಾಣ ರಾಯಚೂರು, ಬೀದರ್ ಸಮೀಪದಲ್ಲಿವೆ.
ಅತ್ತ ಕಡೆಗೂ ಗಮನಹರಿಸಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರಾದೇಶಿಕ ಪರೀಕ್ಷಾ ಕೇಂದ್ರಗಳನ್ನು ತೆರೆಯುವ ಉದ್ದೇಶ ಇದೆ ಎಂದರು. ರಕ್ಷಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಮಾಸ್ಕ್ಗಳ ಕೊರತೆಯಿಲ್ಲ. ಇನ್ನೂ ಆರು ತಿಂಗಳಿಗಾಗುವಷ್ಟು ಮುಖಗವಸು ಮತ್ತು ಔಷಧಿಗಳಿಗೆ ಮುಂಚಿತ ವಾಗಿಯೇ ತಯಾರಕ ಕಂಪನಿಗಳಿಗೆ ಬೇಡಿಕೆ ಇಡಲಾಗಿದೆ ಎಂದು ಹೇಳಿದರು.
ಪ್ರಯಾಣಿಕರ ತಪಾಸಣೆ: ವಿದೇಶಗಳಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರತಿಯೊಬ್ಬ ಪ್ರಯಾಣಿಕರನ್ನೂ ಇನ್ಮುಂದೆ ತಪಾಸಣೆಗೊಳ ಪಡಿಸಲಾಗುವುದು ಎಂದು ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಈಗಾಗಲೇ ವಿಮಾನ ನಿಲ್ದಾಣದಲ್ಲಿ ಬಂದಿಳಿದ 39,391 ಪ್ರಯಾಣಿ ಕರನ್ನು ತಪಾಸಣೆಗೊಳಪಡಿಸಲಾಗಿದೆ. ಅದರಲ್ಲಿ ಬಾಧಿತ 11 ದೇಶಗಳಲ್ಲಿ ಪ್ರವಾಸ ಕೈಗೊಂಡಿರುವ 468 ಪ್ರಯಾಣಿಕರನ್ನು ಗುರುತಿಸಿ, ಅವರ ಸರ್ವೇಕ್ಷಣೆ ನಡೆಸಿ, ಮನೆಗಳಲ್ಲಿ ಪ್ರತ್ಯೇಕವಾಗಿರಿ ಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಯಾವುದೇ ದೇಶಗಳಿಂದ ಇಲ್ಲಿಗೆ ಬಂದಿಳಿಯುವವರ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದರು.